Site icon Vistara News

Karnataka Elections : ಇವತ್ತಿಗೇ ಎಲ್ಲವೂ ಮುಗಿದಿಲ್ಲ, ಒಬ್ಬೊಬ್ಬರ ಕಥೆನೂ ಹೇಳ್ತೇನೆ; ಬಿಜೆಪಿಗೆ ರಾಜೀನಾಮೆ ಘೋಷಿಸಿದ ಶೆಟ್ಟರ್ ಆಕ್ರೋಶ

jagadish Shettar

#image_title

ಹುಬ್ಬಳ್ಳಿ: ಬಿಜೆಪಿಯಲ್ಲಿ ಏನೋ ಒಂದು ಷಡ್ಯಂತ್ರ ನಡೆಯುತ್ತಿದೆ. ಬಿ.ಎಸ್‌. ಯಡಿಯೂರಪ್ಪ ಚುನಾವಣಾ ರಾಜಕೀಯ ಬಿಟ್ಟರು. ಈಶ್ವರಪ್ಪ ಇತ್ತೀಚೆಗೆ ನಿವೃತ್ತಿ ಘೋಷಿಸಿದರು. ಈಗ ನಾನೇ ಸೀನಿಯರ್ ಇದ್ದೇನೆ. ಹೀಗಾಗಿ ನನ್ನನ್ನು ಮೂಲೆಗುಂಪು ಮಾಡಲು ಯತ್ನ ನಡೆಯುತ್ತಿದೆ ಎಂದು ಬಿಜೆಪಿಗೆ ಗುಡ್‌ ಬೈ ಹೇಳಲು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish shettar) ಹೇಳಿದ್ದಾರೆ.

ಶನಿವಾರ ಇಡೀ ದಿನ ಹೈಕಮಾಂಡ್‌ನಿಂದ ಶುಭ ಸಂದೇಶವೊಂದು ಬರಬಹುದು, ಕಟ್ಟ ಕಡೆಗಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಕಡೆಯ ಅವಕಾಶ ಸಿಗಬಹುದು ಎಂದು ಕಾಯುತ್ತಿದ್ದ ಜಗದೀಶ್‌ ಶೆಟ್ಟರ್‌ ಅವರಿಗೆ ಅಂತಿಮವಾಗಿ ನಿರಾಸೆಯಾಗಿದೆ. ಬಿಜೆಪಿ ಹೈಕಮಾಂಡ್‌ನಿಂದ ಕಳುಹಿಸಲ್ಪಟ್ಟ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಸಿಎಂ ಬಸವರಾಜ ಬೊಮ್ಮಾಯಿ ಅವರು ಜಗದೀಶ್‌ ಶೆಟ್ಟರ್‌ ಅವರ ಮನವಿಯನ್ನು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಸ್ಪರ್ಧೆಗೆ ಅವಕಾಶವೊಂದನ್ನು ಬಿಟ್ಟರೆ ಬೇರೆ ಯಾವ ವಿಚಾರವನ್ನು ಒಪ್ಪಲು ಜಗದೀಶ್‌ ಶೆಟ್ಟರ್‌ ಕೂಡಾ ಸಿದ್ಧರಿರಲಿಲ್ಲ. ಅಂತಿಮವಾಗಿ ಸಂಧಾನ ಸಭೆ ವಿಫಲವಾಗಿದ್ದು, ಶೆಟ್ಟರ್‌ ಅವರು ತಮ್ಮ ಬಿಜೆಪಿಯ ಅಂಗಡಿಗೆ ಶಟರ್‌ ಹಾಕಲು ನಿರ್ಧರಿಸಿದರು.

ಬಳಿಕ ಬಹಳ ನೋವಿನಿಂದ ಮಾತನಾಡಿದ ಅವರು, ಭಾರವಾದ ಮನಸಿನಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದರು. ಭಾನುವಾರ ಸ್ಪೀಕರ್‌ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದಲೂ ದೂರ ಸರಿಯಲು ಯತ್ನಿಸಿರುವ ಜಗದೀಶ್‌ ಶೆಟ್ಟರ್‌ ಮುಂದೇನು ಮಾಡಬೇಕು ಎನ್ನುವ ವಿಚಾರದಲ್ಲೂ ಸ್ಪಷ್ಟತೆಯನ್ನು ಹೊಂದಿದಂತೆ ಕಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಬಲಾಢ್ಯವಾಗುತ್ತಿದೆ. ಆದರೆ ಅವರ ಗಮನಕ್ಕೆ ಬರದೆ ಕೆಲವು ಕೆಲಸ ಕಾರ್ಯ ನಡೆಯುತ್ತಿವೆ ಅಂತಾ ಬೇಸರ ಆಗುತ್ತಿದೆ. ನಾನು ಬಹಳ ನೊಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಿದ್ದೇನೆ ಎಂದು ಹೇಳಿದ ಶೆಟ್ಟರ್‌, ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ,‌ ಮುಂದಿನ ತೀರ್ಮಾನ ನಂತರ ತೆಗೆದುಕೊಳ್ಳುತ್ತೇನೆ ಎಂದರು.

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ ಅವರು, ʻʻಎಲ್ಲಾ ಇವತ್ತೇ ಮುಗಿಯಲ್ಲ, ಕಾಯ್ದು ನೋಡಿ. ಯಾರ್ಯಾರು ತೊಂದರೆ ಕೊಟ್ಟರು ಎನ್ನುವುದನ್ನು ಒಂದೊಂದಾಗಿ ಹೇಳ್ತೇನೆ, ತೆರೆ ಮೇಲೆ ಒಂದೊಂದಾಗಿ ಬರುತ್ತೆ ಕಾಯಿರಿʼʼ ಎಂದರು. ಕಟ್ಟಿದ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ತುಂಬ ನೋವಾಗುತ್ತಿದೆ. ಯಾರೆಲ್ಲಾ ಷಡ್ಯಂತ್ರ ಮಾಡಿದ್ರು ನಾಳೆಯಿಂದ ಹೇಳ್ತೇನೆ ಎಂದು ಶೆಟ್ಟರ್‌ ಹೇಳಿದರು.

ʻʻಬೇರೆ ಬೇರೆ ಹಂತದಲ್ಲಿ ಎಲ್ಲರೂ ಮಾತಾಡಿದರು. ನಾಳೆಯಿಂದ ಎಲ್ಲ ಅತೃಪ್ತರ ಜೊತೆ ಮಾತಾಡ್ತೇನೆ. ಅವರೆಲ್ಲರನ್ನು ಸಂಘಟಿಸುತ್ತೇನೆʼʼ ಎಂದು ತಮ್ಮ ಮುಂದಿನ ಪ್ಲ್ಯಾನ್‌ ಬಗ್ಗೆ ಮಾತನಾಡಿದರು.

ʻಕಿವಿ ತುಂಬುವವರು ಕಳೆದ ಮೂರು ತಿಂಗಳಿಂದ ಕಿರಿಕಿರಿ ಮಾಡುತ್ತಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳಿಂದ ಪಾರ್ಟಿ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆʼʼ ಎಂದು ಆಕ್ರೋಶದಿಂದ ನುಡಿದರು ಜಗದೀಶ್‌ ಶೆಟ್ಟರ್‌.

ಇದನ್ನೂ ಓದಿ : Karnataka Election 2023: ಬಿಜೆಪಿ ನಾಯಕರ ಸಂಧಾನ ವಿಫಲ; ಭಾನುವಾರ ಬೆಳಗ್ಗೆ ರಾಜೀನಾಮೆ ನೀಡಲು ಜಗದೀಶ್ ಶೆಟ್ಟರ್‌ ನಿರ್ಧಾರ

Exit mobile version