Site icon Vistara News

Karnataka Elections : ಚನ್ನಪಟ್ಟಣ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಹೈಜಾಕ್ ಮಾಡಿದ ಜೆಡಿಎಸ್!

Channapatna JDS

#image_title

ರಾಮನಗರ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ (Karnataka Elections) ಪಕ್ಷಗಳ ನಡುವೆ ನಾಯಕರ ಹೈಜಂಪ್‌ ಜೋರಾಗಿದೆ. ಇದರ ನಡುವೆಯೇ ಚನ್ನಪಟ್ಟಣದಲ್ಲಿ ಸಂಭಾವ್ಯ ಅಭ್ಯರ್ಥಿಯೊಬ್ಬರ ಹೈಜಾಕ್‌ ನಡೆದಿದೆ! ಹೌದು ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯನ್ನು ಜೆಡಿಎಸ್ ಹೈಜಾಕ್ ಮಾಡಿದೆ.

ಪ್ರಸನ್ನ ಗೌಡ ಪಿ. ಅವರು ಚನ್ನಪಟ್ಟಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊದಲ ಪಟ್ಟಿಯಲ್ಲೇ ಚನ್ನಪಟ್ಟಣದ ಹೆಸರು, ಅದರಲ್ಲಿ ತನ್ನ ಹೆಸರು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಚನ್ನಪಟ್ಟಣ ಕೈಬಿಟ್ಟ ಹಿನ್ನೆಲೆಯಲ್ಲಿ ಬೇಸರ ಮಾಡಿಕೊಂಡು ಅವರು ಜೆಡಿಎಸ್‌ ಪಾಳಯ ಸೇರಿದ್ದಾರೆ. ಮೊದಲ ಪಟ್ಟಿ ಎಂದರೆ ಎಲ್ಲವೂ ಕ್ಲಿಯರ್‌ ಆಗಿದೆ ಎಂದರ್ಥ. ಎರಡನೇ ಪಟ್ಟಿ ಎಂದರೆ ಬಹಳ ಜನ ಪ್ರತಿಸ್ಪರ್ಧಿಗಳಿದ್ದಾರೆ ಎಂದರ್ಥ. ಹೀಗಾಗಿ ತನಗೆ ಟಿಕೆಟ್‌ ದಕ್ಕಲಾರದು ಎಂಬ ಆತಂಕದಲ್ಲಿ ಅವರು ಪಕ್ಷ ಬಿಟ್ಟಿದ್ದಾರೆ.

ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‌ ಭದ್ರಕೋಟೆಯಾಗಿದ್ದರೂ ಕಾಲ ಕಾಲಕ್ಕೆ ಕಾಂಗ್ರೆಸ್‌ ಇಲ್ಲಿ ಗೆಲುವು ಸಾಧಿಸಿದೆ. ಈಗ ಎಚ್‌.ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಈ ಕ್ಷೇತ್ರದ ಶಾಸಕಿ. ಮುಂದಿನ ಸಲ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಮಗ ನಿಖಿಲ್‌ ಕುಮಾರಸ್ವಾಮಿ ಅವರು ಇಲ್ಲಿ ಅಭ್ಯರ್ಥಿಯಾಗಲಿದ್ದಾರೆ.

ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಜಿಗಿದಿರುವ ಪ್ರಸನ್ನ ಗೌಡ ಅವರು ಭಾನುವಾರ ಮೈಸೂರಿನಲ್ಲಿ ಕುಮಾರಸ್ವಾಮಿ ಜೊತೆಗೆ ಕಾರಣಿಸಿಕೊಂಡರು. ಅಲ್ಲೇ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸಿದ್ಧಾಂತದಿಂದ ಬೇಸತ್ತು ಜೆಡಿಎಸ್‌ ಸೇರಿದ್ದಾಗಿ ಹೇಳಿದರು.

ʻʻಕಾಂಗ್ರೆಸ್‌ನಲ್ಲಿ ನಿರ್ಧಾರಗಳು ಸರಿ ಇಲ್ಲ. ಎಲ್ಲಾ ನಿರ್ಧಾರಗಳನ್ನು‌ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಾರೆ. ಸಾಕಷ್ಟು ವಿಚಾರದಲ್ಲಿ ಕಾಂಗ್ರೆಸ್ ನನಗೆ ಬೇಸರ ತಂದಿದೆʼʼ ಎಂದು ಹೇಳಿದ ಅವರು, ಕುಮಾರಣ್ಣನ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಅಭ್ಯರ್ಥಿಗಳು ಇದ್ದಾರೆ. ಅವರ ಮಧ್ಯೆ ಒಬ್ಬರ ಆಯ್ಕೆ ನಡೆಯಬಹುದು. ನಿಖಿಲ್‌ ಕುಮಾರಸ್ವಾಮಿ ಅವರಿಗೆ ಈ ಬಾರಿ ಬಿಜೆಪಿ ಕೂಡಾ ದೊಡ್ಡ ಮಟ್ಟದ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಮಾಜಿ ಸಚಿವ, ಯೋಗೇಶ್ವರ್‌ ಅವರು ಇಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದರ ಜತೆಗೆ ಚಿತ್ರ ನಟಿ ರಮ್ಯಾ ಅವರು ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಸುದ್ದಿಗಳೂ ಹರಿದಾಡಿದ್ದವು.

ಇದನ್ನೂ ಓದಿ JDS Pancharatna : ಪಂಚರತ್ನ ಯಾತ್ರೆ ಸಮಾರೋಪದಲ್ಲಿ ದೇವೇಗೌಡರ ರೋಡ್‌ ಶೋ ರದ್ದು, ನೇರ ವೇದಿಕೆಗೆ

Exit mobile version