ಧಾರವಾಡ: ರಾಜ್ಯದಲ್ಲಿ ಪ್ರಲ್ಹಾದ ಜೋಶಿಯವರೂ ಮುಖ್ಯಮಂತ್ರಿಯಾಗುವುದಿಲ್ಲ, ಬಿ.ಎಲ್. ಸಂತೋಷ್ ಅವರೂ ಇಲ್ಲ. ರಾಜ್ಯದಲ್ಲಿ ಮತ್ತೆ ಲಿಂಗಾಯತರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ ಬಿಜಾಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್. ಅವರು ನವಲಗುಂದದಲ್ಲಿ ಈ ಹೇಳಿಕೆ ನೀಡಿದ್ದರೆ, ಅತ್ತ ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಇದೇ ಮಾತನ್ನು ಸಮರ್ಥಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಈ ಹೇಳಿಕೆ ಮಹತ್ವ ಪಡೆದಿದೆ. ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ ಎಂಬ ವದಂತಿ ಹರಡಿರುವುದಕ್ಕೆ ಇದು ಸ್ಪಷ್ಟೀಕರಣ ರೂಪದಲ್ಲಿದೆ.
ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?
ಪ್ರಲ್ಹಾದ ಜೋಶಿ ಅವರು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ಅವರಾಗಲೀ ಸಂತೋಷ್ ಅವರಾಗಲೀ ಸಿಎಂ ಆಗುವುದಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತದೆ. ಮತ್ತೆ ಲಿಂಗಾಯತರೇ ಸಿಎಂ ಆಗುತ್ತಾರೆ ಎಂದು ಯತ್ನಾಳ್ ಹೇಳಿದರು. ಆದರೆ, ಈಗ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ ಎಂದು ಅವರು ಸ್ಪಷ್ಟವಾಗಿ ಹೇಳಿಲ್ಲ. ನಾನು ಸಿಎಂ ರೇಸ್‌ನಲ್ಲಿರುವೆ ಎಂದು ಹೇಳಲಾರೆ ಎಂದೂ ನುಡಿದಿದ್ದಾರೆ.
ʻʻಈ ದೇಶಕ್ಕೆ ನರೇಂದ್ರ ಮೋದಿ ಬೇಕಾಗಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರ ಬೇಕಿದೆ. ಯಾರೇ ಹೋಗಲಿ ಬಿಜೆಪಿ ಬಹುಮತ ಬರುವುದು ಗ್ಯಾರಂಟಿ. ಹೊಸ ಬಿಜೆಪಿ ನಾಯಕತ್ವ ಬರುವುದಿದೆ. ಎರಡನೇ ಸಾಲಿನ ನಾಯಕತ್ವ ಬರಲಿದೆ. ಲಿಂಗಾಯತರಲ್ಲಿ ಸಾಕಷ್ಟು ನಾಯಕರು ಇನ್ನೂ ಇದ್ದೇವೆʼʼ ಎಂದರು ಯತ್ನಾಳ್.
ಕೆಲವರು ಸ್ಥಾರ್ಥಕ್ಕಾಗಿ ಬಿಜೆಪಿ ಬಿಟ್ಟು ಹೋಗಿದ್ದಾರೆ
ʻʻʻಕೆಲವರು ಬಿಜೆಪಿ ಬಿಟ್ಟು ಹೋಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಹೋಗಿದ್ದಾರೆ. ಇಷ್ಟು ವರ್ಷ ಬಿಜೆಪಿಯಲ್ಲಿ ಸುಖ, ಸಂತೋಷ ಅನುಭವಿಸಿ ಹೋಗಿದ್ದಾರೆ. ಇದು ದುರದೃಷ್ಟಕರʼʼ ಎಂದು ಜಗದೀಶ್ ಶೆಟ್ಟರ್ ಪ್ರಕರಣಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದರು.
ʻʻಅವರಿಗೆ ಅನ್ಯಾಯ ಆಗಿದೆ, ಅನ್ಯಾಯ ಆಗಿದೆ ಅಂತಾರೆ. ಎಂಎಲ್‌ಎ, ಮಂತ್ರಿ, ಸಿಎಂ, ಸ್ಪೀಕರ್, ಡಿಸಿಎಂ ಆಗಿ ಸುಖ ಉಂಡಿದ್ದಾರೆ. ದುಡಿಯಲಾರದೆ ದುಃಖ ಪಡಲಾರದೆ ಸುಖ ಉಂಡಿದ್ದಾರೆ. ಹೋಗುವವು ಹೋಗಿವೆ. ಈಗ ಎಲ್ಲವೂ ನಮ್ಮ ಕೈಗೆ ಬರುವುದಿದೆʼʼ ಎಂದು ಸೂಚ್ಯವಾಗಿ ಏನೋ ಹೇಳಿದರು ಯತ್ನಾಳ್.
ಬೀಗರೆಲ್ಲರೂ ಒಂದೇ ಪಾರ್ಟಿ!
ಜಗದೀಶ್ ಶೆಟ್ಟರ್, ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್ ಎಲ್ಲರೂ ಬೀಗರು. ಎಲ್ಲ ಬೀಗರು ಒಂದೇ ಪಕ್ಷದಲ್ಲಿ ಇದ್ದಾರೆ. ಇಷ್ಟು ದಿನ ಬೀಗರು ಬೇರೆ ಬೇರೆ ಪಕ್ಷದಲ್ಲಿದ್ದರು. ಆಗ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಈಗ ಒಂದೇ ಕಡೆ ಸೇರಿದ್ದಾರೆʼʼ ಎಂದು ಯತ್ನಾಳ್ ನುಡಿದರು.
ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಲಿಂಗಾಯತರಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದು ಬಿಜೆಪಿ. ಮೂವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಲಿಂಗಾಯತ ಮುಖ್ಯಮಂತ್ರಿ ಮಾಡುವ ಏಕೈಕ ಪಕ್ಷ ಬಿಜೆಪಿ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಹಿರಿಯ ನಾಯಕರು. ಅವರನ್ನು ಪಕ್ಷ ಇಷ್ಟು ಎತ್ತರಕ್ಕೆ ಬೆಳೆಸಿದೆ. ಅವರಿಗೆ ಎಲ್ಲ ಹುದ್ದೆಗಳನ್ನು ನೀಡಿದೆ. ಅವರು ರಾಜ್ಯ ಮಟ್ಟದ ನಾಯಕರಾಗಿ ಬೆಳೆಯುವ ನಿಟ್ಟಿನಲ್ಲಿ ಪಕ್ಷದ ಕೊಡುಗೆ ದೊಡ್ಡದಿದೆ. ಅವರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದವರು. ಅವರನ್ನು ಪಕ್ಷಲ್ಲೇ ಉಳಿಸಿಕೊಳ್ಳಲು ಸ್ವತಃ ಕೇಂದ್ರ ನಾಯಕರೇ ಅವರ ಮನೆಯಲ್ಲಿ ಬಂದು ಕುಳಿತು ಮಾತುಕತೆ ಮಾಡಿದರು. ಅವರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಹೇಳಿದರು. ಆದರೂ ಅವರು ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಏನು ಎನ್ನುವುದು ಅವರಿಗೆ ತಿಳಿಯಲಿದೆ ಎಂದು ಜಗದೀಶ್ ಶೆಟ್ಟರ್ ಪ್ರಕರಣಕ್ಕೆ ನಳಿನ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ : Karnataka Elections : ಕಾಂಗ್ರೆಸ್‌ನವರು ಶೆಟ್ಟರ್‌ರನ್ನು ಬಳಸಿಕೊಂಡು ಹೊರಗೆ ಎಸೀತಾರೆ; ಸಿಎಂ ಬೊಮ್ಮಾಯಿ ಲೇವಡಿ