Site icon Vistara News

Karnataka Elections : ಮಾರ್ಚ್‌ 20ಕ್ಕೆ ರಾಹುಲ್‌ ಗಾಂಧಿ ರಾಜ್ಯಕ್ಕೆ; ಬೆಳಗಾವಿಯಲ್ಲಿ ಯುವ ಸಮಾವೇಶ, ರ‍್ಯಾಲಿ

rahul gandhi

#image_title

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ, ರಾಜನಾಥ್‌ ಸಿಂಗ್‌ ಸೇರಿದಂತೆ ಕೇಂದ್ರದ ಪ್ರಮುಖ ಬಿಜೆಪಿ ನಾಯಕರು ರಾಜ್ಯದಲ್ಲಿ ಹತ್ತಾರು ಸುತ್ತು ಚುನಾವಣಾ ಸಮಾವೇಶ, ಫಲಾನುಭವಿಗಳ ಸಮಾವೇಶ ನಡೆಸಿ ಎಲೆಕ್ಷನ್‌ ಟ್ರೆಂಡ್‌ ಸೆಟ್‌ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ಮಾತ್ರ ಇನ್ನೂ ನಿದ್ದೆಯಿಂದ ಎದ್ದಿಲ್ಲವೇ ಎಂಬ ಕುತೂಹಲಗಳ ನಡುವೆ ಇದೀಗ ಮೊದಲ ಬಾರಿ ರಾಹುಲ್‌ ಗಾಂಧಿ ರಾಜ್ಯಕ್ಕೆ (Karnataka Elections) ಆಗಮಿಸುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಭಾರತ್‌ ಜೋಡೋ ಯಾತ್ರೆಯ ಹೆಸರಿನಲ್ಲಿ ರಾಜ್ಯದಲ್ಲಿ ಹಲವಾರು ಕಡೆ ನಡೆದಾಡಿದ್ದ ರಾಹುಲ್‌ ಅದು ಮುಗಿದ ಬಳಿಕ ಮಾತ್ರ ಇತ್ತ ತಲೆ ಹಾಕಿಲ್ಲ. ಭಾರತ್‌ ಜೋಡೊ ಯಾತ್ರೆ ನಡೆಯುತ್ತಿದ್ದಾಗ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಡೆದರೂ ತಲೆಕೆಡಿಸಿಕೊಳ್ಳದಿದ್ದ ರಾಹುಲ್‌ ಕರ್ನಾಟಕದ ಬಗೆಗೂ ಅದೇ ಉದಾಸೀನ ಧೋರಣೆ ಅನುಸರಿಸುತ್ತಾರೆ ಎಂದೇ ಹೇಳಲಾಗಿತ್ತು.

ಈ ನಡುವೆ ಅವರು ರಾಜ್ಯಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಘೋಷಣೆ ಹೊರಟಿದೆ. ಅವರು ಬೆಳಗಾವಿಯಿಂದ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಮಾರ್ಚ್ 20ರಂದು ಬೆಳಗಾವಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಅವರು ಬೆಳಗಾವಿ ವಿಭಾಗದ 9 ಸಂಘಟನಾತ್ಮಕ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಹುಬ್ಬಳ್ಳಿ ನಗರ, ಧಾರವಾಡ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್‌ 15ರಂದು ಪೂರ್ವಭಾವಿ ಸಭೆ

ಈ ನಡುವೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರು ಮಾರ್ಚ್‌ 16ರಂದು ಬೆಳಗಾವಿಯಲ್ಲಿ ಇದಕ್ಕೆ ಸಂಬಂಧಿಸಿ ಪೂರ್ವಭಾವಿ ಸಭೆಯೊಂದನ್ನು ಕರೆದಿದ್ದಾರೆ.

9 ಸಂಘಟನಾತ್ಮಕ ಜಿಲ್ಲೆಗಳ ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, 2019ರ ಲೋಕಸಭಾ ಚುನಾವಣೆ ಅಭ್ಯರ್ಥಿಗಳು, 2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳು, 2023ರ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಸೇರಿ ಮುಂಚೂಣಿ ನಾಯಕರಿಗೆ ಆಹ್ವಾನ ನೀಡಲಾಗಿದೆ. ಪೂರ್ವಭಾವಿ ಸಭೆಗೆ ಆಗಮಿಸಲು ಪತ್ರ ಮುಖೇನ ಡಿಕೆಶಿ ಆಹ್ವಾನ ನೀಡಿದ್ದಾರೆ.

ನಡೆಯಲಿದೆ ಯುವ ರ‍್ಯಾಲಿ

ರಾಹುಲ್‌ ಗಾಂಧಿ ಆಗಮಿಸುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಯುವ ರ‍್ಯಾಲಿಯೊಂದನ್ನು ನಡೆಸಲು ಕೆಪಿಸಿಸಿ ಪ್ಲ್ಯಾನ್‌ ಮಾಡಿದೆ. ಈ ರ‍್ಯಾಲಿ ಮೂಲಕ ರಾಜ್ಯ ಚುನಾವಣಾ ಅಖಾಡ ಪ್ರವೇಶಿಸಲಿರುವ ರಾಹುಲ್‌ ಗಾಂಧಿ ಅವರು, ಯುವಕರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಘೋಷಣೆ ಮಾಡುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನ ಮುಂದಿನ ಗ್ಯಾರಂಟಿ ಕಾರ್ಡ್‌ ಇದೇ ಆಗಿರುವ ಸಾಧ್ಯತೆಗಳಿವೆ.

ರಾಹುಲ್ ಅನುಪಸ್ಥಿತಿಯಲ್ಲೂ ಉತ್ತಮ ಪ್ರಚಾರ

ಕೇಂದ್ರ ನಾಯಕರ ಅನುಪಸ್ಥಿತಿಯ ನಡುವೆಯೂ ರಾಜ್ಯದ ಕಾಂಗ್ರೆಸ್‌ ನಾಯಕರು ಈಗಾಗಲೇ ಉತ್ತಮ ಪ್ರಚಾರವನ್ನು ಸಂಘಟಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಎಲ್ಲ ನಾಯಕರು ರಾಜ್ಯಾದ್ಯಂತ ಸುತ್ತಾಟ ನಡೆಸುತ್ತಿದ್ದು, ಎಲ್ಲೆಡೆ ಪ್ರಜಾಧ್ವನಿ ಮೊಳಗಿಸುತ್ತಿದ್ದಾರೆ. ಕಾಂಗ್ರೆಸ್‌ ರ‍್ಯಾಲಿಗಳಲ್ಲಿ ಸಾಕಷ್ಟು ಜನ ಸೇರುತ್ತಿದ್ದಾರೆ.

ಇದನ್ನೂ ಓದಿ : Budget Session: ರಾಹುಲ್​ ಗಾಂಧಿ ಲಂಡನ್​ ಹೇಳಿಕೆ ಗಲಾಟೆ; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ

Exit mobile version