ಬಳ್ಳಾರಿ/ಮಂಡ್ಯ: ರಾಜ್ಯದಲ್ಲಿ ಬುಧವಾರ ವಿಧಾನಸಭಾ ಚುನಾವಣೆಯ (Karnataka Elections) ಘೋಷಣೆಯಾಗುತ್ತಿದ್ದಂತೆಯೇ ನೀತಿ ಸಂಹಿತೆಗಳು ಜಾರಿಗೆ ಬಂದವು. ಮಂತ್ರಿಗಳು, ಶಾಸಕರು ತಾವು ಇದ್ದ ಜಾಗದಲ್ಲಿಯೇ ತಮಗಿರುವ ಸರ್ಕಾರಿ ಸವಲತ್ತುಗಳನ್ನು ಬಿಟ್ಟು ಸಾಮಾನ್ಯ ಜನರಾಗುವ ಹೊತ್ತು ಅದಾಗಿತ್ತು. ಈ ಹೊತ್ತಿನಲ್ಲಿ ಕಂಡುಬಂದ ಎರಡು ಸನ್ನಿವೇಶಗಳು ಇಲ್ಲಿವೆ. ಒಂದರಲ್ಲಿ ಸಂಸದ ದೇವೇಂದ್ರಪ್ಪ ಅವರು ಕಾರು ಬಿಟ್ಟು ರಿಕ್ಷಾದಲ್ಲಿ ತೆರಳಿದ್ದರೆ, ಇನ್ನೊಂದರಲ್ಲಿ ಸಚಿವ ಕೆ.ಸಿ. ನಾರಾಯಣಗೌಡರು ತಾವು ಬಳಸುತ್ತಿದ್ದ ಕಾರಿಗೆ ಪೂಜೆ ಮಾಡಿ ಬೀಳ್ಕೊಟ್ಟಿದ್ದಾರೆ.
ಮನೆಗೆ ಆಟೋಗೆ ತೆರಳಿದ ಸಂಸದ ದೇವೇಂದ್ರಪ್ಪ
ಬಳ್ಳಾರಿ: ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಬುಧವಾರ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟಿತು. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅವರು ಸರಕಾರಿ ವಾಹನ ಬಿಟ್ಟು ಆಟೋದಲ್ಲಿ ಮನೆಗೆ ತೆರಳಿದರು.
ಬುಧವಾರ ಬೆಳಿಗ್ಗೆ ಮಹಾನಗರ ಪಾಲಿಕೆ ಎರಡನೇ ಅವಧಿಗೆ ಮೇಯರ್ ಚುನಾವಣೆಗೆ ಮತದಾನ ಮಾಡಲು ಸಂಸದ ದೇವೇಂದ್ರಪ್ಪ ಅವರು ಮಹಾನಗರ ಪಾಲಿಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿಯೇ ಚುನಾವಣೆ ಘೋಷಣೆಯಾಯಿತು. ಚುನಾವಣೆ ಮುಗಿಸಿ ಹೊರಗಡೆ ಬರುವ ಹೊತ್ತಿಗೆ ಸರಕಾರಿ ವಾಹನವು ಹಿಂದಕ್ಕೆ ಕಳಿಸಬೇಕಾಗಿದ್ದರಿಂದ ಅವರು ಕಾರಿಲ್ಲದೆ ಆಟೋದಲ್ಲಿಯೇ ಬಸವೇಶ್ವರ ನಗರದಲ್ಲಿರುವ ಅವರ ಮನೆಗೆ ತೆರಳಿದರು.
ಪೂಜೆ ಸಲ್ಲಿಸಿ ಕಾರನ್ನು ಬೀಳ್ಕೊಟ್ಟ ಸಚಿವ ನಾರಾಯಣ ಗೌಡ
ಮಂಡ್ಯ: ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಚಿವ ಕೆ.ಸಿ. ನಾರಾಯಣ ಗೌಡರು ತಾವು ಬಳಸುತ್ತಿದ್ದ ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟ ಘಟನೆ ನಡೆದಿದೆ. ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಕಾರನ್ನು ಅವರು ಭಾವುಕರಾಗಿ ಬಿಟ್ಟುಕೊಟ್ಟರು. ಬರಿಗಾಲಲ್ಲಿ ಕರ್ಪೂರ ಬೆಳಗಿ, ಸ್ಟೇರಿಂಗ್ ಪೂಜೆ ಮಾಡಿ ಈಡುಗಾಯಿ ಹೊಡೆದ ಸಚಿವರು ಕಾರಿಗೆ ಒಂದು ಸುತ್ತು ಸುತ್ತಿ ಕೈ ಮುಗಿದರು.
ಇದು ಸಚಿವ ನಾರಾಯಣಗೌಡರಿಗೆ ಕಾರಿನ ಮೇಲೆ ಇದ್ದ ಪ್ರೀತಿಗೆ ಸಾಕ್ಷಿಯಾಯಿತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಳಿಕ ಬಿಜೆಪಿಗೆ ಜಿಗಿದು ಮಂತ್ರಿಗಳಾದವರು ಅವರು. 2019ರ ಉಪಚುನಾವಣೆಯಲ್ಲಿ ಗೆದ್ದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಸದ್ಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ʻʻಮೂರು ವರ್ಷ ಆ ಕಾರನ್ನು ಬಳಸಿದ್ದೀನಿ. ನೀತಿ ಸಂಹಿತೆ ಜಾರಿ ನಂತ್ರ ರಸ್ತೆಯಲ್ಲಿ ಬಿಡೋದಕ್ಕಿಂತ ಚಾಲಕನಿಗೆ ಹೇಳಿ ಕುಮಾರಕೃಪದಲ್ಲಿ ಬಿಟ್ಟು ಬರಲು ಕಳುಹಿಸಿದೆ. ಒಂದು ಗೌರವ ಪೂರಕವಾಗಿ ಪೂಜೆ ಸಲ್ಲಿಸಿ ಕಳುಹಿಸಿದೆ. ವೆಹಿಕಲ್ ಬಗೆಗೆ ನನಗೆ ತುಂಬಾ ಗೌರವ. ಯಾಕಂದ್ರೆ ಚಿಕ್ಕಂದಿನಲ್ಲಿ ಬೇರೆ ಕಾರಾದ್ರು ಒರೆಸಿ ಕ್ಲೀನ್ ಮಾಡ್ತಿದ್ದೆʼʼ ಎಂದು ನೆನಪು ಮಾಡಿಕೊಂಡರು.
ಬಹುತೇಕ ಎಲ್ಲ ಜನಪ್ರತಿನಿಧಿಗಳು ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ತಮ್ಮ ಕಾರನ್ನು ಬಿಟ್ಟುಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಘೋಷಣೆಯಾದ ಕೆಲವೇ ನಿಮಿಷದಲ್ಲಿ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರು ಬಳಸಿದರೆ ಸಚಿವ ಶಿವರಾಂ ಹೆಬ್ಬಾರ್ ಖಾಸಗಿ ಕಾರಿನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಬಂದಿದ್ದರು.
ಇದನ್ನೂ ಓದಿ : SC ST Reservation: ಮಾರ್ಚ್ 30ಕ್ಕೆ ನಡೆಯಲ್ಲ ಬಂಜಾರ ಸಮುದಾಯದ ಪ್ರತಿಭಟನೆ; ನೀತಿ ಸಂಹಿತೆ ಜಾರಿ ಹಿನ್ನೆಲೆ ಮುಷ್ಕರ ವಾಪಸ್