Site icon Vistara News

Karnataka Elections 2023 : ಚುನಾವಣೆ ನಂತರ ಬೊಮ್ಮಾಯಿಗೂ ಸವದಿ, ಶೆಟ್ಟರ್‌ ಪರಿಸ್ಥಿತಿಯೇ ಬರಲಿದೆ; ಎಂ.ಬಿ ಪಾಟೀಲ್‌ ಭವಿಷ್ಯ

MB Patil Asha patil

#image_title

ವಿಜಯಪುರ: ʻʻವಿಧಾನಸಭಾ ಚುನಾವಣೆ (Karnataka Elections 2023) ನಂತರ ಬಸವರಾಜ ಬೊಮ್ಮಾಯಿ ಪರಿಸ್ಥಿತಿ ಏನಾಗುತ್ತದೆ ಎನ್ನುವುದು ನಿಮಗೇ ಗೊತ್ತಾಗುತ್ತದೆ. ಇವತ್ತು ಲಕ್ಷ್ಮಣ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ಅವರಿಗೆ ಎದುರಾದ ಪರಿಸ್ಥಿತಿಯೇ ಬೊಮ್ಮಾಯಿ ಅವರಿಗೂ ಬರುತ್ತದೆʼʼ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಅವರು ಮಾತನಾಡಿದರು.

ʻʻಬೇಕಾದ್ರೆ ಬರೆದಿಟ್ಟುಕೊಳ್ಳಿ, ಚುನಾವಣೆ ಬಳಿಕ ಎಲ್ಲರಿಗೂ ಗೊತ್ತಾಗುತ್ತದೆʼʼ ಎಂದ ಎಂಬಿ ಪಾಟೀಲ್ ಸವಾಲು ಹಾಕುವ ರೂಪದಲ್ಲಿ ಹೇಳಿದರು.

ʻʻಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಸೈಡ್‌ಲೈನ್‌ ಮಾಡಲಾಗುತ್ತಿದೆ. ಮೊದಲು ಯಡಿಯೂರಪ್ಪ ಅವರಿಂದ ಅಧಿಕಾರ ಕಸಿದುಕೊಳ್ಳಲಾಯಿತು. ಬಳಿಕ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಚುನಾವಣೆ ಬಳಿಕ ಬೊಮ್ಮಾಯಿ ಅವರಿಗೂ ಇದೇ ಪರಿಸ್ಥಿತಿ ಬರುತ್ತದೆʼʼ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ʻʻಬಿಜೆಪಿ ನಾಯಕರು ಬೇರೆಯೇ ಆದ ಒಂದು ಹಿಡನ್ ಅಜೆಂಡಾ ಇಟ್ಟುಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದಂತೆ ಬಿಜೆಪಿಗೆ ಒಂದು ಕಾರ್ಯಸೂಚಿ ಇದೆ. ಹೀಗಾಗಿ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಲಾಗುತ್ತಿದೆʼʼ ಎಂದು ಹೇಳಿದರು ಎಂ.ಬಿ. ಪಾಟೀಲ್‌.

ʻʻಲಿಂಗಾಯತ ನಾಯಕರು ಬಂದಿರುವುದರಿಂದ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಲಿದೆʼʼ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಸಾಹೇಬರ ಪರ ಜನರ ಒಲವಿದೆ ಎಂದ ಪಾಟೀಲ್‌ ಪತ್ನಿ

ಇದೇ ಸಂದರ್ಭದಲ್ಲಿ ಎಂ.ಬಿ ಪಾಟೀಲ್ ಅವರ ಪತ್ನಿ ಆಶಾದೇವಿ ಪಾಟೀಲ್ ಅವರು, ಸಾಹೇಬರ ಪರ ಜನರ ಒಲವು ಇದೆ, ಅವರ ಕೆಲಸದ ಮೇಲೆ ಜನರಿಗೆ ಅಭಿಮಾನ ಇದೆ. ಬಬಲೇಶ್ವರ ಮತಕ್ಷೇತ್ರ ಎಂದರೆ ಎಂ‌ಬಿ ಪಾಟೀಲ್ ಅವರಿಗೆ ಪಂಚಪ್ರಾಣ, ಜೀವನವೇ ಈ ಜನರಿಗಾಗಿ ಮುಡಿಪಾಗಿಟ್ಟಿದ್ದಾರೆ. ಬಬಲೇಶ್ವರ ಮತಕ್ಷೇತ್ರವೇ ನಮಗೆಲ್ಲರಿಗೂ ದೇವಸ್ಥಾನ ಇದ್ದಂತೆʼʼ ಎಂದು ಹೇಳಿದರು.

ಲಕ್ಣ್ಮಣ ಸವದಿ, ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಕೇಳಿದಾಗ, ʻʻಖಂಡಿತವಾಗಿಯೂ ಅನುಕೂಲ ಆಗಲಿದೆ. ಕಾಂಗ್ರೆಸ್ ನವರು ಬಿಜೆಪಿಗೆ ಹೋದಾಗ ಅವರು ಹೇಗೆ ಪ್ರಯೋಜನ ಪಡೆದುಕೊಂಡರೋ ಹಾಗೇ ನಮ್ಮ ಪಕ್ಷಕ್ಕೂ ಅವರು ಸೇರಿದಾಗ ನಮಗೂ ಅನುಕೂಲಗಳು ಆಗಲಿವೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆʼʼ ಎಂದು ಅಭಿಪ್ರಾಯಪಟ್ಟರು.

ʻʻಕಾಂಗ್ರೆಸ್‌ ಪಕ್ಷ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಮಾಡಿದೆ. ಪಿಂಚಣಿ, ವಿಧವಾ ವೇತನ, ಮನಸ್ವಿನಿ ಯೋಜನೆಗಳಿವೆ. ಸ್ತ್ರೀಶಕ್ತಿ ಸಂಘಗಳಿಗೆ ಸಾಕಷ್ಟು ಅನುಕೂಲ‌ ಕಲ್ಪಿಸಲಾಗಿದೆ, ಮಹಿಳೆಯರ ಆಶೀರ್ವಾದ ನಮ್ಮ‌ ಮೇಲೆ‌ ಇದೆ. ಎಲ್ಲರೂ ಜವಾಬ್ದಾರಿಯಿಂದ ಕೆಲಸ‌ ಮಾಡ್ತಿದ್ದೇವೆ, ಕ್ಷೇತ್ರದ ಜನ್ರಿಗೆ ಏನೇ ಸಮಸ್ಯೆ ಇದ್ದರೂ ನಮ್ಮ ಆಪ್ತಸಹಾಯಕರ ಮೂಲಕ ಬಗೆಹರಿಸುತ್ತೇವೆʼʼ ಎಂದು ನುಡಿದರು.

ಇದನ್ನೂ ಓದಿ : Karnataka Elections: ಜೋಶಿಗೂ ಇಲ್ಲ, ಸಂತೋಷ್‌ಗೂ ಇಲ್ಲ, ರಾಜ್ಯದಲ್ಲಿ ಮುಂದೆಯೂ ಲಿಂಗಾಯತರೇ ಸಿಎಂ ಎಂದ ಯತ್ನಾಳ್‌, ನಳಿನ್‌ ಸಮರ್ಥನೆ

Exit mobile version