ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Elections 2023) ನಾಮಪತ್ರ ಸಲ್ಲಿಕೆಗೆ ಕೇವಲ ಒಂದು ಗಂಟೆ ಬಾಕಿ ಇರುವಾಗ ಜೆಡಿಎಸ್‌ನ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಯಾಗಿದೆ. ಅಚ್ಚರಿ ಎಂದರೆ ಈ ಪಟ್ಟಿಯಲ್ಲೂ ಭಾರಿ ಕುತೂಹಲ ಕೆರಳಿಸಿರುವ ಮಂಡ್ಯ ಕ್ಷೇತ್ರದ (Mandya constituency) ಅಭ್ಯರ್ಥಿಯ ಹೆಸರಿಲ್ಲ.
ಜೆಡಿಎಸ್ ಇದುವರೆಗೆ ಬಿಡುಗಡೆ ಮಾಡಿದ್ದ ನಾಲ್ಕು ಪಟ್ಟಿಗಳಲ್ಲಿ 200 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿತ್ತು. ಏಳು ಕಡೆ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲಾಗಿದೆ. ಈಗ ಬಿಡುಗಡೆಯಾಗಿರುವ ಐದನೇ ಪಟ್ಟಿಯಲ್ಲಿ 13 ಅಭ್ಯರ್ಥಿಗಳ ಹೆಸರಿದೆ.
ಇವರಲ್ಲಿ ಪ್ರಮುಖವಾಗಿರುವುದು ಗುರುವಾರ ಮುಂಜಾನೆಯಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಮೊಯ್ದಿನ್ ಬಾವಾ ಅವರಿಗೂ ಟಿಕೆಟ್ ಸಿಕ್ಕಿರುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಶಿಗ್ಗಾಂವಿಯಲ್ಲಿ ಶಶಿಧರ್ ಚನ್ನಬಣಪ್ಪ ಯಲಿಗರ್ ಅವರನ್ನು ಕಣಕ್ಕಿಳಿಸಲಾಗಿದೆ. ಉಳಿದಂತೆ ಈಗಾಗಲೇ ಬಿ ಫಾರಂ ಪಡೆದು ಯಾದಗಿರಿಯಲ್ಲಿ ನಾಮಪತ್ರ ಸಲ್ಲಿಸಿರುವ ಎ.ಬಿ. ಮಾಲಕ ರೆಡ್ಡಿ ಸೇರಿದ್ದಾರೆ. ಪುಲಕೇಶಿ ನಗರದಿಂದ ಅನುರಾಧಾ ಎಂಬವರಿಗೆ ಟಿಕೆಟ್ ಸಿಕ್ಕಿದ್ದರೆ, ಬೆಳ್ತಂಗಡಿಯಲ್ಲಿ ಅಶ್ರಫ್ ಅಲಿ ಕುಂಞಿ ಕಣಕ್ಕೆ ಇಳಿಯಲಿದ್ದಾರೆ.
ಐದನೇ ಪಟ್ಟಿಯಲ್ಲಿರುವ ಹೆಸರುಗಳು
- ಯಾದಗಿರಿ: ಎ.ಬಿ. ಮಾಲಕ ರೆಡ್ಡಿ
- ಗೋಕಾಕ್ – ಚನ್ನಬಸಪ್ಪ ಬಾಳಪ್ಪ ಗಿಡ್ಡಣನವರ್
- ಕಿತ್ತೂರು- ಅಶ್ವಿನಿ ಸಿಂಗಯ್ಯ ಪೂಜೇರಾ
- ಭಾಲ್ಕಿ- ರವೂಫ್ ಪಟೇಲ್
- ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗರ್
- ಮೊಳಕಾಲ್ಮೂರು- ಮಹದೇವಪ್ಪ
- ಪುಲಕೇಶಿನಗರ – ಅನುರಾಧ
- ಶಿವಾಜಿನಗರ – ಅಬ್ದುಲ್ ಜಫರ್ ಅಲಿ
- ಶಾಂತಿ ನಗರ – ಮಂಜುನಾಥ್ ಗೌಡ
- ಬೆಳ್ತಂಗಡಿ – ಅಶ್ರಫ್ ಅಲಿ ಕುಂಞಿ
- ಮಂಗಳೂರು ಉತ್ತರ – ಮೊಯ್ದಿನ್ ಬಾವಾ
- ಮಂಗಳೂರು – ಅಲ್ತಾಫ್ ಕುಂಪಲ
- ಬಂಟ್ವಾಳ – ಪ್ರಕಾಶ್ ರಫಾಯಲ್ ಗೊಮ್ಸ್
ಮುಂದುವರಿದ ಮಂಡ್ಯ ಕುತೂಹಲ
ನಾಮಪತ್ರ ಸಲ್ಲಿಕೆಗೆ ಕೇವಲ ಗಂಟೆಯೊಂದು ಉಳಿದಿದ್ದರೂ ಮಂಡ್ಯ ಕ್ಷೇತ್ರದ ಕುತೂಹಲ ಮುಂದುವರಿದಿದೆ. ಇಲ್ಲಿ ಮನ್ಮೂಲ್ ಅಧ್ಯಕ್ಷ ರಾಮಚಂದ್ರ ಅವರಿಗೆ ಟಿಕೆಟ್ ನೀಡಲಾಗಿದ್ದರೂ ಪಟ್ಟಿಯಲ್ಲಿ ಇನ್ನೂ ಪ್ರಕಟಿಸಿಲ್ಲ. ಇಲ್ಲಿ ಎಂ. ಶ್ರೀನಿವಾಸ್ ಅವರು ಹಾಲಿ ಶಾಸಕರಾಗಿದ್ದರು. ಅವರಿಗೆ ಟಿಕೆಟ್ ನಿರಾಕರಿಸಿ, ಆಕಾಂಕ್ಷಿಗಳನ್ನು ಬಿಟ್ಟು ರಾಮಚಂದ್ರ ಅವರಿಗೆ ಮಣೆ ಹಾಕಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎಂ. ಶ್ರೀನಿವಾಸ್ ಅವರು ತಾನು ಬಂಡುಕೋರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ನಡುವೆಯೇ ಈ ಕ್ಷೇತ್ರದಿಂದ ಕೊನೆಯ ಕ್ಷಣದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೂ ಹರಡಿದೆ. ಏನಾಗುತ್ತದೆ ಎನ್ನುವುದು ಮೂರು ಗಂಟೆಯ ಹೊತ್ತಿಗೆ ಸ್ಪಷ್ಟವಾಗಲಿದೆ.
ಇದನ್ನೂ ಓದಿ : Karnataka Elections : ಮಂಗಳೂರು ಉತ್ತರ ಟಿಕೆಟ್ ವಂಚಿತ ಮೊಯ್ದಿನ್ ಬಾವಾ ಕಾಂಗ್ರೆಸ್‌ಗೆ ಗುಡ್‌ಬೈ, ಜೆಡಿಎಸ್ ಸೇರ್ಪಡೆ