ಮೈಸೂರು: ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಪ್ರಬಲ ಮುಸ್ಲಿಂ ಅಭ್ಯರ್ಥಿಯ ವಿರುದ್ಧವೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರು ಮೈಸೂರಿನ ಎನ್.ಆರ್. ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ಈಗ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುತ್ತಿದ್ದಾರೆ.
ಈ ಮಾಹಿತಿಯನ್ನು ನರಸಿಂಹರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹಾಗೂ ಜೆಡಿಎಸ್ ಮುಖಂಡ ಅಬ್ದುಲ್ಲ ನೀಡಿದ್ದಾರೆ. ಅಬ್ದುಲ್ ಅಜೀಜ್ ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಕಳೆದ ಚುನಾವಣೆಯಲ್ಲಿ ತನ್ವೀರ್ ಸೇಠ್ ವಿರುದ್ಧ ಸೋತಿದ್ದರು. ಈ ಬಾರಿ ಇಬ್ರಾಹಿಂ ಅವರು ಇಲ್ಲಿ ಸ್ಪರ್ಧಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಇಬ್ರಾಹಿಂ ಅವರು ತಮ್ಮದೇ ಸಮುದಾಯದ ನಾಯಕನ ಮೇಲೆ ಕಣ್ಣಿಟ್ಟಿದ್ದಾರೆ. ಎನ್.ಆರ್. ಕ್ಷೇತ್ರದಲ್ಲಿ ಸಾಕಷ್ಟು ಜೆಡಿಎಸ್ ಮತಗಳಿರುವುದು ಮತ್ತು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರಿರುವುದು ಅವರ ಆಯ್ಕೆಗೆ ಇನ್ನೊಂದು ಕಾರಣ ಎನ್ನಲಾಗಿದೆ.
ಇಬ್ರಾಹಿಂ ಅವರು ಕಳೆದ ಆರು ತಿಂಗಳಿನಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಜೆಡಿಎಸ್ ಕಾರ್ಯಕರ್ತರು, ಆಪ್ತರೊಂದಿಗೆ ಚುನಾವಣಾ ತಂತ್ರಗಾರಿಕೆ ರೂಪಿಸುತ್ತಿದ್ದರು. ಅವರು ಎನ್.ಆರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿಯಿಂದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯರ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ತೊರೆದಿದ್ದ ಇಬ್ರಾಹಿಂ ಅವರು ಇದೀಗ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಸ್ಪರ್ಧೆಗೆ ಮುಂದಾಗಿರುವುದು ವಿಶೇಷವಾಗಿದೆ. ಅದಲ್ಲದೆ ಒಂದು ಕಾಲದಲ್ಲಿ ಆತ್ಮೀಯರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ವಿರುದ್ಧವೇ ತೊಡೆತಟ್ಟಿರುವುದು ಕುತೂಹಲಕಾರಿಯಾಗಿದೆ.
ತನ್ವೀರ್ ಸೇಠ್ ಸ್ಪರ್ಧಿಸುತ್ತಾರಾ?
ಇಬ್ರಾಹಿಂ ಅವರೇನೋ ಎನ್.ಆರ್. ಕ್ಷೇತ್ರದಿಂದ ಸ್ಪರ್ಧಿಸಿ ತನ್ವೀರ್ ಸೇಠ್ ಅವರಿಗೆ ಠಕ್ಕರ್ ನೀಡಲು ಮುಂದಾಗಿದ್ದಾರೆ. ಆದರೆ, ಸ್ವತಃ ತನ್ವೀರ್ ಸೇಠ್ ಅವರೇ ಸ್ಪರ್ಧೆ ಮಾಡುತ್ತಾರಾ ಇಲ್ಲವೇ ಎನ್ನುವುದು ಪ್ರಶ್ನೆಯಾಗಿದೆ. ಇತ್ತೀಚೆಗೆ ತನ್ವೀರ್ ಸೇಠ್ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಆಗ ಅವರ ಅಭಿಮಾನಿಗಳೆಲ್ಲ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ಅವರೇ ಸ್ಪರ್ಧಿಸುತ್ತಾರಾ ಎನ್ನುವುದು ಸ್ಪಷ್ಟವಾಗಿಲ್ಲ.
ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 8 ಹೆಸರು
ಈ ನಡುವೆ, ಇನ್ನೆರಡು ದಿನಗಳಲ್ಲಿ ಪ್ರಕಟವಾಗಲಿರುವ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಎಷ್ಟು ಕ್ಷೇತ್ರಗಳ ಹೆಸರು ಇರುತ್ತದೆ ಎಂಬ ಕುತೂಹಲವೂ ಇದೆ.
ಮೈಸೂರಿನ 11 ಕ್ಷೇತ್ರದ ಪೈಕಿ ಮೂರು ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಆಯ್ಕೆ ಅಂತಿಮವಾಗಿದೆ. ಚಾಮರಾಜ, ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆಸುತ್ತಾರೆ ಎನ್ನುವುದು ದೊಡ್ಡ ಮಟ್ಟದ ಕುತೂಹಲ ಸೃಷ್ಟಿಸಿದೆ. ವರುಣ, ಕೋಲಾರ ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಾರಾ? ಬಾದಾಮಿಗೆ ಹೋಗುತ್ತಾರಾ ಎಂದು ಚರ್ಚೆ ನಡೆಯುತ್ತಿದೆ.
ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವನಾರಾಯಣ್ ನಿಧನವಾಗಿರುವ ಹಿನ್ನೆಲೆಯಲ್ಲಿ ಮಗ ದರ್ಶನ್‌ಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಿದೆ. ನಂಜನಗೂಡು ಕ್ಷೇತ್ರದಿಂದ ಮಹದೇವಪ್ಪ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ದರ್ಶನ್ ಹೆಸರು ಮೊದಲ ಪಟ್ಟಿಯಲ್ಲೇ ಕಾಣಿಸಿಕೊಳ್ಳಲಿದೆ.