Site icon Vistara News

Karnataka Elections 2023 : ವರುಣ ಆಪ್ಶನ್‌ ಇನ್ನೂ ಓಪನ್‌ ಇಟ್ಟಿದ್ದಾರಾ ಬಿ.ವೈ ವಿಜಯೇಂದ್ರ; ಕಾರ್ಯಕರ್ತರಿಗೆ ಹೇಳಿದ್ದೇನು?

siddaramaiah, vijayendra

#image_title

ಬೆಂಗಳೂರು: ಬಿ.ವೈ. ವಿಜಯೇಂದ್ರ ಅವರು ಯಾವ ಕಾರಣಕ್ಕೂ ವರುಣದಲ್ಲಿ ಸ್ಪರ್ಧಿಸುವುದಿಲ್ಲ (Karnataka Elections 2023). ಅವರು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಶುಕ್ರವಾರ ಸ್ಪಷ್ಟ ಶಬ್ದಗಳಲ್ಲಿ ಹೇಳಿದ ಬಳಿಕವೂ ವರುಣ ಆಯ್ಕೆ ಇನ್ನೂ ಮುಕ್ತವಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಎಲ್ಲವೂ ವರಿಷ್ಠರ ನಿರ್ಧಾರದಂತೆ ಆಗಲಿದೆ ಎಂದು ವಿಜಯೇಂದ್ರ ಹೇಳಿರುವುದು ಕುತೂಹಲ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರ ಸೇಫಲ್ಲ ಎಂಬ ಕಾರಣಕ್ಕೆ ವರುಣ ಕ್ಷೇತ್ರಕ್ಕೆ ಶಿಫ್ಟ್‌ ಆಗಿದ್ದಾರೆ. ಆದರೆ, ಅವರನ್ನು ಅಲ್ಲೂ ಸುಲಭದಲ್ಲಿ ಗೆಲ್ಲಲು ಬಿಡಬಾರದು, ಹೇಗಾದರೂ ಮಾಡಿ ಸೋಲಿಸಬೇಕು ಎನ್ನುವ ಯೋಚನೆ ಬಿಜೆಪಿಯಲ್ಲಿದೆ. ಅದಕ್ಕಾಗಿ ಬಿಜೆಪಿಯ ಹಿರಿಯ ನಾಯಕರು ಯೋಚಿಸಿದ ಮೊದಲ ಹೆಸರು ಬಿ.ವೈ. ವಿಜಯೇಂದ್ರ. 2018ರಲ್ಲೇ ವರುಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಅವರು ವರುಣದಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರು ಸ್ಪರ್ಧೆ ಮಾಡದೆ ಚುನಾವಣೆ ತಂತ್ರಗಾರಿಕೆಯನ್ನು ವಹಿಸಿಕೊಂಡರು.

ಈ ಬಾರಿ ಅಮಿತ್‌ ಶಾ ಅವರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲೇ ವಿಜಯೇಂದ್ರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿತ್ತು. ಇದನ್ನು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರಿಬ್ಬರೂ ಒಪ್ಪಿಕೊಂಡಿದ್ದರು. ಶುಕ್ರವಾರ ಮೈಸೂರಿಗೆ ಭೇಟಿ ನೀಡಿದ್ದ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರು ಆಪ್ತರು ಮತ್ತು ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಯಡಿಯೂರಪ್ಪ ಅವರು ಯಾವ ಕಾರಣಕ್ಕೂ ವಿಜಯೇಂದ್ರ ವರುಣದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆದರೆ, ಕಾರ್ಯಕರ್ತರು ಮಾತ್ರ ವಿಜಯೇಂದ್ರ ಅವರೇ ಸ್ಪರ್ಧಿಸಬೇಕು ಎಂದು ಹಠ ಹಿಡಿದಿದ್ದಾರೆ. ಸಿದ್ದರಾಮಯ್ಯ ಅವರಿಂದ ತಾವು ಹೊಡೆತ ತಿಂದಿದ್ದೇವೆ. ಅವರನ್ನು ಎದುರಿಸಲು ನಿಮ್ಮಂಥ ಹುಲಿಯೇ ಬೇಕು ಎಂದು ಅವರೆಲ್ಲ ಬೇಡಿಕೆ ಮಂಡಿಸಿದ್ದರು. ಈ ಹಂತದಲ್ಲಿ ಅವರಿಗೆ ಸಮಾಧಾನ ಹೇಳಿದ ವಿಜಯೇಂದ್ರ ಹೈಕಮಾಂಡ್‌ ಅಂತಿಮ ನಿರ್ಧಾರ ಮಾಡಲಿದೆ ಎಂದಿದ್ದಾರೆ.

ಎರಡು ಕಡೆ ನಿಲ್ಲಿಸುತ್ತಾ ಹೈಕಮಾಂಡ್‌?

ಬಿ.ಎಸ್‌ ಯಡಿಯೂರಪ್ಪ ಅವರು ಕಡ್ಡಿ ಮುರಿದಂತೆ, ವಿಜಯೇಂದ್ರ ಅವರು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ. ಹೈಕಮಾಂಡ್‌ಗೂ ಇದನ್ನು ಮನವರಿಕೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿಯ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಒಂದೊಮ್ಮೆ ವಿಜಯೇಂದ್ರ ವರುಣದಲ್ಲಿ ಸ್ಪರ್ಧಿಸಿ ಸೋತರೆ ರಾಜಕೀಯ ಪ್ರವೇಶವೇ ಸೋಲಿನಿಂದ ಆರಂಭವಾಗುತ್ತದೆ. ಇದು ಭವಿಷ್ಯಕ್ಕೆ ಹಿನ್ನಡೆ ಆಗಬಹುದು ಎನ್ನುವುದು ಬಿಎಸ್‌ವೈ ಆತಂಕ. ಹಾಗಿದ್ದರೆ ಒಂದು ವೇಳೆ ಶಿಕಾರಿಪುರದ ಜತೆಗೆ ವರುಣ ದ್ವಿಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟರೆ ಬಿಎಸ್‌ವೈ ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆಯೂ ಇದೆ.

ವಿಜಯೇಂದ್ರ ಅವರು ಕಾರ್ಯಕರ್ತರ ಜತೆ ಮಾತನಾಡುವಾಗ ದೆಹಲಿ ವರಿಷ್ಠರು ಎರಡು ಕ್ಷೇತ್ರಗಳಲ್ಲಿ ನಿಲ್ಲಲು ಸೂಚನೆ ಕೊಟ್ಟರೆ ನಿಲ್ಲಲೂಬಹುದು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ೧೧ನಾನು ನಮ್ಮ ತಂದೆ ಯಡಿಯೂರಪ್ಪ ಅವರ ಮಾತು ಮೀರಲ್ಲ. ಆದರೆ ವರುಣದಲ್ಲಿ ನಿಲ್ಲಲ್ಲೇಬೇಕು ಅಂತ ವರಿಷ್ಠರು ಸೂಚಿಸಿದ್ರೆ ನಾನು ಸ್ಪರ್ಧೆ ಮಾಡಲು ರೆಡಿ ಇದ್ದೇನೆ. ಹೀಗಾಗಿ ಈ ವಾರದಲ್ಲಿ ದೆಹಲಿಯಲ್ಲಿ ಆಗುವ ಸಂಸದೀಯ ಸಭೆಯಲ್ಲಿ ಎಲ್ಲವೂ ತೀರ್ಮಾನ ಆಗಲಿದೆʼʼ ಎಂದಿದ್ದಾರೆ ವಿಜೇಯೇಂದ್ರ.

ಯಡಿಯೂರಪ್ಪ ವರುಣ ಸ್ಪರ್ಧೆ ಇಲ್ಲ ಎಂದು ಹೇಳಿದ ಮೇಲೂ ದೆಹಲಿ ವರಿಷ್ಠರು ಸೂಚಿಸಿದ್ರೆ ಸ್ಪರ್ಧೆ ಎಂದು ವಿಜಯೇಂದ್ರ ಹೇಳಿರುವುದರಿಂದ ಈ ಎಲ್ಲ ಚರ್ಚೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ : B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ

Exit mobile version