Site icon Vistara News

Karnataka Elections : ಮೇ 13ಕ್ಕೆ ರಿಸಲ್ಟ್‌ ಬಂದಾಗ ನಾನೇನು ಅಂತ ಗೊತ್ತಾಗಲಿದೆ; ಅವರೇನು ದೊಡ್ಡ ನಾಯಕನಾ ಅಂದವರಿಗೆ ಶೆಟ್ಟರ್‌ ಉತ್ತರ

karnataka politics cm dcm travels to delhi with cabinet expansion discussion

ಹುಬ್ಬಳ್ಳಿ: ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರಿದ ಬಳಿಕ ಕೆಲವು ಬಿಜೆಪಿ ನಾಯಕರು ಅವರೇನೂ ದೊಡ್ಡ ನಾಯಕರಲ್ಲ, ಹೋಗಿದ್ದರಿಂದ ಏನೂ ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಈಗ ಜಗದೀಶ್‌ ಶೆಟ್ಟರ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ. ʻʻಮೇ 13ಕ್ಕೆ ವಿಧಾನಸಭಾ ಚುನಾವಣೆ (Karnataka Elections) ಫಲಿತಾಂಶ ಬರುತ್ತದೆ. ಆವಾಗ ನಾನು ಏನು ಅಂತ ಗೊತ್ತಾಗುತ್ತದೆʼʼ ಎಂದು ಸವಾಲು ಹಾಕಿದ್ದಾರೆ.

ಸೋಮವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರಿದ ಬಳಿಕ ಹುಬ್ಬಳ್ಳಿಗೆ ಆಗಮಿಸಿದರು. ಅವರು ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಅವರ ಭಾವುಕ ಪ್ರತಿಕ್ರಿಯೆಗಳಿಂದಾಗಿ ಶೆಟ್ಟರ್‌ ಪತ್ನಿ ಶಿಲ್ಪಾ ಶೆಟ್ಟರ್‌ ಅವರು ಕೂಡಾ ಭಾವುಕರಾಗಿ ಕಣ್ಣೀರು ಹಾಕಿದರು. ಬಿಜೆಪಿ ಮೋಸ ಮಾಡಿತು ಎಂದು ಬೇಸರ ಮಾಡಿಕೊಂಡರು. ಆಗ ಜಗದೀಶ್‌ ಶೆಟ್ಟರ್‌ ಕೂಡಾ ತುಂಬ ನೊಂದುಕೊಂಡರು.

ಆ ಬಳಿಕ ಸುಧಾರಿಸಿಕೊಂಡು ಮತ್ತೆ ಪ್ರತಿಕ್ರಿಯೆ ನೀಡಿದ ಜಗದೀಶ್‌ ಶೆಟ್ಟರ್‌ ಅವರು, ತಮ್ಮ ನಾಯಕತ್ವದ ತಾಕತ್ತನ್ನು ಪ್ರಶ್ನಿಸಿದವರಿಗೆ ತಿರುಗೇಟು ನೀಡಿದರು.

ʻʻಶೆಟ್ಟರ್ ಅವರೊಬ್ಬರೇ ಲಿಂಗಾಯಿತ ನಾಯಕರಾ..?ʼʼ ಎಂದು ಕೇಳಿದವರಿಗೆ ತಿರುಗೇಟು ನೀಡಿದ ಅವರು, ನಾನು ಏನು ಎನ್ನುವುದು ಮೇ 13ರಂದು ಫಲಿತಾಂಶ ಬಂದಾಗ ಗೊತ್ತಾಗುತ್ತದೆ ಎಂದರು.

ʻʻನಾನು ಹಲವಾರು ಚುನಾವಣೆಗಳಲ್ಲಿ ಪಕ್ಷವನ್ನು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಪಕ್ಷವನ್ನು ಸಂಘಟಿಸಿದ್ದೇನೆ. ಇಡೀ ರಾಜ್ಯ ಸುತ್ತು ಹಾಕಿದ್ದೇನೆ. ಅದೇ ಕಾರಣಕ್ಕೆ ನನ್ನನ್ನ ಲಿಂಗಾಯಿತ ಲೀಡರ್ ಅಂತಾರೆ
ಇವರು ಎಷ್ಟರ ಮಟ್ಟಿಗೆ ಗೆಲ್ಲಿಸಿದ್ದಾರೆ? ತಮಗೆ ತಾವೇ ಲಿಂಗಾಯಿತ ಲೀಡರ್ ಅಂತ ಹೇಳಿಕೊಂಡರೆ ಪ್ರಯೋಜನವಿಲ್ಲ.ʼʼ ಎಂದು ಹೇಳಿದ ಜಗದೀಶ್‌ ಶೆಟ್ಟರ್‌ ಅವರು, ʻʻಬಿಜೆಪಿಯ ಇಂದಿನ‌ ಬೆಳವಣಿಗೆ ನೋಡಿದರೆ, ಬಿಜೆಪಿಯನ್ನು ಅಧಿಕಾರಕ್ಕೆ ತರೋದು ಬೇಡ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಬಿಜೆಪಿಯವರೇ ನಿರ್ಧರಿಸಿದಂತಿದೆʼʼ ಎಂದರು.

ʻʻನನ್ನನ್ನು ಕಡೆಗಣಿಸಿದ್ದು ಒಂದೇ ಬಿಜೆಪಿ ಬಿಡಲು ಕಾರಣ. ಕಾಂಗ್ರೆಸ್‌ ಏನು ಅಸ್ಪೃಶ್ಯ ಪಕ್ಷವೇ? ನಾನು ಕಾಂಗ್ರೆಸ್ ಗೆ ಬಂದಿರೋದ್ರಿಂದ ದೊಡ್ದ ಶಕ್ತಿ ಬಂದಿದೆ ಅಂತ ಅವರೇ ಹೇಳ್ತಿದಾರೆ. ಸದ್ಯದ ವಾತಾವರಣ ನೋಡಿದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆʼʼ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಮುಸ್ಲಿಂ, ಕ್ರಿಶ್ಚಿಯನ್ನರನ್ನು ಕಡೆಗಣಿಸಿಲ್ಲ

ಕಾಂಗ್ರೆಸ್‌ಗೆ ಬರುತ್ತಿದ್ದಂತೆಯೇ ಅಲ್ಪಸಂಖ್ಯಾತರ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಜಗದೀಶ್‌ ಶೆಟ್ಟರ್‌ ಅವರು, ʻʻನಾನು ಯಾರನ್ನೂ ಕಡೆಗಣಿಸಿಲ್ಲ. ಹಿಂದೂ,‌ ಮುಸ್ಲಿಂ, ಕ್ರೈಸ್ತ ಸಮುದಾಯ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆʼʼ ಎಂದರು.

ಪತ್ನಿ ಶಿಲ್ಪಾ ಶೆಟ್ಟರ್‌ ಅವರು ಭಾವುಕರಾಗಿ ಕಣ್ಣೀರು ಹಾಕಿದ ವಿಚಾರದ ಬಗ್ಗೆ ಕೇಳಿದಾಗ, ʻʻಪ್ರತಿ ಚುನಾವಣೆಯಲ್ಲಿಯು ಪತ್ನಿಯೇ ಪ್ರಚಾರ ಮಾಡುತ್ತಿದ್ದರು. ಒಂದೇ ಪಕ್ಷದಲ್ಲಿ ಬೆಳದು ಬಂದವರು ಈ ರೀತಿ ಪಕ್ಷ ಬಿಡುವಂತೆ ಆಯ್ತು ಅಂತ ಖೇದ ಇದೆ. ನಾವು ಯಾವ ಕಾರ್ಯಕರ್ತರಿಗೂ ಫೋರ್ಸ್ ಮಾಡ್ತಿಲ್ಲ. ಅವರು ಮಾನಸಿಕವಾಗಿ ನಮ್ಮ ಜೊತೆ ಇದಾರೆʼʼ ಎಂದರು.

ರಾಜೀನಾಮೆ ಕೊಡುವುದು ಬೇಡ ಎಂದಿದ್ದೇನು

ʻʻನನ್ನ ಮೇಲೆ ಬಿಜೆಪಿ ವರಿಷ್ಠರು ಜಿಲ್ಲಾಧ್ಯಕ್ಷರ ಮೂಲಕ ಒತ್ತಡ ತರುತ್ತಿದ್ದಾರೆ. ಆದರೆ ಫ್ಲಡ್ ಗೇಟ್ ಓಪನ್ ಆದಂತಹ ಸ್ಥಿತಿ‌ ಮುಂದೆ ಬರಲಿದೆ. ಚುನಾಯಿತ ಪ್ರತಿನಿಧಿಗಳಿಗೆ ರಾಜೀನಾಮೆ ಕೊಡೋದು ಬೇಡ ಅಂತ ಹೇಳಿದ್ದೇನೆʼʼ ಎಂದು ಶೆಟ್ಟರ್‌ ತಿಳಿಸಿದ್ದಾರೆ.

ʻʻಕಾಂಗ್ರೆಸ್‌ನಲ್ಲಿ ನನ್ನು ಸರ್ವಾನುಮತದಿಂದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಕ್ಷೇತ್ರದಾದ್ಯಂತ ಪ್ರಚಾರ ಮಾಡ್ತೇನೆ. ಕರೆದ ಕಡೆ ಕಾಂಗ್ರೆಸ್ ಪರ ಪ್ರಚಾರ ಮಾಡ್ತೇನೆʼʼ ಎಂದು ಹೇಳಿದರು.

ಬಿಜೆಪಿಯನ್ನು ಬೈದುಕೊಂಡು ಓಡಾಡಲ್ಲ

ʻʻಬಿಜೆಪಿಯನ್ನು ಬೈದರೆ ಉದ್ಧಾರ ಆಗ್ತೇನಾ..? ಸಂದರ್ಭ ಬಂದಾಗ ಟೀಕೆ ಮಾಡೇ ಮಾಡ್ತೇನೆ. ನಾನೇನು ಹೋಗಿ ಜೈಲಿನಲ್ಲಿ ಇರಲೇ? ಜನರನ್ನು ದೂರ ಇಟ್ಟು ಬಂಗ್ಲೆಯಲ್ಲಿ ಇರಲೇʼʼ ಎಂದು ಜನರೊಂದಿಗೇ ಇರುತ್ತೇನೆ ಎಂದು ಹೇಳಿದರು.

ಅವರು ಹೇಳಿದ ಹಾಗೆ ಬರೆದುಕೊಡಲು ನಾನು ಹುಡುಗನೇ?

ಬಿಜೆಪಿಯನ್ನು ಬಿಡುವ ಮೊದಲು ನಿಜಕ್ಕೂ ಏನೇನಾಯಿತು ಎಂದು ವಿವರಿಸಿದ ಶೆಟ್ಟರ್‌, ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಅಂತ ಹೇಳಿಕೆ ಕೊಡಿ ಅಂದರು. ತಾವು ಕಳಿಸಿದ ಪತ್ರಕ್ಕೆ ಸಹಿ ಹಾಕಿ ಕಳಿಸುವಂತೆ ಹೇಳಿದರು. ಅವರು ಹೇಳಿದಂತೆ ಕೇಳಲು ನಾನೇನು ಹುಡುಗನೇ? ಹೀಗಾಗಿ ರಾಜ್ಯಸಭಾ ಸದಸ್ಯತ್ವದ ಆಮಿಷವನ್ನೂ ತಿರಸ್ಕರಿಸಿದೆʼʼ ಎಮದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು ಜಗದೀಶ್ ಶೆಟ್ಟರ್.

ಇದನ್ನೂ ಓದಿ : Karnataka Elections 2023 : ಚುನಾವಣೆ ನಂತರ ಬೊಮ್ಮಾಯಿಗೂ ಸವದಿ, ಶೆಟ್ಟರ್‌ ಪರಿಸ್ಥಿತಿಯೇ ಬರಲಿದೆ; ಎಂ.ಬಿ ಪಾಟೀಲ್‌ ಭವಿಷ್ಯ

Exit mobile version