ಮೈಸೂರು: ಎಸ್‍ಡಿಪಿಐ, ಕೆಎಫ್‍ಡಿ, ಪಿಎಫ್‍ಐ ಕಾರ್ಯಕರ್ತರು ಸಿದ್ದರಾಮಯ್ಯನವರ ದತ್ತು ಮಕ್ಕಳು, ಕಾಂಗ್ರೆಸ್ ರಾಜ್ಯದಲ್ಲಿ ತಾಲಿಬಾನಿ ಸರ್ಕಾರ (Karnataka Elections 2023) ರಚನೆಗೆ ಹುನ್ನಾರ ನಡೆಸುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರು ಆರೋಪಿಸಿದ್ದಾರೆ.
ಮೈಸೂರಿನ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಲ್ಲಿ ತಾಲಿಬಾನಿ ಸರಕಾರವನ್ನು ಎಸ್‍ಡಿಪಿಐ ಬೆಂಬಲದೊಂದಿಗೆ ತರಲು ಹೊರಟಿದ್ದಾರೆ. ಇದನ್ನು ಗಮನಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಿ ಎಂದು ಮನವಿ ಮಾಡಿದರು.
2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಹೊರಟ ಭಯೋತ್ಪಾದಕರನ್ನು ಬೆಂಬಲಿಸುವ ಸಂಘಟನೆಗಳ ಜೊತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಂದರೆ ಕರ್ನಾಟಕದಲ್ಲಿ ರಾಜಕೀಯ ಹತ್ಯೆಗಳು ನಡೆಯಲಿವೆ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ನಡೆದ ಅನೇಕ ಹತ್ಯೆಗಳ ಕುರಿತು ಅವರು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ಅನುಮಾನಾಸ್ಪದ ಸಾವು ಮುಂದುವರಿಯಿತು. ಅನೇಕ ಅಧಿಕಾರಿಗಳ ಮೇಲೆ ದಾಳಿ ನಡೆಯಿತು. ಸಿದ್ದರಾಮಯ್ಯನವರ ಸಾಕು ಮಕ್ಕಳಿಂದ ಇದೆಲ್ಲ ಆಗಿದೆ. ತಮ್ಮ ಪಕ್ಷದ ಶಾಸಕರ ಮೇಲೆ ದಾಳಿ ನಡೆದರೂ ಕಾಂಗ್ರೆಸಿಗರು ಎಚ್ಚರವಾಗಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯ ಕಾಲದಲ್ಲಿ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ. ಕರ್ನಾಟಕ ಇನ್ನೊಂದು ಕೇರಳ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಏನೂ ಬೇಕಾದರು ಮಾಡುತ್ತದೆ. ನಾಳೆ ರಾಜ್ಯ ಎಸ್ ಡಿ ಫಿಐ ಕೈಗೆ ಹೋದರು ಪರವಾಗಿಲ್ಲ ನಾವು ಅಧಿಕಾರಕ್ಕೆ ಬರಬೇಕು ಅನ್ನೋದು ಕಾಂಗ್ರೆಸ್ ಮನಸ್ಥಿತಿ ಎಂದು ಪ್ರತಾಪಸಿಂಹ ದೂರಿದರು.
ಅಪ್ಪ-ಮಗನ ದರ್ಬಾರ್ ಶೀಘ್ರವೇ ಅಂತ್ಯ
ಸೋಮಣ್ಣ ಅವರು ಸೋಮವಾರ ವರುಣ ಮತ್ತು ಚಾಮರಾಜನಗರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಅಪ್ಪ ಮತ್ತು ಮಗನ ಕಾರುಬಾರು, ದರ್ಬಾರ್ ಅಂತ್ಯವಾಗುವ ದಿನ ಹತ್ತಿರವಾಗುತ್ತಿದೆ. ಮೈಸೂರು ಭಾಗದಲ್ಲಿ 8-10 ಸೀಟು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು- ಬೆಂಗಳೂರು ಹೈವೇ ಕಾರ್ಯಗತವಾಗಿದೆ. ಜಲಜೀವನ್ ಮಿಷನ್‍ನಲ್ಲಿ ಗ್ರಾಮಾಂತರದ ಎಲ್ಲ ಮನೆಗಳಿಗೆ ನಳ್ಳಿ ನೀರು ಕೊಡಲಿದ್ದೇವೆ. ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಮೈಸೂರು ಜಿಲ್ಲಾ ಅಧ್ಯಕ್ಷ ಶ್ರೀವತ್ಸ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿ. ಕವಿಶ್ ಗೌಡ, ಮೂಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಇದ್ದರು.
ಇದನ್ನೂ ಓದಿ : Karnataka Election 2023 : ಗಡುವು ವಿಸ್ತರಿಸಿದ ಶೆಟ್ಟರ್; ಸಂಜೆಯ ಒಳಗೆ ಟಿಕೆಟ್ ಘೋಷಣೆಯಾಗದಿದ್ದರೆ…?