ಬೆಂಗಳೂರು: ನಾನು ಪಕ್ಷವನ್ನು ಕಟ್ಟಿದ ವ್ಯಕ್ತಿ. ಯಾವತ್ತೂ ಪಕ್ಷ ದ್ರೋಹ ಮಾಡುವವನಲ್ಲ. ಹತ್ತು ಬಾರಿ ಯೋಚನೆ ಮಾಡಿಯೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಸೋಮವಾರವಷ್ಟೇ ಕಾಂಗ್ರೆಸ್ ಸೇರಿದ (Karnataka Elections) ಮಾಜಿ ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕಾಂಗ್ರೆಸ್ ಸೇರಿದ ಬಳಿಕ ಕೆಪಿಸಿಸಿ ಕಚೇರಿಯಲ್ಲೇ ಧಾರವಾಡ ಸೆಂಟ್ರಲ್ ಕ್ಷೇತ್ರದ ಸ್ಪರ್ಧೆಗಾಗಿ ಅವರು ಬಿ ಫಾರಂನ್ನು ಸ್ವೀಕರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿ ಫಾರಂ ನೀಡಿದರು.
ಈ ವೇಳೆ ಶೆಟ್ಟರ್ ಪಕ್ಷ ದ್ರೋಹ ಮಾಡಿದ್ದಾರೆ ಎಂಬ ಕೆಲವರ ಆರೋಪಗಳಿಗೆ ಅವರು ಉತ್ತರ ನೀಡಿದರು. ʻʻಇಷ್ಟು ದಿನ ಪಕ್ಷ ದ್ರೋಹ ಅನ್ನುವ ಆರೋಪ ಇರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಈಗ ಮಾತಾಡ್ತಿರೋರು ಪಕ್ಷಕ್ಕೆ ಬಂದ ಹೊಸಬರು. ಪಾರ್ಟಿಗೆ ಹೊಸದಾಗಿ ಬಂದವರು ಮಾತಾಡ್ತಿದ್ದಾರೆ, ಮಾತಾಡಲಿ. ಅವರ ವಿಷಯಗಳು ನನಗೆ ಗೊತ್ತಿದೆ. ನಾನಂತೂ 10 ಬಾರಿ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆʼʼ ಎಂದು ಹೇಳಿದರು.
ಸಾವಿರಾರು ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಉತ್ತಮ ನಿರ್ಧಾರ ಮಾಡಿದ್ದೀರಾ ಅಂತ ಹೇಳಿದ್ದಾರೆ ಎಂದು ಶೆಟ್ಟರ್ ನುಡಿದರು.
ʻʻಕೆಲವೇ ಕೆಲವು ವ್ಯಕ್ತಿಗಳು ಪಾರ್ಟಿಯನ್ನು ಕಂಟ್ರೋಲ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲ ಹಿರಿಯ ನಾಯಕರು ಅಡ್ಡಿಯಾಗಿದ್ದೇವೆ. ಅದಕ್ಕಾಗಿ ನಮ್ಮನ್ನು ಬದಿಗೆ ಸರಿಸುವ ಪ್ರಯತ್ನ ನಡೆಯುತ್ತಿದೆʼʼ ಎಂದು ಶೆಟ್ಟರ್ ಆರೋಪಿಸಿದರು.
ʻʻಇಷ್ಟು ದಿನ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ ಈಗ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದು ಕಷ್ಟವಾಗುವುದಿಲ್ಲವೇ?ʼ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಕೂಡಾ ರಾಷ್ಟ್ರೀಯ ಪಕ್ಷ. ವ್ಯವಸ್ಥೆಯಲ್ಲಿ ಇದೆಲ್ಲ ಇರುತ್ತದೆ. ಯಾರಿಂದ ನನಗೆ ಅನ್ಯಾಯ ಆಗಿದೆ ಅಂತ ಈಗಾಗಲೇ ಹೇಳಿದ್ದೇನೆʼʼ ಎಂದು ಸ್ಪಷ್ಟಪಡಿಸಿದರು.
ಶೆಟ್ಟರ್‌ಗೆ ಮಾತ್ರ ಟಿಕೆಟ್ ಎಂದ ಶಾಮನೂರು
ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರಾದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯಲ್ಲಿ ಮಾತನಾಡಿ, ʻʻʻಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರೋದಲ್ಲ, ಆಗಲೇ ಬಿ ಫಾರಂ ತಂದಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ನಿಂದ ಶೆಟ್ಟರ್ ಸ್ಪರ್ಧೆ ಮಾಡ್ತಾರೆ ಎಂದರು.
ʻʻಸರ್ಕಾರ ನಮ್ದೇ ಮಾಡುತ್ತೇವೆʼ ಎಂದು ಭರವಸೆಯಿಂದ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಶೆಟ್ಟರ್ ಗೆ ಮಾತ್ರ ಟಿಕೆಟ್, ಪುತ್ರನಿಗೆ ಇಲ್ಲ ಎಂದರು.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದೇಕೆ?
ಜಗದೀಶ್ ಶೆಟ್ಟರ್ ಅವರು ಸುಮಾರು 40 ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಇದೀಗ ಈ ಬಾರಿ ವಿಧಾನಸಭಾ ಟಿಕೆಟ್ ನೀಡಲಾಗುವುದಿಲ್ಲ ಎಂಬ ಹೈಕಮಾಂಡ್ ಸೂಚನೆಯಿಂದ ಬೇಸತ್ತು ಶಾಸಕತ್ವ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಂಮೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ, ಬಿಜೆಪಿಯ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ರಾತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಪಕ್ಷ ಬಿಡದಂತೆ ಮನವೊಲಿಸಿದ್ದರು. ಬಿಜೆಪಿ ಟಿಕೆಟ್ ಒಂದು ಬಿಟ್ಟು ಬೇರೆ ಯಾವುದೇ ಸ್ಥಾನಮಾನಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಆದರೆ, ಜಗದೀಶ್ ಶೆಟ್ಟರ್ ಮಾತ್ರ, ಶಾಸಕ ಸ್ಥಾನದ ಟಿಕೆಟ್ ಒಂದು ಬಿಟ್ಟು ಬೇರೆ ಯಾವ ಸ್ಥಾನಮಾನವೂ ಬೇಡ ಎಂದು ಹಠ ಮಾಡಿದ್ದರು. ಇದರಿಂದಾಗಿ ಮಾತುಕತೆ ಫಲ ನೀಡದೆ ಶೆಟ್ಟರ್ ಅವರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದರು.
ಇದನ್ನೂ ಓದಿ : Karnataka Elections : ಕಾಂಗ್ರೆಸ್ ಕೈ ಹಿಡಿದ ಸಂಘ ಪರಿವಾರದ ಹಿರಿಯ ನಾಯಕ; ಶೆಟ್ಟರ್ ರಾಜಕೀಯ ಮಹಾಪಯಣದ ಹಿನ್ನೋಟ ಇಲ್ಲಿದೆ