Site icon Vistara News

Karnataka Elections : ಬಿಜೆಪಿಯಿಂದ ಲಿಂಗಾಯತ ನಾಯಕರಿಗೆ ಅಪಮಾನ; ಶೆಟ್ಟರ್‌ ಸೇರ್ಪಡೆ ವೇಳೆ ಸಿದ್ದರಾಮಯ್ಯ ವಾಗ್ಬಾಣ

siddaramaiah

#image_title

ಬೆಂಗಳೂರು: ಹಿರಿಯ ನಾಯಕರಾಗಿರುವ ಜಗದೀಶ್‌ ಶೆಟ್ಟರ್‌ ಅವರ ಅಗಮನದಿಂದ ಕಾಂಗ್ರೆಸ್‌ಗೆ ದೊಡ್ಡ ಬಲ ಬಂದಿದೆ. ಈಗಾಗಲೇ ಅಧಿಕಾರಕ್ಕೇರುವುದು ನಿಶ್ಚಿತ ಎಂಬ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ಶೆಟ್ಟರ್‌ ಬಲದಿಂದ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಇದೇ ವೇಳೆ ಬಿಜೆಪಿ ಹಿರಿಯ ಲಿಂಗಾಯತ ನಾಯಕರಿಗೆ ಅಪಮಾನ ಮಾಡುತ್ತಿದೆ. ಅದನ್ನು ಪ್ರತಿಭಟಿಸಿ ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದಾರೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ನಾಯಕರಾದ ಜಗದೀಶ್‌ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಪಕ್ಷದಲ್ಲಿ ಜಗದೀಶ್‌ ಶೆಟ್ಟರ್‌ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು, ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಜಗದೀಶ್‌ ಶೆಟ್ಟರ್ ಅವರು ರಾಜ್ಯ ಕಂಡ ಸಜ್ಜನ ರಾಜಕಾರಣಿಯಾಗಿದ್ದಾರೆ. ಜನ ಸಂಘದ ಕಾಲದಿಂದಲೇ ರಾಜಕೀಯ ಆರಂಭಿಸಿದ ಅವರು ಬಿಜೆಪಿಯಲ್ಲಿದ್ದರೂ ಜಾತ್ಯತೀತ ನಾಯಕರಾಗಿ ಕೆಲಸ ಮಾಡಿದ್ದಾರೆ. ಬಹಳ ನಿಷ್ಠೆಯಿಂದ ಕೆಲಸ ಮಾಡಿದ ಅವರು, ಬಿಜೆಪಿಯ ನೀತಿಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ನೆನಪಿಸಿದರು.

ಲಿಂಗಾಯತ ನಾಯಕರ ಅವಗಣನೆ

ಜಗದೀಶ್‌ ಶೆಟ್ಟರ್‌ ಅವರು ಕೇವಲ ಉತ್ತರ ಕರ್ನಾಟಕದ ನಾಯಕರಷ್ಟೇ ಅಲ್ಲ, ಅವರು ಸಮಗ್ರ ರಾಜ್ಯದ ನಾಯಕರು. ಬಿ.ಎಸ್‌. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಎರಡನೇ ಸ್ಥಾನದಲ್ಲಿ ಇದ್ದಿದ್ದು ಜಗದೀಶ್ ಶೆಟ್ಟರ್. ಯಡಿಯೂರಪ್ಪ ಅವರಿಗೆ ಬಿಜೆಪಿ ಅಪಮಾನ ಮಾಡಿತು. ಅವರು ಕಣ್ಣೀರು ಹಾಕಿಕೊಂಡು ಸಿಎಂ ಹುದ್ದೆಯಿಂದ ಇಳಿದರು. ಇದೀಗ ಜಗದೀಶ್ ಶೆಟ್ಟರ್ ಅವರಿಗೂ ಅಪಮಾನ ಮಾಡಲಾಗಿದೆ. ಜಗದೀಶ್‌ ಶೆಟ್ಟರ್ ಅವರ ಪರಿಸ್ಥಿತಿ ಯಾವ ನಾಯಕನಿಗೂ ಬರಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ʻʻಜಗದೀಶ್‌ ಶೆಟ್ಟರ್‌ ಅವರು ಯಾವುದೇ ಆರೋಪ ಇಲ್ಲದ ರಾಜಕಾರಣಿ. ಅವರು ಸ್ವಾಭಿಮಾನಿ ರಾಜಕಾರಣಿ. ಈಗ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಸಮುದಾಯಕ್ಕೂ ಮತ್ತು ಬೆಂಬಲಿಗರಿಗೂ ಅಪಮಾನವಾಗಿದೆʼʼ ಎಂದು ಹೇಳಿದರು ಸಿದ್ದರಾಮಯ್ಯ.

ಜಗದೀಶ್‌ ಶೆಟ್ಟರ್‌ ಅವರಂಥ ಹಿರಿಯ ನಾಯಕರಿಗೆ ಯಾವುದೇ ಮುನ್ಸೂಚನೆ ಇಲ್ಲದೇ ಟಿಕೆಟ್ ತಪ್ಪಿಸುವುದು ಘೋರ ಅಪರಾಧ. ಬಿಜೆಪಿ ಅವರು ತೇಜೋವಧೆ ಮಾಡಿದ್ದರಿಂದ ಅವರು ನೊಂದು ಬಿಜೆಪಿಯಿಂದ ಹೊರ ಬಂದಿದ್ದಾರೆ. ಶೆಟ್ಟರ್ ಇಂತಹ ತೀರ್ಮಾನ ಮಾಡ್ತಾರೆ ಅಂತ ನಾವು ಅಂದುಕೊಂಡಿರಲಿಲ್ಲ. ಆದರೆ ಆಗಿರುವ ಅಪಮಾನ ಅವರು ಕಠಿಣ ತೀರ್ಮಾನ ಮಾಡುವಂತೆ ಮಾಡಿದೆ. ನಾವು ಶೆಟ್ಟರ್ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಅವರ ಸ್ವಾಭಿಮಾನಕ್ಕೆ ದಕ್ಕೆ ಆಗದ ರೀತಿ ನಡೆಸಿಕೊಳ್ಳುತ್ತೇವೆʼʼ ಎಂದರು.‌

ಸಿದ್ದರಾಮಯ್ಯ ಅವರು ಜಗದೀಶ್‌ ಶೆಟ್ಟರ್‌ ಅವರಿಗೆ ಬಿಜೆಪಿ ಮಾಡಿರುವ ಅವಮಾನವನ್ನು ಬಿಜೆಪಿ ಪ್ರಬಲ ಲಿಂಗಾಯತ ನಾಯಕನಿಗೆ ಮಾಡಿದ ಅಪಮಾನ ಎಂದು ಪ್ರಚಾರ ಮಾಡುವ ಮುನ್ಸೂಚನೆಯನ್ನು ಸಿದ್ದರಾಮಯ್ಯ ನೀಡಿದರು.

ಇದನ್ನೂ ಓದಿ : ನನ್ನನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ, ನಡೆಸಿಕೊಂಡ ರೀತಿಯಿಂದ ನೊಂದು ಬಿಜೆಪಿ ತೊರೆಯುತ್ತಿದ್ದೇನೆ: ಜಗದೀಶ ಶೆಟ್ಟರ್‌

Exit mobile version