ಬೆಂಗಳೂರು/ಮೈಸೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದೆಯಾ? ಹೌದು ಎಂದು ಹೇಳುತ್ತಿವೆ ಕೆಲವೊಂದು ಸುಳಿವುಗಳು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ತಾವೇ ಸ್ವತಃ ಮೈಸೂರಿಗೆ ತೆರಳಿದ್ದು ಒಂದು ಸುಳಿವಾದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರಂತೂ ವಿಜಯೇಂದ್ರ ಅವರು ವರುಣದಿಂದ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಬೇಡಿಕೆ ಭಾರಿ ಹೆಚ್ಚಿದೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಬಿಜೆಪಿ ತೀವ್ರ ಪ್ರಯತ್ನದಲ್ಲಿದೆ. ಕೋಲಾರ ಸೇಫಲ್ಲ ಎಂಬ ಹೈಕಮಾಂಡ್ ವರದಿಯ ಹಿನ್ನೆಲೆಯಲ್ಲಿ ಅತ್ಯಂತ ಸುರಕ್ಷಿತ ಎಂದು ನಂಬಲಾದ ವರುಣ ಕ್ಷೇತ್ರದ ಟಿಕೆಟನ್ನು ಸಿದ್ದರಾಮಯ್ಯ ಅವರು ಪಡೆದಿದ್ದಾರೆ. ಆದರೆ, ಪ್ರಬಲ ಪ್ರತಿಸ್ಪರ್ಧಿಯನ್ನು ನಿಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಲು ಮಾಸ್ಟರ್ ಪ್ಲ್ಯಾನ್ ನಡೆಯುತ್ತಿದೆ.
ವಾರದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಬಂದಿದ್ದಾಗ ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಉಪಾಹಾರದ ವೇಳೆ ವರುಣ ಕ್ಷೇತ್ರದ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ವತಃ ವಿಜಯೇಂದ್ರ ಅವರೇ ಹೇಳಿದ್ದರು. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ವಿಜಯೇಂದ್ರ ಅವರನ್ನು ವರುಣದಿಂದ ಕಣಕ್ಕಿಳಿಸುವ ಚರ್ಚೆ ನಡೆಯುತ್ತಿರುವುದು ನಿಜ ಎಂದು ಒಪ್ಪಿಕೊಂಡರು. ಅದಾದ ಬಳಿಕ ವಿಜಯೇಂದ್ರ ಅವರು ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ್ದರು. ಇದು ವರುಣದಲ್ಲಿ ಅವರ ಸ್ಪರ್ಧೆಗೆ ಇನ್ನಷ್ಟು ಇಂಬು ನೀಡುವಂತಿದೆ.
ಜನರ ಬೇಡಿಕೆ ಇದೆ ಎಂದ ಬೊಮ್ಮಾಯಿ
ಇತ್ತ ಶುಕ್ರವಾರ ಮುಂಜಾನೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪತ್ನಿ ಸಮೇತ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ʻʻವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ದ ಪ್ರಬಲ ಪೈಪೋಟಿ ಕೊಡುತ್ತೇವೆ. ವರುಣದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ. ಅಂತಿಮ ತೀರ್ಮಾನವನ್ನು ಯಡಿಯೂರಪ್ಪ ಅವರು ಹಾಗೂ ಪಾರ್ಲಿಮೆಂಟ್ ಬೋರ್ಡ್ ತೀರ್ಮಾನ ಮಾಡಲಿದೆʼʼ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಸುಳಿವು ನೀಡಿದರು.
ಮತ್ತೆ ನಾವೇ ಅಧಿಕಾರಕ್ಕೆ ಎಂದ ಸಿಎಂ
ಇದರ ಜತೆಗೆ, ಘಾಟಿ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ʻʻಈಗ ಬಂದಿರುವ ಸಮೀಕ್ಷೆಗಳಲ್ಲವೂ ಬಹಳ ಹಿಂದೆ ಮಾಡಿರುವುದು. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇಲ್ಲ. ಕಾಂಗ್ರೆಸ್ ಬಿಜೆಪಿ ಪೈಪೋಟಿಯನ್ನು ತೋರಿಸುತ್ತಿವೆ. ಸಮೀಕ್ಷೆಗಳು ಇನ್ನೂ ನಡೆಯುತ್ತಿವೆ. ಇನ್ನೂ ಒಂದೂವರೆ ತಿಂಗಳು ಸಮಯ ಇದೆ. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು ಬೊಮ್ಮಾಯಿ.
ಪಿಚ್ ರಿಪೋರ್ಟ್ ತಿಳಿಯಲು ಬಿಎಸ್‌ವೈ ಮೈಸೂರಿಗೆ
ಈ ನಡುವೆ, ವರುಣ ಕ್ಷೇತ್ರದ ವಾಸ್ತವಿಕ ಪರಿಸ್ಥಿತಿಯ ಅಧ್ಯಯನಕ್ಕಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.
ಖಾಸಗಿ ಕಾರ್ಯಕ್ರಮದ ನೆಪದಲ್ಲಿ ಮೈಸೂರಿಗೆ ಆಗಮಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರು ಬಳಿಕ ವರುಣ ಕ್ಷೇತ್ರದ ಪ್ರಮುಖ ಮುಖಂಡರ ಜತೆ ಸಭೆ ನಡೆಸುವ ಸಾಧ್ಯತೆ ಇದೆ.
ನಿನ್ನೆಯಷ್ಟೇ ವರುಣ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಹೇಳಿಕೆ ನೀಡಿದ್ದ ಯಡಿಯೂರಪ್ಪ ಮರುದಿನವೇ ಮೈಸೂರಿಗೆ ಧಾವಿಸಿರುವುದು ಮಹತ್ವ ಪಡೆದಿದೆ.