Site icon Vistara News

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

Azam peer Khadri

#image_title

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಗೆಲ್ಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಚಮಕ್‌ ನೀಡಲು ಮುಂದಾಗಿರುವ ಪ್ಲ್ಯಾನ್‌ ಈಗ ಕಾಂಗ್ರೆಸ್‌ಗೇ ತಿರುಗುಬಾಣವಾಗುವ ಪರಿಸ್ಥಿತಿ ಎದುರಾಗಿದೆ.

ಶಿಗ್ಗಾಂವಿಯಲ್ಲಿ ಖಡಾಖಡಿ ಹೋರಾಟವನ್ನು ನೀಡುವ ಮೂಲಕ ಬೊಮ್ಮಾಯಿ ಅವರನ್ನು ಅವರ ಕ್ಷೇತ್ರದಿಂದ ಹೊರಬರದಂತೆ ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಬೊಮ್ಮಾಯಿಗೆ ಕಠಿಣ ಸ್ಪರ್ಧೆ ನೀಡಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅವರನ್ನು ಹೇಗೋ ಮನವೊಲಿಸಿ ಒಪ್ಪಿಸಿದ್ದಾರೆ. ಆದರೆ, ಈಗ ಶಿಗ್ಗಾಂವಿಯಲ್ಲಿ ಇದುವರೆಗೂ ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಿರುವ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಅವರು ತಿರುಗಿಬಿದ್ದಿದ್ದಾರೆ. ತನಗೆ ಟಿಕೆಟ್‌ ನೀಡದೆ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಖಾದ್ರಿ ಹೇಳಿರುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾದಂತಾಗಿದೆ.

ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಬಯಸಿ 14 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಪಸಂಖ್ಯಾತ ಕೋಟಾದಡಿ ಸತತ ಮೂರು ಸಲ ಟಿಕೆಟ್ ಪಡೆದು ಬೊಮ್ಮಾಯಿ ವಿರುದ್ಧ ಸೋತಿದ್ದ ಮಾಜಿ ಶಾಸಕ ಅಜ್ಜಂ ಪೀರ್‌ ಖಾದ್ರಿ ಈ ಸಲವೂ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ.

ಆದರೆ, ಈ ಬಾರಿ ಅಲ್ಪಸಂಖ್ಯಾತ ಅಸ್ತ್ರದ ಬದಲು ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಅಲ್ಪಸಂಖ್ಯಾತರು ಹೇಗಿದ್ದರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಅವರ ಜತೆ ಪಂಚಮಸಾಲಿಗಳ ಮತವೂ ಸೇರಿದರೆ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮನವಿ ಒಲಿಸಿದೆ. ಕೆಲವು ದಿನಗಲ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿಯ ವಿನಯ ಕುಲಕರ್ನಿ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದರು.

ಸಿದ್ದರಾಮಯ್ಯ, ವಿನಯ ಕುಲಕರ್ಣಿ ಅವರ ಜತೆ ಅಜ್ಜಂ ಪೀರ್‌ ಖಾದ್ರಿ

ವಿನಯ ಕುಲಕರ್ಣಿ ಅವರ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ. ಶಿಗ್ಗಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಈ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿಯವರೆಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ ಮನ ಒಲಿಸಲು ಕಸರತ್ತು ನಡೆಸಿದರಾದರೂ ಅದರಲ್ಲಿ ಸಫಲರಾಗಿಲ್ಲ. ಖಾದ್ರಿ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿರುವುದರಿಂದ ಜಮೀರ್‌ ಅಹ್ಮದ್‌ ಅವರಿಗೆ ಮನವೊಲಿಕೆ ಜವಾಬ್ದಾರಿಯನ್ನು ನೀಡಲಾಗಿದೆ.

ಖಾದ್ರಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ ಕೊನೆಯ ಬಾರಿಗೆ ಗೆದ್ದಿದ್ದು 1994ರಲ್ಲಿ. ಮಂಜುನಾಥ ಕೊನ್ನೂರು ಅವರು ಆಗ ಶಾಸಕರಾಗಿದ್ದರು.

ಖಾದ್ರಿ ಅವರು 1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಲ್ಲಿ ಸಿಂಧೂರ ರಾಜಶೇಖರ್‌ ಇಲ್ಲಿಗೆ ಪಕ್ಷೇತರರಾಗಿ ಗೆಲುವು ಪಡೆದಿದ್ದರು. ಬಳಿಕ ಗೆದ್ದಿದ್ದೆಲ್ಲ ಬೊಮ್ಮಾಯಿ ಅವರೇ.

ಇಲ್ಲಿನ ಒಟ್ಟಾರೆ ಲೆಕ್ಕಾಚಾರ ಗಮನಿಸಿದರೆ ಕಾಂಗ್ರೆಸ್‌ ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ ಗೆಲ್ಲುವುದು ಕಷ್ಟ. ಹಾಗಾಗಿ ಅದು ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಮುಸ್ಲಿಂ ಮತಗಳನ್ನು ಬಿಟ್ಟರೂ ಗೆಲುವು ಸುಲಭವಲ್ಲ. ಹೀಗಾಗಿ ಖಾದ್ರಿ ಅವರು ಪಕ್ಷೇತರರಾಗಿ ನಿಂತರೆ ಮುಸ್ಲಿಂ ಮತಗಳು ಒಡೆಯುವುದು ನಿಶ್ಚಿತ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾದ ಅಗತ್ಯ ಕಾಂಗ್ರೆಸ್‌ಗಿದೆ. ಖಾದ್ರಿ ಅವರು ಕಾಂಗ್ರೆಸ್‌ ಮನವೊಲಿಕೆಗೆ ಒಲಿಯುತ್ತಾರಾ ಎಂದು ಕಾದು ನೋಡಬೇಕು.

ಇದನ್ನೂ ಓದಿ : Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ

Exit mobile version