ಬೆಂಗಳೂರು: ಸಣ್ಣ ವಯಸ್ಸಿನಲ್ಲಿ ಆರೆಸ್ಸೆಸ್, ಕಾಲೇಜು ಜೀವನದಲ್ಲಿ ಎಬಿವಿಪಿ, ಅದಾದ ಬಳಿಕ ರಾಜಕೀಯ ಜೀವನದ ಉದ್ದಕ್ಕೂ ಬಿಜೆಪಿಯನ್ನೇ ಉಸಿರಾಡಿದ ಜಗದೀಶ್ ಶಿವಪ್ಪ ಶೆಟ್ಟರ್ ಅವರು ಬಿಜೆಪಿ ಜತೆಗಿನ 40 ವರ್ಷಗಳ ಸಹಯಾನವನ್ನು ಕೊನೆಗೊಳಿಸಿ ಕಾಂಗ್ರೆಸ್ ಕೈಹಿಡಿದಿದ್ದಾರೆ. ಇದು ರಾಜ್ಯ ರಾಜಕೀಯದ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗುತ್ತಿದೆ. ಕಟ್ಟಾ ಬಿಜೆಪಿ ನಾಯಕನಾಗಿದ್ದ ಶೆಟ್ಟರ್ ಆರು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದು, ಏಳನೇ ಬಾರಿಯ ಸ್ಪರ್ಧೆಗೆ ಬಿಜೆಪಿಯಲ್ಲಿ ಅವಕಾಶ ಸಿಗದೆ ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಹುದ್ದೆಯವರೆಗೆ ಬಹು ಮುಖ್ಯ ಜವಾಬ್ದಾರಿಗಳನ್ನು ನಿಭಾಯಿಸಿದ ಜಗದೀಶ್ ಸಜ್ಜನ ರಾಜಕಾರಣಿಯಾಗಿ, ಉತ್ತಮ ಆಡಳಿತಗಾರನಾಗಿ, ಎಲ್ಲದೊಂದಿಗೆ ಹೊಂದಿಕೊಳ್ಳುವ ಸ್ವಭಾವದೊಂದಿಗೆ ಗಮನ ಸೆಳೆದಿದ್ದಾರೆ. ಲಿಂಗಾಯತರಲ್ಲಿ ಅವರದ್ದು ಬಣಜಿಗ ಉಪಪಂಗಡಕ್ಕೆ ಸೇರಿದ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂಬ ಹೈಕಮಾಂಡ್ ಆದೇಶದಿಂದ ಬೇಸತ್ತು ಬಿಜೆಪಿಯನ್ನು ತೊರೆದಿದ್ದಾರೆ.
ಶೆಟ್ಟರ್ ಒಬ್ಬರೇ ಅಲ್ಲ, ಇಡೀ ಕುಟುಂಬವೇ ಸಂಘ ನಿಷ್ಠ
ಜಗದೀಶ್ ಶೆಟ್ಟರ್ ಅವರು ಹುಟ್ಟಿದ್ದು 1955ರ ಡಿಸೆಂಬರ್ 17ರಂದು. ಅಂದರೆ ಈಗ 67 ವರ್ಷ. ಈಗಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಕೆರೂರು ಗ್ರಾಮದಲ್ಲಿ ಹುಟ್ಟಿದವರು. ಇವರ ತಂದೆ ಎಸ್‌ಎಸ್ ಶೆಟ್ಟರ್ ಮತ್ತು ತಾಯಿ ಬಸವಣ್ಯಮ್ಮ. ತಂದೆಯ ಅವರ ಕಾಲದಿಂದಲೇ ಶೆಟ್ಟರ್ ಕುಟುಂಬ ಸಂಘ ನಿಷ್ಠೆಯನ್ನು ಹೊಂದಿತ್ತು. ಎಸ್.ಎಸ್ ಶೆಟ್ಟರ್ ಅವರು ಜನಸಂಘದ ಹಿರಿಯ ನಾಯಕರಾಗಿದ್ದರು. ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಐದು ಬಾರಿ ಆಯ್ಕೆಯಾಗಿದ್ದರು. ಮಾತ್ರವಲ್ಲ, ಹುಬ್ಬಳ್ಳಿ-ಧಾರವಾಡದ ಮೊದಲ ಜನಸಂಘದ ಮೇಯರ್ ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ.
ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ ಸದಾಶಿವ ಶೆಟ್ಟರ್ ಅವರು 1967ರಲ್ಲಿ ಹುಬ್ಬಳ್ಳಿ ನಗರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ದಕ್ಷಿಣ ಭಾರತದಲ್ಲಿ ವಿಧಾನಸಭೆಗೆ ಮೊದಲ ಜನಸಂಘದ ನಾಯಕ!
ಜಗದೀಶ್ ಶೆಟ್ಟರ್ ಅವರು ಬಿಕಾಂ ಪದವೀಧರ ಮತ್ತು ಬಳಿಕ ಎಲ್‌ಎಲ್‌ಬಿ ಮಾಡಿ ಇಪ್ಪತ್ತು ವರ್ಷಗಳ ಹುಬ್ಬಳ್ಳಿಯಲ್ಲಿ ವಕೀಲ ವೃತ್ತಿ ನಡೆಸಿದ್ದಾರೆ. ಶಿಲ್ಪಾ ಶೆಟ್ಟರ್ ಮತ್ತು ಜಗದೀಶ್ ಶೆಟ್ಟರ್ ದಂಪತಿಗೆ ಪ್ರಶಾಂತ್ ಮತ್ತು ಸಂಕಲ್ಪ್ ಎಂಬ ಇಬ್ಬರು ಗಂಡು ಮಕ್ಕಳು.
ರಾಜಕೀಯ ಬದುಕು
1994ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಶೆಟ್ಟರ್ ಬಳಿಕ 1999, 2004, 2008, 2013, 2018 ಹೀಗೆ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಅವರು ವಿರೋಧ ಪಕ್ಷದ ನಾಯಕರಾದರು, ಸ್ಪೀಕರ್ ಆದರು, ಹಲವು ಖಾತೆಗಳನ್ನು ನಿಭಾಯಿಸಿದರು, ಕೊನೆಗೆ 10 ತಿಂಗಳ ಕಾಲ ಮುಖ್ಯಮಂತ್ರಿಯೂ ಆದರು. ಅವರು ಬಹುತೇಕ ಎಲ್ಲವನ್ನೂ ಪಡೆದರು ಎಂದು ಹೇಳಲಾಗುತ್ತದೆಯಾದರೂ ಯಾವುದನ್ನೂ ಪೂರ್ಣವಾಗಿ ಪಡೆಯಲೇ ಇಲ್ಲ!
ಆರ್‌ಎಸ್‌ಎಸ್ ಮೂಲಕ ರಾಜಕೀಯಕ್ಕೆ ಬಂದ ಜಗದೀಶ್ ಶೆಟ್ಟರ್ 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾದರು. 1994ರಲ್ಲಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದರು. ಅದೇ ವರ್ಷ ಮೊದಲ ಬಾರಿ ಶಾಸಕರಾದರು.
1999ರಲ್ಲಿ ಗೆಲುವು ಸಾಧಿಸಿದ ಅವರು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. 2006ರಲ್ಲಿ ಬಿಜೆಪಿ-ಜೆಡಿಎಸ್ 20-20 ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು 20 ತಿಂಗಳು ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು. ಮುಂದೆ 2008ರಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಾಗ ಶೆಟ್ಟರ್ ಅವರಿಗೆ ಸ್ಪೀಕರ್ ಪಟ್ಟ ಕಟ್ಟಲಾಯಿತು. ಮಧ್ಯೆ 2009ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದರು. ಈ ನಡುವೆ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದು ಅವರು ರಾಜೀನಾಮೆ ನೀಡಿದಾಗ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾದರು. ಆದರೆ, ಪಕ್ಷಕ್ಕೆ ಅವರು ಸರಿಹೋಗದೆ ಇದ್ದಾಗ ಪಾರ್ಟ್‌ಟೈಮ್ ಚೀಫ್ ಮಿನಿಸ್ಟರ್ ಆಗಿ ಗಾದಿಗೆ ಏರಿದ್ದು ಜಗದೀಶ್ ಶೆಟ್ಟರ್. ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಅವರು ಆಡಳಿತ ಮಾಡಿದ್ದು 10 ತಿಂಗಳು ಮಾತ್ರ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಗದೀಶ್ ಶೆಟ್ಟರ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವೇ ಸಿಕ್ಕಿತು.
2019ರಲ್ಲಿ ಆಪರೇಷನ್ ಕಮಲದ ಬಳಿಕ ಅಸ್ತಿತ್ವಕ್ಕೆ ಬಂದಾಗ ಹಿಂದೆ ತಾನು ಸಿಎಂ ಆಗಿದ್ದೆ ಎಂಬ ಹಮ್ಮು ತೋರದೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ನಿಭಾಯಿಸಿದರು. ಮುಂದೆ 2021ರ ಜುಲೈನಲ್ಲಿ ಯಡಿಯೂರಪ್ಪ ಅವರು ಸಿಎಂ ಗಾದಿಯಿಂದ ಇಳಿದು ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಾಗ ತನಗಿನ್ನು ಸಚಿವ ಖಾತೆಗಳು ಬೇಡ ಎಂದರು.
2023ರ ಚುನಾವಣೆಗೆ ಸಜ್ಜುಗೊಳ್ಳುತ್ತಿದ್ದ ಜಗದೀಶ್ ಶೆಟ್ಟರ್ ಅವರಿಗೆ ಹೈಕಮಾಂಡ್ ಇನ್ನು ನಿಮ್ಮ ಸ್ಪರ್ಧೆ ಸಾಕು ಎಂದು ಹೇಳಿದ್ದು ಆಘಾತವನ್ನು ತಂದಿತ್ತು. ತನಗಿನ್ನೂ 67 ವರ್ಷ. ಇನ್ನೂ ಸಾಕಷ್ಟು ರಾಜಕೀಯವಿದೆ ಎಂದು ತಿಳಿದಿದ್ದ ಶೆಟ್ಟರ್ ನನಗೇನೂ ಬೇಡ ಶಾಸಕನಾಗಿ ಉಳಿಯುತ್ತೇನೆ ಎಂದು ಹೇಳಿದ್ದರು. ಆದರೆ, ಪಕ್ಷ ಅದಕ್ಕೆ ಒಪ್ಪಿರಲಿಲ್ಲ.
ಸೌಮ್ಯ ಸ್ವಭಾವದ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶಾಸಕರಾಗಿದ್ದರೂ ಅಲ್ಲಿ ನಡೆಯುತ್ತಿದ್ದ ಯಾವ ಪ್ರಮುಖ ಕಾರ್ಯಕ್ರಮಕ್ಕೂ ಆಹ್ವಾನ ಇರುತ್ತಿರಲಿಲ್ಲ. ಅದು ಪಕ್ಷದ್ದಿರಬಹುದು, ಸರ್ಕಾರದ್ದಿರಬಹುದು. ಪ್ರತಿ ಬಾರಿಯೂ ಯಾರಾದರೂ ಪ್ರಶ್ನಿಸಿದಾಗಲೇ, ಮಾಧ್ಯಮಗಳು ವರದಿ ಮಾಡಿದಾಗಲೇ ಅವರಿಗೆ ಅವಕಾಶ ಸಿಗುತ್ತಿದ್ದುದು. ಹಾಗಂತ ಜಗದೀಶ್ ಶೆಟ್ಟರ್ ಅವರು ಅದನ್ನು ಯಾವತ್ತೂ ಪ್ರಶ್ನೆ ಮಾಡಿರಲಿಲ್ಲ.
ಆದರೆ, ಯಾವಾಗ ನೀವಿನ್ನು ಸ್ಪರ್ಧಿಸುವುದು ಬೇಡ, ನಿವೃತ್ತಿ ಘೋಷಿಸಿ ಯುವಕರಿಗೆ ಅವಕಾಶ ಕೊಡಿ ಎಂದು ಹೈಕಮಾಂಡ್ ಹೇಳಿತೋ ಆಗ ಶೆಟ್ಟರ್ ಸಿಡಿದುಬಿದ್ದರು. ನನ್ನಿಂದ ಏನು ತಪ್ಪಾಗಿದೆ, ನಾನು ಏನು ಹಗರಣ ಮಾಡಿದ್ದೇನೆ, ನನ್ನ ಬಗ್ಗೆ ಏನಾದರೂ ದೂರಿದೆಯಾ? ಯಾಕೆ ನಾನು ಸ್ಪರ್ಧಿಸಬಾರದು ಎನ್ನುವುದಕ್ಕೆ ಒಂದು ಕಾರಣ ಕೊಡಿ ಎಂದು ಹೈಕಮಾಂಡ್ ಮುಂದೆ ನಿಂತು ಕೇಳಿದರು. ಅವರಿಗೆ ಉತ್ತರ ಸಿಗಲಿಲ್ಲ. ಬದಲಾಗಿ ನಿಲ್ಲಬಾರದು ಅಂದರೆ ನಿಲ್ಲಬಾರದು ಅಷ್ಟೇ ಎಂಬ ಫರ್ಮಾನು ಮಾತ್ರ ಸಿಕ್ಕಿತು ಅಷ್ಟೆ. ಹೀಗಾಗಿ ಈಗ ಜಗದೀಶ್ ಶೆಟ್ಟರ್ ಅವರು ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ದೂರ ಸರಿದಿದ್ದಾರೆ.
ಜಗದೀಶ್ ಶೆಟ್ಟರ್ ಬದುಕಿನ ಹೆಜ್ಜೆಗಳು
ಜನನ: 17-12-1955
ಹುಟ್ಟಿದ್ದು: ಬಾದಾಮಿ ತಾಲೂಕಿನ ಕೆರೂರ
ತಂದೆ: ಎಸ್.ಎಸ್. ಶೆಟ್ಟರ್
ತಾಯಿ: ಬಸವಣ್ಯಮ್ಮ
ಪತ್ನಿ: ಶಿಲ್ಪಾ ಶೆಟ್ಟರ್
ಮಕ್ಕಳು: ಪ್ರಶಾಂತ್ ಮತ್ತು ಸಂಕಲ್ಪ
ವಿದ್ಯಾರ್ಹತೆ: ಬಿ.ಕಾಂ. ಎಲ್.ಎಲ್.ಬಿ
1990: ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ಅಧ್ಯಕ್ಷತೆ
1994: ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷತೆ
1994 : ಮೊದಲ ಬಾರಿಗೆ ಶಾಸಕ (ಹುಬ್ಬಳ್ಳಿ ಗ್ರಾಮಾಂತರ)
1999: ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
1999: 2ನೇ ಬಾರಿ ಶಾಸಕ, 11ನೇ ವಿಧಾನಸಭೆಯ ವಿಪಕ್ಷ ನಾಯಕ.
2004: ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ.
2005: ಬಿಜೆಪಿ ರಾಜ್ಯಾಧ್ಯಕ್ಷ
2006: ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವ
2008: 4ನೇ ಬಾರಿ ಶಾಸಕ, 13ನೇ ವಿಧಾನಭೆಯ ಸ್ಪೀಕರ್
2009: ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಹುದ್ದೆ
2012, ಜುಲೈ 12: ರಾಜ್ಯದ 27ನೇ ಸಿಎಂ ಆಗಿ ಪ್ರಮಾಣ.
2013: 5ನೇ ಬಾರಿ ಶಾಸಕ, ವಿರೋಧ ಪಕ್ಷದ ನಾಯಕನ ಹುದ್ದೆ
2018: 6ನೇ ಬಾರಿ ಶಾಸಕರಾಗಿ ಆಯ್ಕೆ
2019: ಬಿಎಸ್‌ವೈ ಸಂಪುಟದಲ್ಲಿ ಕೈಗಾರಿಕಾ ಸಚಿವರು