ಮೈಸೂರು: ಹೈಕಮಾಂಡ್ ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದಿದ್ದರೂ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ (Karnataka Elections) ನಿಲ್ಲುತ್ತಿದ್ದಾರಾ ಮಾಜಿ ಸಚಿವ ವಿ ಸೋಮಣ್ಣ? ಹೀಗೆಂದು ಸಂಸದ ಶ್ರೀನಿವಾಸ್ ಪ್ರಸಾದ್ ಬಳಿ ಅಳಲು ತೋಡಿಕೊಂಡರಾ ಸೋಮಣ್ಣ?
ಚಾಮರಾಜ ಮತ್ತು ವರುಣ ಕ್ಷೇತ್ರದ ಅಭ್ಯರ್ಥಿಯಾಗಿ ಅಯ್ಕೆಯಾಗಿರುವ ವಿ. ಸೋಮಣ್ಣ ಅವರು ಗುರುವಾರ ಅಧಿಕೃತವಾಗಿ ಅಖಾಡಕ್ಕೆ ಇಳಿದರು. ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಅವರು ಮೊದಲು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ಮಲ್ಲನ ಮೂಲೆ ಮಠ, ನಂಜನಗೂಡಿನ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಂತರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮನೆಗೆ ಭೇಟಿ ನೀಡಿದರು.
ಮೈಸೂರಿನ ಜಯಲಕ್ಷ್ಮಿ ಪುರಂ ನಿವಾಸದಲ್ಲಿ ಸೋಮಣ್ಣ ಅವರನ್ನು ಭೇಟಿ ಮಾಡಿದ ಶ್ರೀನಿವಾಸ ಪ್ರಸಾದ್ ಬಳಿಕ ಸುದ್ದಿಗಾರರ ಜತೆ ಮಾಡನಾಡಿ, ʻʻವರುಣ ಕ್ಷೇತ್ರದ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೀವಿ. ಎಲ್ಲವನ್ನ ಬಹಿರಂಗವಾಗಿ ಹೇಳಲಾಗಲ್ಲ ಎಂದರು.
ಶ್ರೀನಿವಾಸ ಪ್ರಸಾದ್ ಅವರ ಜತೆ ಮಾತನಾಡುವಾಗ ಸೋಮಣ್ಣ ಅವರು, ʻʻನನ್ನದೊಂದು ರೀತಿ ಇಕ್ಕಟ್ಟಿನ ಸ್ಥಿತಿ ಇದೆ. ಹೈಕಮಾಂಡ್ ಎರಡು ಕ್ಷೇತ್ರದಲ್ಲಿ ನಿಲ್ಲಲೇ ಬೇಕು ಎಂದು ಹೇಳಿದೆ. ಆ ಪ್ರಕಾರ ನಾನು ಚುನಾವಣೆಗೆ ನಿಲ್ಲಲೇಬೇಕಿದೆ. ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿರೊದ್ರ ಹಿಂದೆ ಯಾವುದೇ ಚುನಾವಣೆ ತಂತ್ರ ಇಲ್ಲ. ಎರಡು ಕಡೆ ನಿಲ್ಲೋದರ ಬಗೆಗೆ ಹೈಕಮಾಂಡ್ ಬಲವಂತದಿಂದ ನಿಲ್ಲುತ್ತಿದ್ದೇನೆʼʼ ಎಂದಿದ್ದಾರೆ ಎನ್ನಲಾಗಿದೆ.
ನಾನು ಈ ಕ್ಷೇತ್ರದಲ್ಲಿ ಈ ಕ್ಷೇತ್ರದಲ್ಲಿ ನೆಪ ಮಾತ್ರ
ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ವಿ. ಸೋಮಣ್ಣ ಅವರು, ʻʻನಾನು ಈ ಕ್ಷೇತ್ರದಲ್ಲಿ ನೆಪ ಮಾತ್ರ. ನನ್ನ ಕಾರ್ಯಕರ್ತರು, ಮುಖಂಡರು, ಪಕ್ಷದ ಶಕ್ತಿಯೇ ದೊಡ್ಡದು. ಇಲ್ಲಿ ಯಾವ ಮುಖಂಡರು ಚಿಕ್ಕವರು ಅಲ್ಲ. ದೊಡ್ಡವರು ಅಲ್ಲ. ಎಲ್ಲಕ್ಕಿಂತ ಪಕ್ಷ, ಕಾರ್ಯಕರ್ತರು ದೊಡ್ಡವರು. ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆʼʼ ಎಂದು ಹೇಳಿದರು.
ʻʻನಾನೇನೂ ಇಲ್ಲಿ ಶಾಶ್ವತ ಅಲ್ಲ. ನಮ್ಮ ಪಕ್ಷದ ವ್ಯವಸ್ಥೆಗಳು ಇರುವ ರೀತಿ ನಾವು ಇರಬೇಕು. ಅವರು ಎಂತಹ ನಾಯಕರಾದರೂ ಅವರು ಇಲ್ಲಿ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೆʼʼ ಎಂದು ಹೇಳಿದ ಸೋಮಣ್ಣ, ಗೋವಿಂದರಾಜ ನಗರದ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯುತ್ತದೆ. ಅಲ್ಲಿಯ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ನುಡಿದರು.
ಏಪ್ರಿಲ್ 14ರಿಂದ ವರುಣ ಕ್ಷೇತ್ರದ ಪ್ರಚಾರ ಆರಂಭ ಮಾಡುತ್ತೇನೆ. ಪ್ರತಿ ಹಳ್ಳಿ – ಹಳ್ಳಿಯನ್ನು ಸುತ್ತುತ್ತೇನೆ ಎಂದು ಹೇಳಿದರು ಸೋಮಣ್ಣ.
ಇದು ಕಡೆಯ ಚುನಾವಣೆಯಲ್ಲ
ಅದಕ್ಕಿಂತ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು, ʻʻಯಾಕೋ ಏನೋ ವರಿಷ್ಠರು ವರುಣಕ್ಕೆ ಕಳುಹಿಸಿದ್ದಾರೆ. ನನಗೆ 72 ವರ್ಷ ವಯಸ್ಸಾಗಿದೆ. 75 ತುಂಬಿದ ಮೇಲೆ ನಮ್ಮ ಪಕ್ಷದವರು ಏನು ಮಾಡುತ್ತಾರೆ ಎಂಬುದನ್ನು ನೋಡುತ್ತಿದ್ದೇವೆ. ಇದು ನನ್ನ ಕಡೆ ಚುನಾವಣೆಯಲ್ಲʼʼ ಎಂದು ಹೇಳಿದ್ದರು.
ʻʻಚುನಾವಣೆಗಳು ಬಂದು ಹೋಗುತ್ತವೆ. ಅಧಿಕಾರ ಸಿಕ್ಕಾಗ ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುದು ಮುಖ್ಯ.. ಚಾಮರಾಜನಗರ ಜಿಲ್ಲೆಗೆ ನಾನು ಬೇಕು. ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಬೇಕು. ಕಡಿಮೆ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ. ಸಣ್ಣಪುಟ್ಟ ಸಮಸ್ಯೆಗಲು ಎಲ್ಲ ಕಡೆ ಇರುತ್ತವೆ. ಮನೆ, ಸಂಸಾರದಲ್ಲೂ ಸಣ್ಣಪುಟ್ಟ ಬೇಸರ ಇರುತ್ತವೆ. ಅದೆಲ್ಲವೂ ಗೌಣʼʼ ಎಂದು ಹೇಳಿದ ಸೋಮಣ್ಣ, ಸಿದ್ದರಾಮಯ್ಯ ಮತ್ತು ನಾನು ಒಂದೇ ಗರಡಿಯಲ್ಲಿ ಇದ್ದವರು ಎಂದು ನೆನಪಿಸಿದರು.
ವರುಣದಲ್ಲಿ 17, ಚಾಮರಾಜನಗರದಲ್ಲಿ 19ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : Karnataka Election 2023: ಸೋಮಣ್ಣ ತಾಕತ್ತಿದ್ದರೆ ವರುಣದಲ್ಲಿ ಮಾತ್ರ ನಿಂತು ಗೆಲ್ಲಲಿ: ಎಂ. ರುದ್ರೇಶ್ ಸವಾಲು