Site icon Vistara News

Karnataka Elections : ಹಾಸನ ಟಿಕೆಟ್‌ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ; ಭವಾನಿಗೆ ಟಿಕೆಟ್‌ ಇಲ್ಲವೇ ಇಲ್ಲ ಎಂದರು ಎಚ್‌ಡಿಕೆ

kumarawamy

#image_title

ರಾಮನಗರ: ಹಾಸನ ವಿಧಾನಸಭಾ ಕ್ಷೇತ್ರ (Karnataka Elections) ಜೆಡಿಎಸ್‌ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ನನ್ನ ನಿಲುವು ಬದಲಾಗುವುದಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಹಾಸನದಲ್ಲಿ ಕುಟುಂಬದ ಸದಸ್ಯರು ನಿಲ್ಲಬೇಕಾಗಿಲ್ಲ. ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ತಾಕತ್ತು ಪಕ್ಷಕ್ಕಿದೆ ಎನ್ನುವುದು ಎಚ್‌.ಡಿ ಕುಮಾರಸ್ವಾಮಿ ಹಿಂದಿನಿಂದಲೂ ಪ್ರತಿಪಾದಿಸುತ್ತಿರುವ ನಿಲುವು. ಅಂದರೆ ಯಾವ ಕಾರಣಕ್ಕೂ ಎಚ್.‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಡುವುದು ಬೇಡ, ಎಚ್‌.ಪಿ ಸ್ವರೂಪ್‌ ಅವರೇ ನಿಲ್ಲಲಿ ಎಂಬ ನಿಲುವನ್ನು ಅವರು ಸೋಮವಾರ ಪುನರುಚ್ಚರಿಸಿದ್ದಾರೆ.

ಭಾನುವಾರ ಎಚ್.ಡಿ. ದೇವೇಗೌಡರ ಮನೆಯಲ್ಲಿ ನಡೆದ ಮಹತ್ವದ ಸಭೆಯಲ್ಲೂ ಕುಮಾರಸ್ವಾಮಿ ಇದೇ ಮಾತು ಹೇಳಿದ್ದರು. ಇದು ಭವಾನಿ ರೇವಣ್ಣ ಅವರನ್ನು ಕೆರಳಿಸಿತ್ತು. ಮತ್ತು ರೇವಣ್ಣ ಕೂಡಾ ಅಸಹನೆ ವ್ಯಕ್ತಪಡಿಸಿದ್ದರು. ಇದೀಗ ಸೋಮವಾರ ಜೆಡಿಎಸ್‌ನ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಹಾಸನದ ಅಭ್ಯರ್ಥಿ ಫೈನಲ್‌ ಆಗುವ ಸಾಧ್ಯತೆಗಳಿಲ್ಲ. ಯಾಕೆಂದರೆ, ದೇವೇಗೌಡರು ದಿಲ್ಲಿಯಿಂದ ಮರಳಿದ ಬಳಿಕವಷ್ಟೇ ಹಾಸನ ಟಿಕೆಟ್‌ ಫೈನಲ್‌ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರ ಮತ್ತು ಮುಖಂಡರ ಸೇರ್ಪಡೆ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು. ʻʻಹಾಸನ ಟಿಕೇಟ್ ಬಗ್ಗೆ ಹಲವಾರು ಸುತ್ತಿನ ಚರ್ಚೆ ಆಗಿದೆ. ಈ ಬಗ್ಗೆ ಸುಗಮವಾಗಿ ತೀರ್ಮಾನ ಆಗುತ್ತದೆ. ದೇವೇಗೌಡರು ಇವತ್ತು ದೆಹಲಿಗೆ ಹೋಗಿದ್ದಾರೆ. ದೆಹಲಿಯಿಂದ ಬಂದ ಬಳಿಕ ಟಿಕೇಟ್ ತೀರ್ಮಾನ ಘೋಷಣೆ ಆಗುತ್ತದೆ. ಹಾಸನದ ವಿಷಯದಲ್ಲಿ ನನ್ನ ಸ್ಟ್ಯಾಂಡ್ ಬದಲಾಗಲ್ಲ.. ದೇವೇಗೌಡರು ದೆಹಲಿತಿಂದ ಬಂದ ಮೇಲೆ ಎಲ್ಲಾ ಗೊತ್ತಾಗಲಿದೆ. ದೇವೇಗೌಡರು ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಬಗ್ಗೆ ಅವರೇ ತೀರ್ಮಾನ ಮಾಡ್ತಾರೆʼʼ ಎಂದರು.

ʻʻಟಿಕೇಟ್ ಸಿಗದಿದ್ದರೆ ಭವಾನಿ ರೇವಣ್ಣ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರೆʼʼ ಎಂಬ ವದಂತಿಗಳ ಬಗ್ಗೆ ಕೇಳಿದಾಗ,
ಅದು ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು ಕುಮಾರಸ್ವಾಮಿ.

ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ

ʻʻಚನ್ನಪಟ್ಟಣದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ‌. ಮನೆ ಮಗನ ರೀತಿಯಲ್ಲಿ ನನಗೆ ಆಶೀರ್ವಾದ ಮಾಡುತ್ತಿರಿ ಎಂಬ ವಿಶ್ವಾಸವಿದೆ. ರಾಮನಗರ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ನಾವು ಗೆಲ್ತೇವೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಿಮ್ಮ ಮನೆ ಮಗನನ್ನು ಬಿಟ್ಟು ಬೇರೆ ಯಾರೂ ಸಿಎಂ ಆಗೋಕಾಗಲ್ಲ.ʼʼ ಎಂದು ಹೇಳಿದ ಕುಮಾರಸ್ವಾಮಿ, ಇದೇ ತಿಂಗಳ 19ರಂದು ನಾಮಪತ್ರ ಸಲ್ಲಿಸುತ್ತೇನೆ. ಏಪ್ರಿಲ್‌ 20 ಹಾಗೂ 21ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಉಳಿದಂತೆ ನೀವೇ ನೋಡಿಕೊಳ್ಳಬೇಕುʼʼ ಎಂದು ಮನವಿ ಮಾಡಿದರು.

ʻʻ2018ರ ರೀತಿಯಲ್ಲಿ ಈ ಚುನಾವಣೆ ನಡೆಸಿಕೊಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ, ನೀವೇ ಮುಂದೆ ನಿಂತು ಚುನಾವಣೆ ನಡೆಸಿ. ನನ್ನನ್ನು ನೀವು ರಕ್ಷಣೆ ಮಾಡಿದ್ರೆ, ರಾಜ್ಯದ ಬಡವರನ್ನ ನಾನು ರಕ್ಷಣೆ ಮಾಡ್ತೇನೆ. ಈ ಬಾರಿ ನನಗೆ ಶಕ್ತಿ ನೀಡಿʼʼ ಎಂದು ಕುಮಾರಸ್ವಾಮಿ ಅವರು, ಚುನಾವಣಾ ಜವಾಬ್ದಾರಿಯನ್ನು ಕ್ಷೇತ್ರದ ಕಾರ್ಯಕರ್ತರಿಗೆ ವಹಿಸಿದರು.

ಮಾಜಿ ಸಚಿವ ಸಿಪಿವೈ ವಿರುದ್ಧ ಹೆಚ್ಡಿಕೆ ಕಿಡಿ

ʻʻಕ್ಷೇತ್ರಕ್ಕೆ ಹೆಚ್ವು ಅನುದಾನ ತಂದಿದ್ದೇನೆ ಅಂತ ಕೆಲವರು ಓಡಾಡ್ತಿದ್ದಾರೆ. ಆದರೆ ನನ್ನ ಹೆಸರು ಹೇಳ್ಕೊಂಡೆ ಅನುದಾನ ತರಬೇಕು. ಅವರು ಇಲ್ಲಿ ಕುಮಾರಸ್ವಾಮಿ ಅವರನ್ನು ಸೋಲಿಸ್ತೀನಿ ಅಂತ ದುಡ್ಡು ತರ್ತಿದ್ದಾರೆʼʼ ಎಂದು ಹೇಳಿದ ಅವರು, ʻʻಕೋವಿಡ್ ಸಮಯದಲ್ಲಿ ಈ ವ್ಯಕ್ತಿಗಳು ಎಲ್ಲಿದ್ರು? ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರು ಬರೋದು. ನನಗೆ ಇನ್ನೊಂದು ವರ್ಷ ಅಧಿಕಾರ ಇದ್ದಿದ್ರೆ ಎಲ್ಲಾ ಸಮಸ್ಯೆ ಬಗೆಹರಿಸ್ತಿದ್ದೆ. ನನ್ನ ಅಧಿಕಾರ ತೆಗೆದವರು ಇವರೇ. ಈಗ ಕೆಲಸ ಮಾಡಿಲ್ಲ ಅಂತ ಹೇಳುತ್ತಿರುವುದು ಇವರೇʼʼ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದರು.

ಇದನ್ನೂ ಓದಿ : JDS Politics : ಜೆಡಿಎಸ್‌ ಬಿಕ್ಕಟ್ಟಿನ ಹಿಂದಿರುವುದು ಅಣ್ಣ-ತಮ್ಮರ ಪ್ರತಿಷ್ಠೆಯಲ್ಲ, ಅಕ್ಕ-ತಂಗಿಯರ ಫೈಟ್; ಇದು ನಿಜವಾಗಿ ಅನಿತಾ Vs ಭವಾನಿ?

Exit mobile version