ಮೈಸೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಯ (Karnataka Elections 2023) ದಿನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವರುಣ ಕ್ಷೇತ್ರದಲ್ಲಿ ಅದ್ಧೂರಿ ಪ್ರಚಾರವನ್ನು ಆರಂಭಿಸಿದ್ದಾರೆ ಮತ್ತು ಆರಂಭದ ದಿನವೇ ಮಾಜಿ ಮುಖ್ಯಮಂತ್ರಿ ಬಿ.ವೈ. ವಿಜಯೇಂದ್ರ (BY Vijayendra) ಅವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ʻʻರಾಜ್ಯದಲ್ಲಿ ಪಿಎಸ್‌ಐ ಹಗರಣ ನಡೆದಿರುವುದು ಎಲ್ಲರಿಗೂ ಗೊತ್ತು. ಒಂದು ಹುದ್ದೆಗೆ 15-20 ಲಕ್ಷ ರೂ. ಲಂಚ ಫಿಕ್ಸಾಗಿತ್ತು. ಎಲ್ಲ ವ್ಯವಹಾರ ನಡೆದಿರುವುದು ಬಿ.ಎಸ್. ಯಡಿಯೂರಪ್ಪ ಅವರ ಮಗನ ಮನೆಯಲ್ಲೇ ನಡೆದಿದೆ. ಇದನ್ನು ನಾನು ಹೇಳುತ್ತಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾನೆ. ಈ ಹಗರಣದಲ್ಲಿ ಎಡಿಜಿಪಿ ಒಬ್ಬ ಜೈಲಿಗೆ ಹೋಗಿದ್ದಾನೆ. ಯತ್ನಾಳ್ ಸತ್ಯವನ್ನೇ ಒಪ್ಪಿಕೊಂಡಿದ್ದಾನೆʼʼ ಎಂದು ವಾಗ್ದಾಳಿ ನಡೆಸಿದರು.
ʻʻಸಿಎಂ ಆಗಬೇಕಾದರೆ ಎರಡೂವರೆ ಸಾವಿರ ಹಣ ಕೊಡಬೇಕು ಅಂತಲೂ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾನೆ. ಒಂದೊಮ್ಮೆ ಯತ್ನಾಳ್ ಹೇಳಿದ್ದು ಸುಳ್ಳೇ ಆಗಿದ್ದರೆ ಅವರನ್ನು ಪಕ್ಷದಿಂದ ಕಿತ್ತು ಹಾಕಬೇಕಿತ್ತಲ್ವಾ? ಯಾಕೆ ತೆಗೆದುಹಾಕಿಲ್ಲ? ಅಂದ್ರೆ ಸತ್ಯವನ್ನೇ ಹೇಳಿದ್ದಾನೆ. ಅದಕ್ಕೆ ತೆಗೆದುಹಾಕಿಲ್ಲʼʼ ಎಂದು ಸಿದ್ದರಾಮಯ್ಯ ಹೇಳಿದರು.
ನಾವು 15 ಲಕ್ಷ ಮನೆ ಕಟ್ಟಿಕೊಟ್ಟೆವು, ಅವರು ಒಂದೂ ಇಲ್ಲ
ʻʻನಮ್ಮ ಸರ್ಕಾರ ಅಧಿಕಾರದಲ್ಲಿರುವಾಗ 15 ಲಕ್ಷ ಮನೆ ಕಟ್ಟಿಕೊಟ್ಟಿದ್ದೆವು. ಮುಂದೆ ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿ ಕೊಡುತ್ತೇವೆ. ಈ ಮನೆ ಹಾಳರು ಬಂದರು. ಒಂದೇ ಒಂದು ಮನೆ ಕಟ್ಟಿ ಕೊಡಲಿಲ್ಲ. ಬಿಜೆಪಿಯವರು ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ಕೊಟ್ಟಿಲ್ಲ, ಸೈಕಲ್ ಕೊಟ್ಟಿಲ್ಲʼʼ ಎಂದು ಹೇಳಿದರು.
ʻʻಬೊಮ್ಮಾಯಿ ಧರ್ಮರಾಯನ ಥರ ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ಶೇ.40, ಬೆಂಗಳೂರಿನಲ್ಲಿ ಶೇ.50ರಷ್ಟು ಕಮಿಷನ್ ಅಧಿಕೃತವಾಗಿದೆ. ಮುಂದೆ ಮುಂದೆ ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತೇವೆ ಎಂದು ಅಮಿತ್ ಶಾ ಹೇಳುತ್ತಾರೆ. ಹಾಗಿದ್ದರೆ ಇದುವರೆಗೆ ಭ್ರಷ್ಟಾಚಾರ ತಡೆಯಲು ಆಗಿಲ್ವ?ʼʼ ಎಂದು ಪ್ರಶ್ನಿಸಿದರು.
ʻʻಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದರು ಅಂತ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಸಚಿವ ಕೆ.ಎಸ್. ಈಶ್ವರಪ್ಪ ಪಾರ್ಟಿ ವರ್ಕರ್ ಹತ್ತಿರವೂ 40% ಕೇಳ್ತಾನೆ. ಅವನಿಗೆ ಮರ್ಯಾದೆ ಇದೆಯಾʼʼ ಎಂದು ಸಿದ್ದರಾಮಯ್ಯ ಕೇಳಿದರು.
ವರುಣಾ ಕ್ಷೇತ್ರದೆಲ್ಲೆಡೆ ಸಂಚಾರ ನಡೆಸಿದ ಸಿದ್ದರಾಮಯ್ಯ ಮೊದಲ ಸುತ್ತಿನ ಪ್ರಚಾರವನ್ನು ಮಾಡಿದರು. ಮುಂದೆ ಪದೇಪದೆ ಪ್ರಚಾರಕ್ಕೆ ಬರಲು ಆಗುವುದಿಲ್ಲ. ಪುತ್ರ ಯತೀಂದ್ರ ಪ್ರಚಾರದ ಜವಾಬ್ದಾರಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಬಿ.ವೈ ವಿಜಯೇಂದ್ರ ವರುಣದಿಂದ ನಿಲ್ತಾರಾ?
ಈ ನಡುವೆ, ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ ಅವರೇ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಜೋರಾಗಿ ಚರ್ಚೆಯಲ್ಲಿದೆ. ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ಬಂದ ದಿನವೂ ವರುಣ ಕ್ಷೇತ್ರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಅಮಿತ್ ಶಾ ಬಂದು ಹೋದ ಮೇಲೆ ವಿಜಯೇಂದ್ರ ಅವರ ಸ್ಪರ್ಧೆಯ ಕುತೂಹಲ ಹೆಚ್ಚಿದೆ. ಕಳೆದ ಬಾರಿ ಯತೀಂದ್ರ ಅವರು ಕಣಕ್ಕಿಳಿದಾಗಲೂ ವಿಜಯೇಂದ್ರ ಹೆಸರು ಕೇಳಿಬಂದಿತ್ತು.