Site icon Vistara News

Karnataka Elections : ಲಕ್ಷ್ಮಣ ಸವದಿಗೆ ಟಿಕೆಟ್‌ ಇಲ್ಲ; ಅನ್ಯಾಯ ಮಾಡಬೇಡಿ ಎಂದು ಕಣ್ಣೀರು ಹಾಕಿದ ನಾಯಕ

Laxmana savadi

#image_title

ಚಿಕ್ಕೋಡಿ: ಬೆಳಗಾವಿಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ತಮಗೆ ಟಿಕೆಟ್‌ ಇಲ್ಲ ಎಂದ ಸಂದೇಶ ರವಾನೆಯಾಗುತ್ತಿದ್ದಂತೆಯೇ ಮಾಜಿ ಸಚಿವ ಲಕ್ಷ್ಮಣ ಸವದಿ ಕಣ್ಣೀರು ಹಾಕಿದ್ದಾರೆ. ದಯವಿಟ್ಟು ನನಗೆ ಅನ್ಯಾಯ ಮಾಡಬೇಡಿ ಎಂದು ದಯನೀಯವಾಗಿ ಮನವಿ ಮಾಡಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಅಥಣಿ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಹಾಲಿ ಶಾಸಕರಾಗಿರುವ ಮಹೇಶ್‌ ಕುಮಠಳ್ಳಿ ಮತ್ತು ಲಕ್ಷ್ಮಣ್‌ ಸವದಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಹೇಶ್‌ ಕುಮಠಳ್ಳಿಗೆ ಟಿಕೆಟ್‌ ಕೊಡದೆ ಇದ್ದರೆ ತಾನು ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ರಮೇಶ್‌ ಜಾರಕಿಹೊಳಿ ಅವರು ಹಠ ಹಿಡಿದಿದ್ದಾರೆ. ಆದರೆ, ಯಾವ ಕಾರಣಕ್ಕೂ ಈ ಬಾರಿ ಅಥಣಿಯನ್ನು ಬಿಡುವುದಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿಕೊಂಡಿದ್ದರು.

ಈ ನಡುವೆ ಮಹೇಶ್‌ ಕುಮಠಳ್ಳಿ ಅವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಲಕ್ಷ್ಮಣ್ ಸವದಿಗೆ ಟಿಕೆಟ್ ಇಲ್ಲ ಎಂಬ ಸಂದೇಶ ರವಾನಿಸಿದ್ದರು. ಅಂತಿಮವಾಗಿ ಪ್ರಕಟವಾದ ಪಟ್ಟಿಯಲ್ಲೂ ಲಕ್ಷ್ಮಣ ಸವದಿ ಹೆಸರು ಇರಲಿಲ್ಲ.

ಅದಕ್ಕಿಂತ ಮೊದಲು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ʻʻಸಿಎಂ ನನಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ. 2004ರಲ್ಲಿ ಪಕ್ಷವನ್ನು ಸೇರಿದ ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ನಾನು ಇವತ್ತು ಪಕ್ಷದ ವರಿಷ್ಠರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಮನೆಯಿಂದ ನನ್ನ ಹೊರಗೆ ದೂಡಬೇಡಿ. ನಾನು ನಿಷ್ಠಾವಂತ ಕಾರ್ಯಕರ್ತ. ನನಗೆ ಅನ್ಯಾಯ ಮಾಡಬೇಡಿʼʼ ಎಂದು ಹೇಳಿದ್ದಾರೆ ಲಕ್ಷ್ಮಣ ಸವದಿ.

ʻʻಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ನನ್ನನ್ನು ಮುಂದಿನ ಸಿಎಂ ಎಂದು ಹೇಳಿದ್ದರು. ಯಡಿಯೂರಪ್ಪನವರು ನನ್ನನ್ನು ಕರೆದು ನಿನಗೆ ನಾನು ತಂದೆ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಿದರು. ಆದರೆ, ಈಗ ಅನಾಥನಾಗಿದ್ದೇನೆʼʼ ಎಂದ ನೋವು ಹೇಳಿಕೊಂಡರು.

ʻʻನನಗೆ ನೀವು ಕೊಟ್ಟ ಮಾತನ್ನು ಯಾರೂ ಈಡೇರಿಸಿಲ್ಲ. ಮಂಜುನಾಥನ ಸನ್ನಿಧಿಗೆ ಹೋಗೋಣ, ನಾನೂ ಬರುತ್ತೇನೆ, ನೀವೂ ಬನ್ನಿʼʼ ಎಂದು ಸವಾಲು ಹಾಕಿದರು ಸವದಿ.

ʻʻಕುಮಾರಸ್ವಾಮಿ ಅವರಿಗೆ ವಚನ ಭ್ರಷ್ಟ ಎಂದು ಹೇಳುತ್ತೀರಲ್ಲ ನೀವು. ಬನ್ನಿ ಮಂಜುನಾಥನ ಸನ್ನಿಧಿಗೆ ನೀವು ನನಗೆ ಮಾತು ನೀಡಿಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ.ʼʼ ಎಂದು ಹೇಳಿದರು.

ʻʻನನಗೆ ಟಿಕೆಟ್ ಇಲ್ಲ ಎಂದು ನನ್ನ ಗೆಳೆಯ ಸಿಎಂ ಬಸವರಾಜ್ ಹೇಳಿದ್ದಾರೆ. ಭಲೇ ಬಸವರಾಜ್ ಒಳ್ಳೆಯ ಮಾತು ಹೇಳಿದ್ದೀರಿʼʼ ಎಂದು ಸಿಎಂ ಬಸವರಾಜ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ʻʻಅವರು ಮಾತು ಕೇಳಿ ನಾನು ಎಂಎಲ್ಸಿ ಆದೆ. ಆ ಚುನಾವಣೆಯಲ್ಲಿ ನನ್ನ ಹೆಸರಿನ ಮೇಲೆ ಆರು ಜನ ಗುಂಡ್ಲೆ ಚಿನ್ನೆ ಹಾಕಿದರು. ಅವರು ಯಾರು ಎಂದು ಹೇಳುವುದಿಲ್ಲʼʼ ಎಂದು ಹೇಳಿದರು.

ʻʻನನ್ನ ನಿರ್ಧಾರವನ್ನು ಏಪ್ರಿಲ್‌ 13ರಂದು ಹೇಳುತ್ತೇನೆ. ನೀವು ಮನೆಯಲ್ಲಿ ಇರುವಂತೆ ಹೇಳಿದರೇ ನಾನು ಮನೆಯಲ್ಲಿ ಇರುತ್ತೇನೆ. ಒಂದು ವೇಳೆ ಚುನಾವಣೆ ಬನ್ನಿ ಎಂದರೆ ನಾನು ಚುನಾವಣೆ ಬರುತ್ತೇನೆ. ನಾನು ರಾಜಕೀಯ ಸಂಕಷ್ಟದಲ್ಲಿ ಎದ್ದೇನೆ. ನನ್ನ ಕೈ ಬಿಡಬೇಡಿʼʼ ಎಂದು ಹೇಳುತ್ತಾ ಲಕ್ಷ್ಮಣ್ ಸವದಿ ಗಳಗಳನೆ ಅತ್ತು ಕಣ್ಣೀರು ಹಾಕಿದರು.

ʻʻಬಿಜೆಪಿ ಪಕ್ಷದ ಮೇಲೆ ನನ್ನಗೆ ಯಾವುದೇ ದ್ವೇಷ ಇಲ್ಲ. ನರೇಂದ್ರ ಮೋದಿ ಅತ್ಯುತ್ತಮ ನಾಯಕ. ಆದರೆ, ಲಕ್ಷ್ಮಣ ಸವದಿ ಕೆಲಸಕ್ಕೆ ಬಾರದ ವ್ಯಕ್ತಿ ಎಂದು ಹೇಳಿದ್ದಾರೆ. ಅವರ ಭಾವನೆಗಳಿಗೆ ನಾನು ತಲೆ ಬಾಗುತ್ತೇನೆʼʼ ಎಂದು ಹೇಳಿದ ಅವರು, ಬಿಜೆಪಿ ವರಿಷ್ಠರಿಗೆ ಸವದಿ ಕಿವಿಮಾತು ಹೇಳಿದರು.

ʻʻಕೊನೆಯ ಬಾರಿಗೆ ಇನ್ನೂಂದು ಸಾರಿ ಪರಿಶೀಲನೆ ಮಾಡಿ. ಮನೆಯಿಂದ ನನ್ನ ಹೊರಗಡೆ ಹಾಕಬೇಡಿ. ರಾಜಕೀಯ ಗುರುಗಳಾದ ಅನಂತಕುಮಾರ್ ಇಲ್ಲ. ಮಾಧ್ಯಮಗಳ ಮುಖಾಂತರ ನನ್ನ ರಾಜಕೀಯ ಗುರುಗಳಿಗೆ ಕ್ಷಮೆ ಕೇಳುತ್ತೇನೆ. ನನ್ನ ಮನದಲ್ಲಿ ಹಾಗೂ ಹೆಸರು ಹೇಳದ ರಾಜಕೀಯ ಗುರುವಿಗೆ ಕ್ಷಮೆ ಕೇಳುತ್ತೇನೆʼʼ ಎಂದು ಭಾವುಕರಾಗಿ ಹೇಳಿದರು ಲಕ್ಷ್ಮಣ ಸವದಿ.

ಇದನ್ನೂ ಓದಿ : Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ

Exit mobile version