Site icon Vistara News

Karnataka Elections 2023 : ಪಕ್ಷೇತರನಾಗಿ ನಿಂತರೂ 12000 ಲೀಡಲ್ಲಿ ಗೆಲ್ತೇನೆ, ಆದರೆ ಹಾಗೆ ಮಾಡಲ್ಲ; ತಣ್ಣಗಾದ ರಾಮದಾಸ್‌

SA Ramadas

#image_title

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಿಕೆಟ್‌ ಮಿಸ್‌ ಮಾಡಿಕೊಂಡು ಭಾರಿ ನೋವು ಅನುಭವಿಸಿದ್ದ, ಆಕ್ರೋಶದಿಂದ ಮಾತನಾಡಿದ್ದ ಹಾಲಿ ಶಾಸಕ ಎಸ್‌. ರಾಮದಾಸ್‌ ಅವರು ತಣ್ಣಗಾಗಿದ್ದಾರೆ. ಮಂಗಳವಾರ ಸಂಜೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಮನೆಯಲ್ಲಿ ಅಭಿಮಾನಿಗಳ, ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆ ಮಾಡಬಾರದು ಎಂದು ತೀರ್ಮಾನಿಸಿದ್ದೇನೆ, ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಪ್ರಕಟಿಸಿದರು.

ಕೃಷ್ಣರಾಜ ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದು, ಎರಡು ಬಾರಿ ಸೋತಿದ್ದ ಎಸ್‌.ಎ ರಾಮದಾಸ್‌ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನಿರಾಕರಿಸಿತ್ತು. ಆವರ ಬದಲಿಗೆ ಬಿಜೆಪಿಯ ಮೈಸೂರು ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ಅವರಿಗೆ ಮಣೆ ಹಾಕಿತ್ತು. ಈ ಘೋಷಣೆಯಿಂದ ಒಮ್ಮೆಲೇ ಹೌಹಾರಿದ್ದ ರಾಮದಾಸ್‌ ಅವರು ಮುಂದೇನು ಎನ್ನುವ ಬಗ್ಗೆ ಮಂಗಳವಾರ ಘೋಷಿಸುವುದಾಗಿ ಹೇಳಿದ್ದರು. ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀವತ್ಸ, ಸಂಸದ ಪ್ರತಾಪಸಿಂಹ ಅವರು ತಮ್ಮ ಮನೆಗೆ ಬಂದರೂ ಅವರನ್ನು ಒಳಗೆ ಬಿಡದೆ ಹಿಂದೆ ಕಳುಹಿಸಿದ್ದರು.

ಬಿಜೆಪಿಯ ಕೆಲವು ನಾಯಕರ ವಿರುದ್ಧ ಆಕ್ರೋಶ ಮಾತನಾಡಿದ್ದ ಅವರು ಬುಧವಾರ ಸಂಜೆ ಮನೆಯಲ್ಲೇ ಅಭಿಮಾನಿಗಳ ಸಭೆ ನಡೆಸಿದರು. ಈ ಸಭೆಯಲ್ಲಿ ಅವರು ಕಾಂಗ್ರೆಸ್‌ ಇಲ್ಲವೇ ಜೆಡಿಎಸ್‌ ಸೇರುವ, ಪಕ್ಷೇತರನಾಗಿ ಕಣಕ್ಕಿಳಿಯುವ ಇಲ್ಲವೇ ತಟಸ್ಥನಾಗುವ ಆಯ್ಕೆಗಳಲ್ಲಿ ಒಂದನ್ನು ಪ್ರಕಟಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಈ ಸಭೆಯಲ್ಲಿ ರಾಮದಾಸ್‌ ಅವರು ಒಂದಿಷ್ಟು ಭಾವುಕವಾಗಿ ಮಾತನಾಡಿದರು. ಬಿಜೆಪಿಯನ್ನು ಒಂದಿಷ್ಟು ತರಾಟೆಗೂ ತೆಗೆದುಕೊಂಡರು.

ನಾನು ಮೆರಿಟ್‌ ಸ್ಟೂಡೆಂಟ್‌, ಹಾಗಾಗಿ ಮಂತ್ರಿ ಆಗಲಿಲ್ಲ

ʻʻಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಮೆರಿಟ್ ಸೀಟ್, ಪೇಮೆಂಟ್ ಸೀಟ್ ಇದೆ. ನಿಮ್ಮ ರಾಮದಾಸ್ ಮಂತ್ರಿ ಆಗುತ್ತಾನೆ ಅಂತ ಅಂದುಕೊಂಡಿದ್ದಿರಿ. ಆದರೆ ನಾನು ಮಂತ್ರಿ ಆಗಲಿಲ್ಲ. ಆಗ ಮೆರಿಟ್ ಸೀಟ್, ಪೇಮೆಂಟ್ ಸೀಟ್ ಎರಡೂ ಇತ್ತು. ನಾನು ಮೆರಿಟ್ ಸ್ಟೂಡೆಂಟ್. ಹೀಗಾಗಿ ಮಂತ್ರಿ ಆಗಲಿಲ್ಲʼʼ ಎಂದು ಹೇಳಿದರು.

ʻʻಕೃಷ್ಣರಾಜ ಕ್ಷೇತ್ರದಲ್ಲಿ ಪೇಜ್ ಪ್ರಮುಖ್, ಬೂತ್ ಏಜೆಂಟ್ ನೇಮಕ ಮಾಡಿದ ದೇಶದ ಏಕೈಕ ಕ್ಷೇತ್ರ. ಕ್ಷೇತ್ರದ ಸಂಘಟನೆ ದೇಶಕ್ಕೆ ಮಾದರಿ ಆಗಿದೆ. ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆʼʼ ಎಂದು ಹೇಳಿದರು.

ಮೋದಿ ಪ್ರೀತಿಯೇ ದೊಡ್ಡದು ಎಂದ ರಾಮದಾಸ್‌

ʻʻಶಾಸಕನಾಗುವುದಕ್ಕಿಂತ ಮೋದಿ ಅಂಥವರ ಪ್ರೀತಿ ಮುಖ್ಯ. 7 ಸಾವಿರ ಶಾಸಕರಲ್ಲಿ ಮೋದಿ ನನಗೆ ಮಾತ್ರ ಬೆನ್ನು ತಟ್ಟಿದ್ದಾರೆʼʼ ಎಂದು ಹೆಮ್ಮೆಯಿಂದ ಹೇಳಿದರು ರಾಮದಾಸ್‌.

ʻʻನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದರೆ 10ರಿಂದ 12 ಸಾವಿರದಲ್ಲಿ ಗೆಲ್ಲುತ್ತೇನೆ. ಆದರೆ ನನಗೆ ಮಹಾನ್ ನಾಯಕನ‌ ಜವಾಬ್ದಾರಿ ಇದೆ. ನಿಮ್ಮ ಶಾಸಕ ಇದುವರೆಗೂ ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೂ ಹಲವು ಆಪಾದನೆಗಳು ಬಂದವು. ಅದಕ್ಕೆ ಕಾಲವೇ ಉತ್ತರ ನೀಡುತ್ತದೆ. ಯಾವತ್ತು ಹುಟ್ಟುತ್ತಿವೋ ಯಾವತ್ತೋ ಸಾಯುತ್ತಿವೋ ಗೊತ್ತಿಲ್ಲ. ನನಗೆ ಮುಖ್ಯ ತಾಯಿ‌ ಭಾರತಾಂಬೆ. ಇಡೀ ದೇಶ ನಮ್ಮ ರಾಜ್ಯದ ಕಡೆ ನೋಡುತ್ತಿದೆ. ನಿಮ್ಮ ಶಾಸಕ‌ ನಿಮ್ಮ ಜತೆಯೇ ಇರುತ್ತೇನೆʼʼ ಎಂದು ಶಾಸಕ ಎಸ್ ಎ ರಾಮದಾಸ್ ಸ್ಪಷ್ಟನೆ ನೀಡಿದರು. ಅಂತಿಮವಾಗಿ

ಅಲ್ಲಿಗೆ ಅವರು ಪಕ್ಷದಲ್ಲೇ ಉಳಿಯುವ ತೀರ್ಮಾನ ಪ್ರಕಟಿಸಿದರು.

ಇದನ್ನೂ ಓದಿ : Karnataka Congress: ರಾಮದಾಸ್‌ಗೆ ಕಾಂಗ್ರೆಸ್‌ ಆಹ್ವಾನ: ಶೆಟ್ಟರ್‌‌, ಸವದಿ ಬಂದ ನಂತರ 9 ಸ್ಥಾನ ಹೆಚ್ಚಾಗಿದೆ ಎಂದ ಡಿ.ಕೆ. ಶಿವಕುಮಾರ್

Exit mobile version