ಬಳ್ಳಾರಿ: ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಎಂದರೆ ರಾಜ್ಯದ ಪರಮ ಶ್ರೀಮಂತ ಅಂತ ಜನ ನಂಬಿದ್ದರು. ಅದಿರು ಸಾಗಾಟದಲ್ಲಿ ಅವರ ಸಂಪತ್ತು ಎಷ್ಟಿತ್ತೆಂದರೆ ಸರ್ಕಾರವನ್ನೇ ಉರುಳಿಸುವಷ್ಟು, ಹೊಸ ಸರ್ಕಾರ ಸ್ಥಾಪಿಸುವಷ್ಟು! ಆದರೆ, ಏನು ಮಾಡೋಣ, ಈಗ ಅವರಿಗಿಂತಲೂ ಅವರ ಹೆಂಡತಿಯೇ ಶ್ರೀಮಂತೆಯಾಗಿದ್ದಾರೆ! ಇದು ಅವರ ಪತ್ನಿ ನೀಡಿರುವ ಚುನಾವಣಾ ಅಫಿಡವಿಟ್‌ನ ಲೆಕ್ಕಾಚಾರ!
ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ (Karnataka Elections) ಬಳ್ಳಾರಿ ನಗರ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರು ಪತಿ ಜನಾರ್ದನ ರೆಡ್ಡಿ ಅವರಿಗಿಂತಲೂ ಶ್ರೀಮಂತೆಯಾಗಿದ್ದು, ಬರೊಬ್ಬರಿ 200ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಇವರ ಹೆಸರಿನಲ್ಲಿ ವಾಹನಗಳೇ ಇಲ್ಲ!
ಲಕ್ಷ್ಮಿ ಅರುಣಾ ಅವರು 96.23 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 104.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಬಳಿ 1.76ಲಕ್ಷ ರೂ. ನಗದು ಇದ್ದು, 16.44 ಕೋಟಿ ಮೌಲ್ಯದ 38486.392ಗ್ರಾಂ ಚಿನ್ನಾಭರಣ, ಡೈಮಾಂಡ್ಸ್ ಹಾಗೂ 77.20 ಲಕ್ಷ ಮೌಲ್ಯದ ಬೆಳ್ಳಿ ಇದೆ.
ರೆಡ್ಡಿಯವರ ಬಳಿ ಕೇವಲ 1.33 ಲಕ್ಷ ರೂ.ನಗದು
ಹೊಸ ರಾಜಕೀಯ ಪಕ್ಷವನ್ನೇ ಕಟ್ಟಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದಾಗಿ ಹೇಳುತ್ತಿರುವ ಗಾಲಿ ಜನಾರ್ದನ ರೆಡ್ಡಿ ಅವರ ಇರುವ ನಗದು ಕೇವಲ 1.33 ಲಕ್ಷ ರೂ. ಇವರ ಚರಾಸ್ತಿ 29.20ಕೋಟಿ ರೂ., ಸ್ಥಿರಾಸ್ತಿ 8 ಕೋಟಿ ರೂ. ಮಾತ್ರ! ಇವರ ಬಳಿ 7.39 ಕೋಟಿ ಮೌಲ್ಯದ 46.258ಗ್ರಾಂ ಚಿನ್ನಾಭರಣ, 32.18ಲಕ್ಷ ರೂ ಮೌಲ್ಯದ ಬೆಳ್ಳಿ ಇದೆ. ಇವರ ಪುತ್ರ ಕೀರಿಟಿ ರೆಡ್ಡಿ ಅವರು ಚರಾಸ್ತಿ 7.24ಕೋಟಿ ರೂ., ಸ್ಥಿರಾಸ್ತಿ 1.24ಕೋಟಿ ರೂ. ಹೊಂದಿದ್ದಾರೆ.
ಬಳ್ಳಾರಿ, ಬೆಂಗಳೂರು, ಆಂಧ್ರದಲ್ಲೂ ಆಸ್ತಿ
ಕೆಆರ್‌ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರು ಬಳ್ಳಾರಿ ಸೇರಿ ಬೆಂಗಳೂರು, ಆಂಧ್ರ ರಾಜ್ಯದಲ್ಲೂ ಅಪಾರ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ. 14 ಭಾಗಗಳಲ್ಲಿ ಕೃಷಿ ಭೂಮಿಯೊಂದಿಗೆ, 94 ಕೃಷಿಯೇತರ ಸ್ಥಳ(ನಿವೇಶನ) ಇದೆ. ಇದರಲ್ಲಿ ಕೆಲವು ನಿವೇಶನಗಳು ಉಡುಗೊರೆಯಾಗಿ ಬಂದಿರುವ ಬಗ್ಗೆ ಅಫಿಡಿವೆಟ್ ನಲ್ಲಿ ನಮೂದಿಸಿದ್ದಾರೆ.
ಆಂಧ್ರದ ಶ್ರೀಕಾಳಹಸ್ತಿಯಲ್ಲಿ, ಬೆಂಗಳೂರಿನ ದೊಡ್ಡಬಳ್ಳಾಪುರ, ಜಾಲಹಳ್ಳಿ, ದೇವನಹಳ್ಳಿಯಲ್ಲಿ ಕೃಷಿಯೇತರ ಹಾಗೂ ಬೆಂಗಳೂರು ಆಂಧ್ರದ ನಂದ್ಯಾಲ್‌ನಲ್ಲಿ ಮನೆಗಳಿವೆ. ಪುತ್ರ ಕಿರೀಟಿ ರೆಡ್ಡಿ ಅವರಿಗೆ ತಾಯಿ ಅರುಣಾ ಲಕ್ಷ್ಮಿ ಅವರು 21 ಎಕರೆ ಕೃಷಿಯೇತರ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪತಿ, ಪತ್ನಿ ಬಳಿ ಇಲ್ಲ ವಾಹನಗಳು
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮಿ ಅರುಣಾ ಹಾಗೂ ಪುತ್ರ ಕಿರೀಟಿ ರೆಡ್ಡಿ ಅವರು ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿದ್ದರು ವಾಹನಗಳಿಲ್ಲದಿರುವುದು ಗಮನರ್ಹವಾಗಿದೆ. ಈಗ ಕೆಆರ್‌ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಬಳಿ ಹಾಗೂ ಪತಿ, ಪುತ್ರನ ಬಳಿ ಯಾವುದೇ ವಾಹನಗಳಿಲ್ಲ ಎಂದು ತೋರಿಸಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿರುವ ಬಗ್ಗೆ ಅವರು ಅಫಿಡೆವಿಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪೊಲೀಸ್ ಠಾಣೆಯಲ್ಲಿಯು/ಎಸ್.171(ಎಫ್)ಐಪಿಸಿ ಮತ್ತು ಯು/ಎಸ್.177, 192 ಐಎಂವಿ ಆಕ್ಟ್ನಡಿ ಪ್ರಕರಣವೊಂದು ದಾಖಲಾಗಿದೆ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಿಂದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Karnataka Elections: ಅಬ್ಬಾ… ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿಯ ಗಂಡನ ಆಸ್ತಿಯ ಒಟ್ಟು ಮೌಲ್ಯ ಕೇವಲ 1621 ಕೋಟಿ ರೂ.!