Site icon Vistara News

Gharwapsi politics | ಕಾಂಗ್ರೆಸ್‌ನಲ್ಲಿ ಶುರುವಾಯ್ತು ಘರ್‌ ವಾಪ್ಸಿ ಆಂದೋಲನ: ಖರ್ಗೆ ಭೇಟಿಯಾದ ಎಚ್‌. ವಿಶ್ವನಾಥ್‌

H Vishwanath- Mallikarjuna Kharge

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಐದು ತಿಂಗಳು ಬಾಕಿ ಉಳಿದಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರದ ಪರ್ವವೂ ಆರಂಭಗೊಂಡಿದೆ. ಅದರ ಜತೆಗೆ ಹಲವು ನಾಯಕರು ಕಾಂಗ್ರೆಸ್‌ಗೆ ಘರ್‌ ವಾಪ್ಸಿ (Gharwapsi politics) ಮಾಡುವ ಉತ್ಸಾಹದಲ್ಲಿದ್ದಾರೆ.

ಈಗ ಬಿಜೆಪಿಯಲ್ಲಿರುವ ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕರ ತಂಡವೊಂದು ಪಕ್ಷಕ್ಕೆ ಮರಳಲು ತುದಿಗಾಲಿನಲ್ಲಿ ನಿಂತಿದೆ. ಇದರ ನೇತೃತ್ವವನ್ನು ಕಾಂಗ್ರೆಸ್‌ ಬಿಟ್ಟು ಬಿಜೆಪಿಯಲ್ಲೂ ಅತಂತ್ರರಾಗಿರುವ ಎಚ್‌. ವಿಶ್ವನಾಥ್‌ ವಹಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದು ಈಗ ಮೇಲ್ಮನೆ ಸದಸ್ಯರಾಗಿದ್ದರೂ ತನ್ನನ್ನು ಮಂತ್ರಿ ಮಾಡಿಲ್ಲ ಎಂಬ ಸಿಟ್ಟು ವಿಶ್ವನಾಥ್‌ ಅವರಿಗಿದೆ. ಆದರೆ, ಬಿಜೆಪಿ ಇದಕ್ಕೆ ಅಡ್ಡಿಯಾಗಿರುವ ತಾಂತ್ರಿಕ ಅಂಶಗಳನ್ನು ಮುಂದೆ ಮಾಡಿದೆ.

ಈ ನಡುವೆ, ವಿಶ್ವನಾಥ್‌ ಅವರು ಬಿಜೆಪಿ ನಾಯಕರು ಮತ್ತು ಪಕ್ಷದ ನಿಲುವುಗಳ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಅಂಥ ವಿಶ್ವನಾಥ್‌ ಅವರು ಈಗ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜತೆಗೆ ವಿಶ್ವನಾಥ್‌ ಸಂಬಂಧ ಅಷ್ಟಕ್ಕಷ್ಟೇ ಇದೆ. ಹೀಗಾಗಿ ಎಐಸಿಸಿ ಅಧ್ಯಕ್ಷರನ್ನೇ ಭೇಟಿಯಾಗಿ ತಮ್ಮ ಮನೋ ಇಂಗಿತವನ್ನು ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ, ವಿಶ್ವನಾಥ್‌ ಅವರು ಒಬ್ಬರೇ ಅಲ್ಲ. ಅವರು ಹೀಗೆ ಕಾಂಗ್ರೆಸ್‌ಗೆ ಮರಳಲು ಬಯಸಿರುವ ಹಲವು ಮಾಜಿ ಕಾಂಗ್ರೆಸ್‌ ನಾಯಕರ ಪ್ರತಿನಿಧಿಯಾಗಿ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ ಎಂಬ ಅಭಿಪ್ರಾಯಗಳೂ ಇವೆ.

ವಿಶ್ವನಾಥ್‌ ಅವರ ಜತೆ ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಯ ನಾಯಕರು ಘರ್ ವಾಪ್ಸಿ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಲಿಕಯ್ಯ ಗುತ್ತೇದರ್ ಮತ್ತು ಬಾಬುರಾವ್ ಚಿಂಚನಸೂರ್ ಅವರ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಚ್ಚರಿ ಎಂದರೆ ಈ ಇಬ್ಬರೂ ನಾಯಕರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೆಂದೆ ಬಿಜೆಪಿ ಸೇರಿದ್ದರು. ಆದರೆ, ಈಗ ಬಿಜೆಪಿಯಲ್ಲೂ ಅವರಿಗೆ ಅಷ್ಟೊಂದು ಗೌರವ ಸಿಗುತ್ತಿಲ್ಲ. ಜತೆಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗುವ ಸಾಧ್ಯತೆಗಳೂ ಕಡಿಮೆ ಇದೆ ಎನ್ನಲಾಗಿದೆ. ಹೀಗಾಗಿ ಹೇಗಾದರೂ ಮಾಡಿ ಮರಳಿ ಕಾಂಗ್ರೆಸ್‌ ತೆಕ್ಕೆಗೆ ಸೇರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.‌

ಡಿಕೆ ಶಿವಕುಮಾರ್‌ ಅವರಿಂದಲೂ ಚರ್ಚೆ
ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹಿಂದಿನಿಂದಲೇ ಈ ಬಗೆ ಚರ್ಚೆ ನಡೆಸುತ್ತಿದ್ದಾರೆ. ಹಳೆ ಕಾಂಗ್ರೆಸಿಗರು ಮರಳಿ ಬರಬೇಕು ಎಂದು ಮನವಿಯನ್ನೂ ಮಾಡಿದ್ದರು. ಇದರ ಭಾಗವಾಗಿ ಹಿರಿಯ ನಾಯಕರಾಗಿರುವ ಮಾಲಕ ರೆಡ್ಡಿ ಜತೆ ಡಿಕೆಶಿ ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಜನವರಿಯಿಂದ ಶುರುವಾಗಲಿದೆ ಫರ್‌ ವಾಪ್ಸಿ
ಸದ್ಯಕ್ಕೆ ದೊರಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್‌ನ ಘರ್‌ ವಾಪ್ಸಿ ಚಳುವಳಿ ಜನವರಿಯಿಂದ ಆರಂಭವಾಗಲಿದೆ. ಹಲವಾರು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಕದ ತಟ್ಟಲು ಸಿದ್ಧವಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Tippu drama | ವಿವಾದದ ಸುಳಿಯಲ್ಲಿ ಟಿಪ್ಪು ನಾಟಕ, ಎಚ್. ವಿಶ್ವನಾಥ್‌ ಅಡ್ಡಮಾತಿಗೆ ಅಡ್ಡಂಡ ಕಾರ್ಯಪ್ಪ ಕೆಂಡಾಮಂಡಲ

Exit mobile version