Site icon Vistara News

Karnataka Elections 2023 : ದೇವರಿಗೆ ಪೂಜೆ ಸಲ್ಲಿಸಿ ಕೇಸರಿ ಶಾಲು ಧರಿಸಿ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ

Bommai Nomination

#image_title

ಹಾವೇರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಶಿಗ್ಗಾಂವಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಾಮಪತ್ರ (CM Bommai Nomination) ಸಲ್ಲಿಸಿದರು. ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಣ್ಣ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿದ ಬಸವರಾಜ ಬೊಮ್ಮಾಯಿ ಅವರು ಅಲ್ಲಿ ತಹಸೀಲ್ದಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಮೊದಲ ಹೆಸರಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ಶನಿವಾರ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರೂ ಏಪ್ರಿಲ್‌ 19ರಂದು ದೊಡ್ಡ ಮಟ್ಟದ ರ‍್ಯಾಲಿ ಏರ್ಪಡಿಸಿ ಇನ್ನೊಂದು ಸುತ್ತು ನಾಮಪತ್ರ ಸಲ್ಲಿಸಲಿದ್ದಾರೆ ಸಿಎಂ ಬೊಮ್ಮಾಯಿ.

ಹುಬ್ಬಳ್ಳಿ ದೇವಸ್ಥಾನಲ್ಲಿ ಬೊಮ್ಮಾಯಿ

ನಾಮಪತ್ರ ಸಲ್ಲಿಕೆ ವೇಳೆ ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿ.ಸಿ ಪಾಟೀಲ್, ಸಿಎಂ ಪುತ್ರ ಭರತ್ ಬೊಮ್ಮಾಯಿ, ಶಿಗ್ಗಾವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಲು ಶಿಗ್ಗಾವಿಗೆ ತೆರಳುವ ಮುನ್ನ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಶಿಗ್ಗಾವಿಗೆ ತೆರಳಿದ ಅವರು ಶಿಗ್ಗಾವಿ ದ್ಯಾಮವ್ವನ ಗುಡಿಯಲ್ಲೂ ಪೂಜೆ ಸಲ್ಲಿಸಿದರು. ಅಲ್ಲಿಂದ ಕೇಸರಿ ಶಾಲು ಧರಿಸಿ ನಾಮಪತ್ರ ಸಲ್ಲಿಕೆಗೆ ತೆರಳಿದರು.

ಹುಬ್ಬಳ್ಳಿಯಲ್ಲಿ ದೇವರ ಮುಂದೆ ಬೊಮ್ಮಾಯಿ

ಅಭೂತಪೂರ್ವ ಬೆಂಬಲ ಸಿಕ್ಕಿದೆ

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಬಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲ ನೀಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು. ಎದುರಾಳಿ ಯಾರೇ ಬರಲಿ, ಚುನಾವಣೆ ಅಂದರೆ ಕುಸ್ತಿ ಎಂದರು ಬೊಮ್ಮಾಯಿ.

ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ಬಿರುಗಾಳಿಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷದಲ್ಲಿರುವ ಹಲವು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದಾಗ ಬಂಡಾಯ ಸಹಜ. ಎಲ್ಲವೂ ಶಮನ ಆಗುತ್ತದೆ ಎಂದರು.

ನಾಮಪತ್ರ ಸಲ್ಲಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನೆಚ್ಚಿನ ವಾಹನದಲ್ಲಿ ಆಗಮಿಸಿದ ಬೊಮ್ಮಾಯಿ

ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಲು ತಮ್ಮ ನೆಚ್ಚಿನ ವಾಹನವಾದ ಸ್ಕಾರ್ಪಿಯೊ (ಕೆಎ 25, ಎಂ ಸಿ 2691) ದಲ್ಲಿ ಬಂದಿದ್ದರು. ಇದು ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಬೊಮ್ಮಾಯಿ ಅವರು ಬಳಸುವ ವಾಹನವಾಗಿದೆ.

ಈ ನಡುವೆ ನಾಮಪತ್ರ ಸಲ್ಲಿಕೆ ವೇಳೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪೊಲೀಸರು ಅವರನ್ನು ಹಿಂದಕ್ಕೆ ಕಳುಹಿಸಿದರು. ಆಗ ಪೊಲೀಸರು ಮತ್ತು ಸಿಎಂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ಇನ್ನೂ ನಿರ್ಧಾರವಾಗದ ಕಾಂಗ್ರೆಸ್‌ ಅಭ್ಯರ್ಥಿ

ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಿದರೂ ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್‌ ವಿನಯ ಕುಲಕರ್ಣಿ ಅವರನ್ನು ಕರೆತಂದು ಸಿಎಂಗೆ ಸಡ್ಡು ಹೊಡೆಯುವ ಪ್ಲ್ಯಾನ್‌ ಮಾಡಿತ್ತಾದರೂ ಅದು ಫಲಿಸಲಿಲ್ಲ. ವಿನಯ ಕುಲಕರ್ಣಿ ಅವರಿಗೆ ಈಗ ಧಾರವಾಡದ ಟಿಕೆಟ್‌ ನೀಡಲಾಗಿದೆ. ಅಂತಿಮವಾಗಿ ಈ ಕ್ಷೇತ್ರದಲ್ಲಿ ಹಿಂದಿನಿಂದಲೂ ಸ್ಪರ್ಧಿಸುತ್ತಿರುವ ಅಜ್ಜಂಪೀರ್‌ ಖಾದ್ರಿ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಕಾಣಿಸುತ್ತಿದೆ.

ಇದನ್ನೂ ಓದಿ : Karnataka Election: ಪಕ್ಷ ಬಿಟ್ಟಿದ್ದು ದುಃಖವಾಗಿದೆ ಎಂದ ಸಿಎಂ ಬೊಮ್ಮಾಯಿ; ನಾನೇನು ಕಣ್ಣೀರು ಒರೆಸಲೇ ಎಂದ ಲಕ್ಷ್ಮಣ ಸವದಿ

Exit mobile version