Site icon Vistara News

Karnataka Elections : ಶೆಟ್ಟರ್‌ ಕಂಡಕೂಡಲೇ ಅಪ್ಪಿಕೊಂಡು ಕಣ್ಣೀರು ಹಾಕಿದ ಪತ್ನಿ ಶಿಲ್ಪಾ ಶೆಟ್ಟರ್‌; ಬಿಜೆಪಿ ವಿಶ್ವಾಸದ್ರೋಹಕ್ಕೆ ವೇದನೆ

Shilpa Shettar weeps

#image_title

ಹುಬ್ಬಳ್ಳಿ: 40 ವರ್ಷಗಳ ಬಿಜೆಪಿ ಸಹಜೀವನಕ್ಕೆ ತಿಲಾಂಜಲಿ ಇಟ್ಟು ಕಾಂಗ್ರೆಸ್‌ ಸೇರಿದ ಮಾಜಿ ಮುಖ್ಯಮಂತ್ರಿ (Karnataka Elections) ಜಗದೀಶ್‌ ಶೆಟ್ಟರ್‌ ಅವರು ಸೋಮವಾರ ಹುಬ್ಬಳ್ಳಿಯ ಮನೆಗೆ ಮರಳಿದಾಗ ಪತ್ನಿ ಶಿಲ್ಪಾ ಶೆಟ್ಟರ್‌ ಭಾವುಕ ಸ್ವಾಗತ ಕೋರಿದರು.

ಜಗದೀಶ್‌ ಶೆಟ್ಟರ್‌ ಅವರು ಮನೆಗೆ ಬರುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಜಯಕಾರಗಳನ್ನು ಕೂಗಿದರು. ಇದನ್ನು ನೋಡುತ್ತಿದ್ದಂತೆಯೇ ಭಾವುಕರಾದ ಶಿಲ್ಪಾ ಶೆಟ್ಟರ್‌ ಅವರು ಗಳಗಳನೆ ಅತ್ತರು.

ಬಿಜೆಪಿ ನಮಗೆ ವಿಶ್ವಾಸದ್ರೋಹ ಮಾಡಿದೆ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್‌ ಕೊಡದೆ ಮೋಸ ಮಾಡಲಾಗಿದೆ ಎಂದು ಶಿಲ್ಪಾ ಕಣ್ಣೀರು ಹಾಕಿದರು.

ಜಗದೀಶ್‌ ಶೆಟ್ಟರ್‌ ಅವರು ಹತ್ತಿರ ಬರುತ್ತಿದ್ದಂತೆಯೇ ಅವರ ಕಣ್ಣೀರು ಇನ್ನಷ್ಟು ಜಾಸ್ತಿಯಾಯಿತು. ಶೆಟ್ಟರ್‌ ಅವರನ್ನು ತಬ್ಬಿಕೊಂಡು ಜೋರಾಗಿ ಅಳತೊಡಗಿದರು. ಪತ್ನಿಯ ನೋವಿಗೆ ಏನೂ ಹೇಳಬೇಕು ಎಂದು ತಿಳಿಯದೆ ಸ್ವತಃ ಶೆಟ್ಟರ್‌ ಅವರು ಭಾವುಕರಾದರು. ಪತ್ನಿಯ ತಲೆಯನ್ನು ಸವರಿದರು.

ಶೆಟ್ಟರ್‌ ಅವರ ಪತ್ನಿಯನ್ನು ಮನೆಯಲ್ಲಿದ್ದ ಇತರ ಮಹಿಳೆಯರು ಸಂತೈಸಿದರಾದರೂ ಅವರ ಕಣ್ಣೀರು ತಕ್ಷಣಕ್ಕೆ ಕಡಿಮೆಯಾಗಲಿಲ್ಲ. ಆತ್ಮೀಯರನ್ನು ತಬ್ಬಿಕೊಂಡು ಅಳುತ್ತಲೇ ಇದ್ದರು.

ಜಗದೀಶ್‌ ಶೆಟ್ಟರ್‌ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಶಿಲ್ಪಾ ಶೆಟ್ಟರ್‌ ಕೂಡಾ ಸಮಪಾಲನ್ನು ಹೊಂದಿದ್ದಾರೆ. ಅವರ ವ್ಯವಹಾರಗಳಲ್ಲಿ ಶಿಲ್ಪಾ ಶೆಟ್ಟರ್‌ ಸಹಕಾರವೂ ಇದೆ. ಬಿಜೆಪಿಯನ್ನು ಬೆಳೆಸುವುದರಲ್ಲೂ ಅವರು ಹೆಗಲು ಕೊಟ್ಟಿದ್ದಾರೆ. ಶೆಟ್ಟರ್‌ ಅವರ ಮನೆಗೂ ದೊಡ್ಡ ದೊಡ್ಡ ನಾಯಕರು ಬರುತ್ತಿದ್ದರು. ಈ ರೀತಿ ನಂಬಿಕೆ ಇಟ್ಟ, ಕಟ್ಟಿದ ಪಕ್ಷವೇ ವಿಶ್ವಾಸ ದ್ರೋಹ ಮಾಡಿದೆ ಎನ್ನುವುದನ್ನು ಅರಗಿಸಿಕೊಳ್ಳಲಾಗದೆ ಶಿಲ್ಪಾ ಶೆಟ್ಟರ್‌ ಅವರು ಕಣ್ಣೀರಿಟ್ಟಿದ್ದರು ಎನ್ನಲಾಗಿದೆ.

ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದೇಕೆ?

ಜಗದೀಶ್‌ ಶೆಟ್ಟರ್‌ ಅವರು ಸುಮಾರು 40 ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಇದೀಗ ಈ ಬಾರಿ ವಿಧಾನಸಭಾ ಟಿಕೆಟ್‌ ನೀಡಲಾಗುವುದಿಲ್ಲ ಎಂಬ ಹೈಕಮಾಂಡ್‌ ಸೂಚನೆಯಿಂದ ಬೇಸತ್ತು ಶಾಸಕತ್ವ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಂಮೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ, ಬಿಜೆಪಿಯ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಶನಿವಾರ ರಾತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿ ಪಕ್ಷ ಬಿಡದಂತೆ ಮನವೊಲಿಸಿದ್ದರು. ಬಿಜೆಪಿ ಟಿಕೆಟ್‌ ಒಂದು ಬಿಟ್ಟು ಬೇರೆ ಯಾವುದೇ ಸ್ಥಾನಮಾನಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಆದರೆ, ಜಗದೀಶ್‌ ಶೆಟ್ಟರ್‌ ಮಾತ್ರ, ಶಾಸಕ ಸ್ಥಾನದ ಟಿಕೆಟ್‌ ಒಂದು ಬಿಟ್ಟು ಬೇರೆ ಯಾವ ಸ್ಥಾನಮಾನವೂ ಬೇಡ ಎಂದು ಹಠ ಮಾಡಿದ್ದರು. ಇದರಿಂದಾಗಿ ಮಾತುಕತೆ ಫಲ ನೀಡದೆ ಶೆಟ್ಟರ್‌ ಅವರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದರು.

ಇದನ್ನೂ ಓದಿ : Karnataka Elections : ಕಾಂಗ್ರೆಸ್‌ ಕೈ ಹಿಡಿದ ಸಂಘ ಪರಿವಾರದ ಹಿರಿಯ ನಾಯಕ; ಶೆಟ್ಟರ್‌ ರಾಜಕೀಯ ಮಹಾಪಯಣದ ಹಿನ್ನೋಟ ಇಲ್ಲಿದೆ

Exit mobile version