Site icon Vistara News

Karnataka Elections : ಲಿಂಗಾಯತರನ್ನು ಬಿಟ್ಟೇ ಪಕ್ಷ ಕಟ್ಟಬೇಕು ಎಂದು ಬಿಜೆಪಿಯಲ್ಲಿ ಚರ್ಚೆ: ಲಕ್ಷ್ಮಣ್‌ ಸ್ಫೋಟಕ ಹೇಳಿಕೆ

M Laxman BL santhosh

#image_title

ಮೈಸೂರು: ʻʻಲಿಂಗಾಯತರನ್ನು ಹೊರತುಪಡಿಸಿ ಪಕ್ಷ ಕಟ್ಟಬೇಕು ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಜೆಂಡಾ. ಈ ಬಗ್ಗೆ ಮೈಸೂರಿನ ಹೋಟೆಲ್ ವೊಂದರಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಮಾತನಾಡಿದ್ದಾರೆʼʼ ಎಂದು ಕಾಂಗ್ರೆಸ್‌ ಪಕ್ಷದ ವಕ್ತಾರ ಎಂ. ಲಕ್ಷ್ಮಣ್‌ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ʻʻಲಿಂಗಾಯತರನ್ನು ಹೊರತುಪಡಿಸಿ ಪಕ್ಷ ಕಟ್ಟಬೇಕು. ಲಿಂಗಾಯತರು, ಬಿಎಸ್ ವೈ ಹಿಡಿತದಿಂದ ಪಕ್ಷ ಹೊರ ಬರಬೇಕು ಎಂದು ಚರ್ಚೆಯಾಗಿದೆ. ಸಂತೋಷ್‌ ಅವರು ಈ ವಿಚಾರವನ್ನು ಮಾತನಾಡಿರುವ ಬಗ್ಗೆ ಅವರದೇ ಪಕ್ಷದವರು ವಿಡಿಯೊ ಮಾಡಿದ್ದಾರೆʼʼ ಎಂದು ಹೇಳಿರುವ ಲಕ್ಷ್ಮಣ್‌, ʻʻಈ ಆಧಾರದ ಮೇಲೆಯೇ ಸಿ.ಟಿ ರವಿ ಅವರು ಲಿಂಗಾಯತರ ಮತ ಬೇಡ ಎಂಬ ಹೇಳಿಕೆ ನೀಡಿದ್ದಾರೆʼʼ ಎಂದರು.

ʻʻಬಿಜೆಪಿಯಲ್ಲಿ ಲಿಂಗಾಯತರ ಪ್ರಾಬಲ್ಯವನ್ನು ಮುರಿಯಬೇಕು, ಅವರೇ ಪಕ್ಷವನ್ನು ನಿಯಂತ್ರಿಸುವುದು ತಪ್ಪಬೇಕು. ಒಮ್ಮೆ ಸೋತರು ಸರಿಯೇ ಲಿಂಗಾಯತರನ್ನು ಹೊರತುಪಡಿಸಿ ಚುನಾವಣೆ ಎದುರಿಸಬೇಕು ಸಂತೋಷ್ ತಿಳಿಸಿದ್ದಾರೆʼʼ ಎಂದಿರುವ ಲಕ್ಷ್ಮಣ್‌, ʻʻಮೈಸೂರಿನ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಅವರದೇ ಪಕ್ಷದ ಮುಖಂಡರು ವಿಡಿಯೋ ಮಾಡಿದ್ದಾರೆʼʼ ಎಂದರು.

ʻʻಯಡಿಯೂರಪ್ಪ ಅವರಿಗೆ ಇಂಜೆಕ್ಷನ್ ನೀಡಿ ನಾಲ್ಕೇ ಮಾತು ಆಡುವಂತೆ ಮಾಡಿದ್ದಾರೆ. ಈ ನಡುವೆ ಮನಃಪೂರ್ತಿ ಬಿಜೆಪಿ ಗೆಲ್ಲಬೇಕು ಎಂದು ಯಡಿಯೂರಪ್ಪ ಅವರಿಗೆ ಅನಿಸುತ್ತಿಲ್ಲ. ಹೀಗಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ಒಂದೊಮ್ಮೆ ಬಂದರೂ ಬಿ.ಎಲ್‌ ಸಂತೋಷ್ ಅಥವಾ ಪ್ರಹ್ಲಾದ್ ಜೋಷಿ ಸಿಎಂ ಆಗ್ತಾರೆ. ಯಾವುದೇ ಕಾರಣಕ್ಕೂ ಲಿಂಗಾಯತರು ಸಿಎಂ ಆಗೋದಿಲ್ಲʼʼ ಎಂದು ಸುದ್ದಿಗೋಷ್ಠಿಯಲ್ಲಿ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ಅವರು ಇತ್ತೀಚೆಗೆ ಲಿಂಗಾಯತ ಮತಗಳ ಅವಶ್ಯಕತೆ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು ಎಂಬ ಸುದ್ದಿ ಹರಡಿತ್ತು. ಕೆಲವೊಂದು ಲಿಂಗಾಯತ ಸಂಘಟನೆಗಳು ಕೂಡಾ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ, ಸಿ.ಟಿ. ರವಿ ಅವರು ತಾವು ಇಂಥ ಮಾತುಗಳನ್ನು ಆಡಿರುವುದನ್ನು ನಿರಾಕರಿಸಿದ್ದರು. ಲಿಂಗಾಯತ ಸಮುದಾಯವನ್ನು ಒಡೆಯುವುದು ಕಾಂಗ್ರೆಸ್‌ ಚಾಳಿಯಾಗಿದೆ. ಕಳೆದ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಯತ್ನಿಸಿದ್ದರು. ಈ ಬಾರಿ ಇಂಥ ಕುತಂತ್ರಗಳನ್ನು ನಡೆಸುತ್ತಿದೆ ಎಂದು ಹೇಳಿದ್ದರು.

ಒಕ್ಕಲಿಗ ಸ್ವಾಮೀಜಿಗಳು, ಒಕ್ಕಲಿಗ ಸಂಘ ಮೌನ ವಹಿಸಬಾರದು

ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಒಕ್ಕಲಿಗರು ಟಿಪ್ಪು ಸುಲ್ತಾನ್‌ನನ್ನು ಕೊಂದರು ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಒಕ್ಕಲಿಗರ ವೋಟ್ ಬ್ಯಾಂಕ್ ಗಾಗಿ ಬಿಜೆಪಿಯವರು ಈ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಸಮುದಾಯವನ್ನು ತೇಜೋವಧೆ ಮಾಡುತ್ತಿರುವುದರ ವಿರುದ್ಧ ಒಕ್ಕಲಿಗ ಸಮಾಜದ ಸ್ವಾಮೀಜಿಗಳು ಮತ್ತು ಒಕ್ಕಲಿಗ ಸಂಘಗಳು ಧ್ವನಿ ಎತ್ತಬೇಕು ಎಂದು ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌ ಆಗ್ರಹಿಸಿದರು.ʻ

ʻʻನಮ್ಮ ಸಮುದಾಯವನ್ನು ಹರಾಜು ಹಾಕುತ್ತಿದ್ದರೂ ಸುಮ್ಮನೆ ಕೂತಿದ್ದೀರಿ. ಈ ಬಗ್ಗೆ ಸ್ವಾಮೀಜಿಗಳು ಒಕ್ಕಲಿಗ ಸಂಘದ ಅಧ್ಯಕ್ಷರು ಏನು ಮಾಡುತ್ತಿದ್ದಾರೆ. ಹೀಗೆ ಸುಮ್ಮನಿದ್ದರೆ ಒಕ್ಕಲಿಗ ಅಧ್ಯಕ್ಷರ ಮನೆ ಮುಂದೆ ನಮ್ಮ ಸಮುದಾಯದವರು ಪ್ರತಿಭಟನೆ ಮಾಡಬೇಕಾಗುತ್ತದೆʼʼ ಎಂದು ಹೇಳಿದ ಲಕ್ಷ್ಮಣ್‌, ಕೂಡಲೇ ಒಕ್ಕಲಿಗ ಸಂಘ ಸಿಟಿ ರವಿ , ಶೋಭಾ ಕರಂದ್ಲಾಜೆ, ಅಶ್ವತ್ಥ ನಾರಾಯಣ್ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ಮಾಡಬೇಕು ಎಂದಿದ್ದಾರೆ.

ʻʻಈ ರೀತಿ ಹೇಳಿಕೆ ನೀಡಿರುವವರನ್ನು ಅಟ್ಟಾಡಿಸಿಕೊಂಡು ಹೊಡೆಯಿರಿ. ಸಿ.ಟಿ ರವಿಗೆ ಕಂಡಲ್ಲಿ ಕಲ್ಲು ಹೊಡೆಯಿರಿʼʼ ಎಂದೂ ಲಕ್ಷ್ಮಣ್‌ ಹೇಳಿದರು.
ಇದನ್ನೂ ಓದಿ : C.T. Ravi: ಲಿಂಗಾಯತ ಸಮುದಾಯವನ್ನು ಒಡೆಯುವುದು ಕಾಂಗ್ರೆಸ್‌ ಚಾಳಿ: ಪತ್ರಿಕಾ ವರದಿ ಸುಳ್ಳು ಎಂದ ಸಿ.ಟಿ. ರವಿ

Exit mobile version