ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, 40 ವರ್ಷಗಳ ಕಾಲ ಬಿಜೆಪಿಯಲ್ಲಿ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿ ಕಕ್ಕಾಬಿಕ್ಕಿಯಾಗಿದೆ. ಇದರಿಂದ ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮಾತ್ರವಲ್ಲ, ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಆತಂಕ ಅದಕ್ಕೆ ಕಾಡಿದೆ. ಹೀಗಾಗಿ ಈ ಭಾಗದಲ್ಲಿ ಸೃಷ್ಟಿಯಾಗಿರುವ ನೇತ್ಯಾತ್ಮಕ ಪರಿಣಾಮಗಳನ್ನು ಹೋಗಲಾಡಿಸಿ ಪಕ್ಷದಲ್ಲಿ ಧೈರ್ಯ ತುಂಬುವುದಕ್ಕಾಗಿ, ಎಲ್ಲ ಮುನಿಸುಗಳನ್ನು ಶಮನ ಮಾಡುವುದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಎಂಟ್ರಿ ಕೊಡುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆ ಆಗುವುದರಿಂದ ಆಗಬಹುದಾದ ಸಂಭಾವ್ಯ ಹೊಡೆತಗಳ ಹೈಕಮಾಂಡ್‌ಗೆ ವಿವರಣೆ ನೀಡಿರುವ ಸ್ಥಳೀಯ ಕಮಲ ನಾಯಕರು ಇದನ್ನು ಆದಷ್ಟು ಬೇಗ ಹೋಗಲಾಡಿಸಬೇಕು ಎಂದು ಒತ್ತಾಯಿಸಿದ್ದರು. ಅದರಲ್ಲೂ ಮುಖ್ಯವಾಗಿ ಪಕ್ಷ ಲಿಂಗಾಯತ ನಾಯಕರ ಮೇಲೆ ಪ್ರಹಾರ ಮಾಡುತ್ತಿದೆ ಎಂಬ ಕಾಂಗ್ರೆಸ್ ವ್ಯಾಖ್ಯಾನಕ್ಕೆ ಜನರು ಮಾರುಹೋಗುವ ಅಪಾಯವಿರುವುದರಿಂದ ತುರ್ತಾರಿ ಉಪಶಮನ ಕಾರ್ಯಗಳು ಆಗಬೇಕಾಗಿವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಅದರಂತೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಮಂಗಳವಾರ ಸಂಜೆ ಹುಬ್ಬಳ್ಳಿಗೆ ಬರುತ್ತಿದ್ದಾರೆ.
ಮಂಗಳವಾರ ಸಂಜೆ ಆಗಮಿಸುವ ಅವರು ಬುಧವಾರವೂ ಹುಬ್ಬಳ್ಳಿಯಲ್ಲೇ ಬೀಡುಬಿಡಲಿದ್ದಾರೆ. ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ನಡ್ಡಾ ಅವರು ಪ್ರಚಾರವನ್ನೂ ನಡೆಸುತ್ತಾರೆ.
ಶೆಟ್ಟರ್ ಜೊತೆ ಕೈಜೋಡಿಸದಂತೆ ಮನವಿ
ಜಗದೀಶ್ ಶೆಟ್ಟರ್ ಅವರಿಗೆ ಬೆಂಬಲವಾಗಿ ಹಲವು ಪಾಲಿಕೆ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಕೆಲವರನ್ನು ಆಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ, ಶೆಟ್ಟರ್ ಜತೆ ಯಾರೂ ಕೈ ಜೋಡಿಸಬಾರದೆಂದು ಎಚ್ಚರಿಕೆ ಕೊಡಲು ಪಕ್ಷದ ಪದಾಧಿಕಾರಿಗಳು ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಕಾರ್ಯಕರ್ತರ ಜೊತೆಗೆ ನಡ್ಡಾ ಅವರೂ ಸಂವಾದ ನಡೆಸಲಿದ್ದಾರೆ.
ಬುಧವಾರದಂದು ನಡ್ಡಾ ಅವರು ಮೂರು ಸಾವಿರ ಮಠ, ಸಿದ್ದಾರೂಡರ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಇದು ಲಿಂಗಾಯತ ಮತಗಳು ಕೈತಪ್ಪಿ ಹೋಗದಂತೆ ಮಾಡುವ ಪ್ರಯತ್ನದ ಭಾಗ ಎನ್ನಲಾಗಿದೆ.
ಮಂಗಳವಾರ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ಪ್ರಬುದ್ಧರ ಸಭೆಯನ್ನು ಆಯೋಜಿಸಲಾಗಿದೆ. 800 ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ನಂತರ ಹುಬ್ಬಳ್ಳಿಯಲ್ಲಿ ಧಾರವಾಡ ವಿಭಾಗದ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆ ಇದೆ.
ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಅದರಲ್ಲೂ ನಡ್ಡಾ ಅವರು ಭಾಗವಹಿಸಲಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟು ಹೋಗಿರುವ ಪರಿಣಾಮ ಎಲ್ಲೂ ಕಾಣಿಸದಂತೆ ಬಿಜೆಪಿ ಪ್ರಯತ್ನ ಪಡುತ್ತಿದೆ. ಈಗಾಗಲೇ ಧಾರವಾಡ ಸೆಂಟ್ರಲ್‌ಗೆ ಪ್ರಭಾವಿ ನಾಯಕ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.
ಇದನ್ನೂ ಓದಿ : ನನ್ನನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ, ನಡೆಸಿಕೊಂಡ ರೀತಿಯಿಂದ ನೊಂದು ಬಿಜೆಪಿ ತೊರೆಯುತ್ತಿದ್ದೇನೆ: ಜಗದೀಶ ಶೆಟ್ಟರ್