Site icon Vistara News

Karnataka Elections : ದೊಡ್ಡೋರ ವಿಷ್ಯ ಗೊತ್ತಿಲ್ಲ ಸರ್, ಆ ಮಟ್ಟಕ್ಕೆ ನಾನು ಬೆಳೆದಿಲ್ಲ ಸರ್‌;‌ ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧೆ ಬಗ್ಗೆ ರೇವಣ್ಣ ಹೇಳಿಕೆ

HD Revanna

#image_title

ಚಿಕ್ಕಮಗಳೂರು: ʻʻದೊಡ್ಡವರ ವಿಷಯ ಗೊತ್ತಿಲ್ಲ ಸರ್… ಆ ಮಟ್ಟಕ್ಕೆ ನಾನು ಬೆಳೆದಿಲ್ಲ ಸರ್… ನನಗೆ ಶಕ್ತಿ ಇಲ್ಲ ಸರ್… ಅವರು ದೊಡ್ಡವರು… ಅವರ ಬಗ್ಗೆ ಮಾತನಾಡಲು ಶಕ್ತಿ ಇಲ್ಲ ಸರ್.. ನಮ್ಮ ಲೆವೆಲ್ ಏನಿದ್ರೂ ಇಲ್ಲೆ ಸರ್…ʼʼ- ಹೀಗೆಂದು ಹೇಳಿದರು ಮಾಜಿ ಸಚಿವ ಎಚ್‌.ಡಿ ರೇವಣ್ಣ. ಕಡೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಅವರು ನಾಮಪತ್ರ ಸಲ್ಲಿಸುವ (Karnataka Elections) ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿ ಬಂದಿದ್ದ ವೇಳೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಬಗ್ಗೆ ಎದ್ದಿರುವ ಚರ್ಚೆಗೆ ಪ್ರತಿಕ್ರಿಯಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದರೆ, ಅಲ್ಲಿ ಬಿಜೆಪಿಯ ಸಿ.ಪಿ. ಯೋಗೇಶ್ವರ್‌ ಅವರು ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಎರಡನೇ ಕ್ಷೇತ್ರವಾಗಿ ಮಂಡ್ಯವನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಒಂದು ವೇಳೆ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧಿಸಿದರೆ ಬಿಜೆಪಿ ಪರವಾಗಿ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅವರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಇದರ ಬಗ್ಗೆ ಕೇಳಿದಾಗ, ಎಚ್.ಡಿ. ರೇವಣ್ಣ ಅವರು ಇದು ನಮಗೆ ಸಂಬಂಧಿಸಿದ ವಿಚಾರ ಅಲ್ಲ ಎಂದರು.

ಕುಮಾರಸ್ವಾಮಿ ಮತ್ತು ಸುಮಲತಾ ಅವರಿಬ್ಬರ ಹೆಸರನ್ನು ಉಲ್ಲೇಖ ಮಾಡಿದ ರೇವಣ್ಣ, ʻʻಅವರ ಬಗ್ಗೆ ಗೊತ್ತಿಲ್ಲ ಸರ್… ಅವರೆಲ್ಲಾ ದೊಡ್ಡವರಿದ್ದಾರೆ. ಅಂತಹ ದೊಡ್ಡವರ ಬಗ್ಗೆ ಮಾತನಾಡಲು ನನಗೆ ಶಕ್ತಿ ಇಲ್ಲʼʼ ಎಂದು ಹೇಳಿದರು. ಅದೇ ಹೊತ್ತಿಗೆ, ಮಂಡ್ಯ ಜನ ಯಾವತ್ತೂ ದೇವೇಗೌಡರು, ಕುಮಾರಣ್ಣನ ಬಿಟ್ಟುಕೊಟ್ಟಿಲ್ಲ ಎಂದೂ ನುಡಿದರು.

ಮತ್ತೆ ಹಾಸನ ಕ್ಷೇತ್ರದ ಟಿಕೆಟ್‌ನದ್ದೇ ಸುದ್ದಿ

ಎಚ್‌.ಡಿ. ರೇವಣ್ಣ ಅವರು ಏನೇ ಮಾತನಾಡಿದರೂ ಹಾಸನದ ಜೆಡಿಎಸ್‌ ಟಿಕೆಟ್‌ ಪ್ರಸ್ತಾಪವಾಗದೆ ಇರುವುದಿಲ್ಲ. ʻʻಭವಾನಿ ರೇವಣ್ಣ ಮೂರು ವರ್ಷದಿಂದ ಒಳ್ಳೆ ಕೆಲಸ ಮಾಡುತ್ತಿದ್ದರು. ಜಿಪಂನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಆಗಿದ್ದರು. ಹಾಸನ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದು ಅವರ ಕಾಲದಲ್ಲಿ. ಭವಾನಿ ಹಾಸನದ ಒಡನಾಡಿಯಾಗಿದ್ದರು. ಹಾಗಿದ್ದರೂ ಈಗ ಪಕ್ಷದ ತೀರ್ಮಾನಕ್ಕೆ ನಾವು ಬದ್ಧʼʼ ಎಂದು ಟಿಕೆಟ್‌ ಸಿಗದಿರುವ ಬಗ್ಗೆ ಅಸಹನೆಯನ್ನು ವ್ಯಕ್ತಪಡಿಸಿದರು.

ʻʻನಮಗೆ ದೇವೇಗೌಡರು, ಪಕ್ಷ ಅಷ್ಟೆ ಮುಖ್ಯʼʼ ಎಂದು ಹೇಳಿದ ಅವರು ಹಾಸನ ಟಿಕೆಟ್‌ ಬಿಟ್ಟುಕೊಟ್ಟದ್ದಕ್ಕೆ ಸಮರ್ಥನೆ ನೀಡಿದರು. ʻʻಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜ್ಯದ ಏಕೈಕ ಸಿಎಂ ಕುಮಾರಸ್ವಾಮಿ. 38 ಸ್ಥಾನ ಬಂದ್ರು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಸಿಎಂ ಕುಮಾರಸ್ವಾಮಿ. ಮೆಜಾರಿಟಿ ಇಲ್ಲ, ಸಾಲ ಮನ್ನಾ ಮಾಡೋದು ಬೇಡ ಅಂತ ಕಾಂಗ್ರೆಸ್ ಹೇಳಿತ್ತು. ಆದರೂ ಕೊಟ್ಟ ಮಾತು ಉಳಿಸಿಕೊಂಡಿದ್ದು ಕುಮಾರಣ್ಣ ಎಂದರು ರೇವಣ್ಣ.

ಇದನ್ನೂ ಓದಿ : Mandya Politics: ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಬಿಜೆಪಿಯಿಂದ ಸುಮಲತಾ ಕಣಕ್ಕೆ: ಏನೇನು ಲೆಕ್ಕಾಚಾರಗಳು?

Exit mobile version