ಮೈಸೂರು: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅಲ್ಲಿನ ಬಿಜೆಪಿ ಅಭ್ಯರ್ಥಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಲ್ಲಗಳೆದಿದ್ದಾರೆ.
ಶನಿವಾರ ಮೈಸೂರಿನಲ್ಲಿ ಆಯೋಜಿಸಿದ ತುರ್ತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಸಿದ್ದರಾಮಯ್ಯ ಜತೆ ಒಳ ಒಪ್ಪಂದ ಅವಶ್ಯಕತೆ ಇಲ್ಲ. ಶಿಕಾರಿಪುರದಲ್ಲಿ ನಾವು ಹಿಂದಿನಿಂದಲೂ ಸುಲಭವಾಗಿ ಗೆಲುವು ಸಾಧಿಸುತ್ತಿದ್ದೇವೆ. ಈ ಹಿಂದೆ ಇಡೀ ಮಂತ್ರಿಮಂಡಲವೇ ಶಿಕಾರಿಪುರದಲ್ಲಿ ಬಂದು ನಿಂತರೂ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಜೀವನದಲ್ಲಿ ಯಾವತ್ತೂ ಅಂಡರ್‌ಸ್ಟ್ಯಾಂಡಿಂಗ್ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಆರೋಪಿಸಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ಬೆಂಗಳೂರಿನ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಜತೆಗೆ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಶಿಕಾರಿಪುರದಲ್ಲಿ ಸಿದ್ದರಾಮಯ್ಯ-ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ತಮ್ಮ ಅಣ್ಣನ ಮಗ ನಾಗರಾಜ್ ಗೌಡಗೆ ಸಿದ್ದರಾಮಯ್ಯ ಟಿಕೆಟ್ ನಿರಾಕರಿಸಿ ವಿಜಯೇಂದ್ರ ಗೆಲುವಿಗೆ ಸಹಾಯ ಮಾಡಿದ್ದಾರೆಂದು ಆರೋಪಿಸಿದ್ದರು.
ವರುಣದಲ್ಲೂ ಪ್ರಚಾರ ಮಾಡುತ್ತೇನೆ ಎಂದ ವಿಜಯೇಂದ್ರ
ಶಿಕಾರಿಪುರದಲ್ಲಿ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಯನ್ನು ಹಾಕುವ ಮೂಲಕ ವಿಜಯೇಂದ್ರ ಗೆಲುವಿಗೆ ಸಹಕರಿಸಿದರೆ ವಿಜಯೇಂದ್ರ ಅವರು ವರುಣದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಸಹಕರಿಸಲಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಆರೋಪವಾಗಿತ್ತು. ಇದನ್ನೂ ಅಲ್ಲಗಳೆದಿರುವ ವಿಜಯೇಂದ್ರ ಅವರು ನಾನು ಮತ್ತೆ ವರುಣಗೆ ಬಂದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
40-50 ವರ್ಷ ಗಮನದಲ್ಲಿಟ್ಟುಕೊಂಡು ಪ್ರಯೋಗ
ʻʻಬಿಜೆಪಿ ಕಾರ್ಯಕರ್ತರು ಕಟ್ಟಿ ಬೆಳೆಸಿರುವ ಪಕ್ಷ. ಈ ಬಾರಿಯ ಚುನಾವಣೆಯಲ್ಲಿ ಸರ್ವೇ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಸಮಾಜ ಸೇವಕರು ಸೇರಿದಂತೆ ಸಮಾಜದ ವಿವಿಧ ವಲಯಗಳ ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕ ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿಕೊಂಡು ಬಂದಿದೆ. ಜಿ ಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮಹತ್ವ ಗೊತ್ತಿದೆ. ಉತ್ತರಪ್ರದೇಶ, ಗುಜರಾತ್ ನಲ್ಲಿ ಪ್ರಯೋಗಗಳನ್ನು ಮಾಡಿದಂತೆ ರಾಜ್ಯದಲ್ಲೂ ಹೊಸ ಪ್ರಯೋಗ ಮಾಡಲಾಗಿದೆ. ರಾಜ್ಯದ ಮುಂದಿನ 40-50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಲಾಗಿದೆʼʼ ಎಂದು ಹೇಳಿದರು ವಿಜಯೇಂದ್ರ.
ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಆಗಲು ಬಿಡಲ್ಲ
ʻʻದೇಶವನ್ನು ದಿವಾಳಿ ಮಾಡಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರ ಹಿಡಿದು ರಾಜ್ಯವನ್ನು ಪಕ್ಷ ನಾಯಕರ ಎಟಿಎಂ ಮಾಡಲು ಪ್ರಯತ್ನಿಸಲಾಗುತ್ತಿದೆ. ಜೆಡಿಎಸ್ ನವರು ಅತಂತ್ರ ಫಲಿತಾಂಶ ಬರಲೆಂದು ಕಾಯುತ್ತಿದ್ದಾರೆ. ಆದರೆ ರಾಜ್ಯದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಗುರ್ತಿಸಿ ಮತ್ತೊಮ್ಮೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆʼʼ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟಿದ್ದು ಮತ್ತು ಕಾಂಗ್ರೆಸ್ ಸೇರಿದ್ದು ನೋವಿನ ಘಟನೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ : Karnataka Election 2023: ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿ ತಿರಸ್ಕರಿಸಲು ಸಿಎಂ ಕಚೇರಿಯಿಂದ ಒತ್ತಡ: ಡಿಕೆಶಿ ಗಂಭೀರ ಆರೋಪ