Site icon Vistara News

Karnataka Elections 2023 : ಅಪ್ಪನಂತೆ ನಾನೂ ರೈತರ ಸೇವಕನಾಗುತ್ತೇನೆ; ಶಿಕಾರಿಪುರ ಕಣಕ್ಕಿಳಿದ ಬಿವೈ ವಿಜಯೇಂದ್ರ

Vijayendra nomination

#image_title

ಶಿವಮೊಗ್ಗ: ʻತಂದೆಯವರ ಕಾರ್ಯವೈಖರಿಯನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ನಾನು ಕೂಡ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ, ರೈತನ ಮಗನಾಗಿ ಬೆಳೆಯಲು ಇಚ್ಛೆ ಪಡುತ್ತೇನೆ, ರೈತರ ಸೇವಕನಾಗುತ್ತೇನೆʼʼ- ಹೀಗೆಂದು ಘೋಷಿಸಿದರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ವಿಧಾನಸಭಾ (Karnataka Elections 2023) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ. ತಂದೆ ಬಿ.ಎಸ್.‌ ಯಡಿಯೂರಪ್ಪ ಅವರು ಹಾಕಿಕೊಟ್ಟ ದಾರಿಯಲ್ಲಿ ಮುಂದುವರಿಯುತ್ತೇನೆ, ಯಾರ ಭಾವನೆಗೂ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್‌ ರೋಡ್‌ ಶೋದಲ್ಲಿ ಪಾಲ್ಗೊಂಡ ಅವರು, ನಂತರ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಸಮಾವೇಶದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ

ʻʻವಿಜಯೇಂದ್ರ ಶಿಜಾರಿಪುರದಲ್ಲಿ ನಾಮಪತ್ರ ಸಲ್ಲಿಸಲು ಬಿಎಸ್ವೈ ಕಾರಣರಲ್ಲ. ಇದು ನನ್ನ, ರಾಘವೇಂದ್ರ ಅವರ ಇಚ್ಛೆಯಲ್ಲ. ಯಡಿಯೂರಪ್ಪ ನಿವೃತ್ತಿ ಘೋಷಿಸಿದಾಗ ಪಕ್ಷದ ಮುಖಂಡರ ಒತ್ತಾಸೆ ಇದಾಗಿತ್ತು. ಕ್ಷೇತ್ರದ ಆಗ್ರಹಕ್ಕೆ ಬಿಎಸ್ವೈ, ಪಕ್ಷದ ನಾಯಕರು ಅನುಮತಿ ಕೊಟ್ಟಿದ್ದಾರೆ. ಬಿಎಸ್‌ವೈ ಅವರಿಗೆ ರಾಜಕೀಯ ಜನ್ಮ ನೀಡಿದ ಶಿಕಾರಿಪುರ ನನಗೂ ರಾಜಕೀಯ ಜೀವನದ ಆರಂಭಕ್ಕೆ ವೇದಿಕೆ ಆಗುತ್ತಿರುವುದು ನನ್ನ ಪುಣ್ಯʼʼ ಎಂದು ಹೇಳಿದರು.

ನಮ್ಮ ಮನೆಗೆ ಕಲ್ಲು ತೂರಿದ್ದು ಲಂಬಾಣಿಗಳಲ್ಲ ಎಂದ ರಾಘವೇಂದ್ರ

ಸಮಾವೇಶದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಲಂಬಾಣಿ ಸಮುದಾಯದವರು ನಮ್ಮ ಮನೆ ಮೇಲೆ ಕಲ್ಲು ತೂರಿಲ್ಲ. ಬದಲಾಗಿ ಕಾಂಗ್ರೆಸ್ ನ ಕೆಲವು ಕಿಡಿಗೇಡಿಗಳು ಬಂಜಾರರ ಹೆಸರಿನಲ್ಲಿ ದಾಳಿ ನಡೆಸಿದ್ದರು. ಬಂಜಾರ ಸಮುದಾಯ ಎಂದಿಗೂ ನಮ್ಮ ಜೊತೆಯಲ್ಲೇ ಇದೆ ಎಂದು ಹೇಳಿದರು.

ಗಿಡಕ್ಕೆ ನೀರು ಹಾಕುವ ಮೂಲಕ ಸಮಾವೇಶದ ಉದ್ಘಾಟನೆ

ಒಬ್ಬೊಬ್ಬರು ಐವರಿಂದ ಮತ ಹಾಕಿಸಿ ಎಂದ ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ನನ್ನ ರೀತಿಯಲ್ಲೇ ವಿಜಯೇಂದ್ರಗೂ ಗೆಲ್ಲಿಸಬೇಕೆಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು. ನೀವು ಮತ ನೀಡಬೇಕು ಜೊತೆಗೆ ಒಬ್ಬೊಬ್ಬರು 5 ಜನರಿಂದ ವೋಟನ್ನು ಕೊಡಿಸುವ ಕೆಲಸವನ್ನು ಮಾಡಬೇಕು. ಹೀಗೆ ಆದಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ 50,000 ಮತಗಳಿಂದ ಗೆಲ್ಲುತ್ತಾರೆ ಎಂದರು.

ರೋಡ್‌ ಶೋ ವಾಹನದಲ್ಲಿ ನಾಯಕರು

ಉಮೇದುವಾರಿಕೆ ಸಲ್ಲಿಕೆಗೂ ಮೊದಲು ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜೊತೆಗೆ ರಾಯರ ಮಠಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಸಂಸದ ಹಾಗೂ ಸಹೋದರ ಬಿ.ವೈ. ರಾಘವೇಂದ್ರ ಸೇರಿದಂತೆ ಕುಟುಂಬ ಸದಸ್ಯರು, ಹಲವರು ಉಪಸ್ಥಿತರಿದ್ದರು.

ಬಳಿಕ ಸಾಗಿದ ಮೆರವಣಿಗೆಯಲ್ಲಿ ಪ್ರಮುಖರಾದ, ಬಿ.ಎಸ್. ಯಡಿಯೂರಪ್ಪ. ಎಂಟಿಬಿ ನಾಗರಾಜ್, ಕೇಂದ್ರ ಸಚಿವ ನಾರಾಯಣಸ್ವಾಮಿ, ಶೃತಿ, ಶಾಸಕರಾದ ಪಿ.ರಾಜೀವ್, ರಾಜುಗೌಡ, ಎಸ್. ರುದ್ರೇಗೌಡ, ಹರತಾಳು ಹಾಲಪ್ಪ, ಭಾರತಿ ಶೆಟ್ಟಿ, ಸಂಸದರಾದ ಬಿ.ವೈ. ರಾಘವೇಂದ್ರ, ಉಮೇಶ್ ಜಾಧವ ಮೊದಲಾದವರು ಭಾಗಿಯಾಗಿದ್ದರು. ಮೆರವಣಿಗೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೆರೆದಿದ್ದರು. ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಪರ ಘೋಷಣೆ ಕೂಗಿ ಬಂದಿತು. ದೇಶಕ್ಕೆ ನರೇಂದ್ರ, ರಾಜ್ಯಕ್ಕೆ ವಿಜಯೇಂದ್ರ ಎಂಬ ಘೋಷಣೆ ತೇಲಿ ಬಂದಿತು.

ರೋಡ್‌ ಶೋನಲ್ಲಿ ಭಾಗವಹಿಸಿದ ಜನರು

ಸಾಂಪ್ರದಾಯಿಕ ದಿರಸಿನಲ್ಲಿ ಬಂದ ಬಂಜಾರ ಸಮುದಾಯದ ಜನರು

ಒಟ್ಟಾರೆ ಇಂದಿನ ಚುನಾವಣಾ ನಾಮಪತ್ರ ಸಲ್ಲಿಕೆಯ ಸಮಾವೇಶದಲ್ಲಿ ಬಂಜಾರ ಸಮುದಾಯದವರನ್ನು ಸಾಂಪ್ರದಾಯಿಕ ಧಿರಿಸಿನಲ್ಲಿ ಕೂರಿಸಿ, ಬಂಜಾರ ಸಮುದಾಯದ ಶಾಸಕರ ಮೂಲಕ ಭಾಷಣ ಮಾಡಿಸಿ, ಬಂಜಾರರು ನಮ್ಮ ಜೊತೆಲ್ಲಿದ್ದಾರೆ. ನಮ್ಮನೆಗೆ ಕಲ್ಲು ಹೊಡೆದವರು ಬಂಜಾರರಲ್ಲಾ ಎಂಬ ಮೆಸೆಜ್ ರವಾನಿಸಿದಂತಾಗಿದೆ. ಒಟ್ಟಾರೆಯಾಗಿ ರಾಜಾಹುಲಿ ಬಿ.ಎಸ್.ವೈ. ಬಳಿಕ ಹೆಬ್ಬುಲಿ ವಿಜಯೇಂದ್ರ ಶಿಕಾರಿಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಎಷ್ಟು ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ ; Karnataka Election 2023: ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ; ಊರ ಹಬ್ಬದಂತೆ ಸಂಭ್ರಮಿಸಿದ ಜನ

Exit mobile version