ರಂಗಸ್ವಾಮಿ ಎಂ.ಮಾದಾಪುರ ವಿಸ್ತಾರ ನ್ಯೂಸ್ ಮೈಸೂರು
ವರುಣ ವಿಧಾನಸಭಾ ಕ್ಷೇತ್ರದ ಗೆಲುವಿಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕೊನೆಯ ಚುನಾವಣೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
ಡಿ.ದೇವರಾಜ ಅರಸು ಅವರ ಬಳಿಕ ಮುಖ್ಯಮಂತ್ರಿಯಾಗಿ ಐದು ವರ್ಷ ಯಶಸ್ವಿಯಾಗಿ ಪೂರೈಸಿದ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ, 14 ಬಜೆಟ್ ಮಂಡನೆ, ಸುದೀರ್ಘ ಅವಧಿಯ ಪ್ರತಿಪಕ್ಷ ನಾಯಕ ಸ್ಥಾನ ನಿರ್ವಹಣೆ ಹೀಗೆ ಹತ್ತಾರು ಕಾರಣಗಳಿಗೆ ರಾಜ್ಯ ರಾಜಕಾರಣದ ಮೇರು ನಾಯಕ. ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.
ಈ ಕಾರಣಕ್ಕಾಗಿಯೇ ಸುರಕ್ಷಿತ ಹಾಗೂ ಸ್ವಕ್ಷೇತ್ರವಾದ ವರುಣಕ್ಕೆ ಪುನಃ ಬಂದಿದ್ದು, ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡುವ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರಿಚಯಿಸಿದ ಈ ಅಸ್ತ್ರವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನಿರತರಾಗಿದ್ದಾರೆ.
ಡಿಸೆಂಬರ್ನಿಂದಲೇ ಗ್ರಾಮ ಭೇಟಿ ಶುರು ಮಾಡಿರುವ ಡಾ.ಯತೀಂದ್ರ, ಈಗಾಗಲೇ ಒಂದು ಸುತ್ತಿನ ಮತ ಪ್ರಚಾರ ಮುಗಿಸಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಮನೆ- ಮನೆ, ಹಳ್ಳಿ-ಹಳ್ಳಿ ಸುತ್ತಾಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ಅವರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕ್ಷೇತ್ರ ಸಂಚಾರದ ವೇಳೆ ವೃದ್ಧರು, ಮಹಿಳೆಯರು, ಯಜಮಾನರು, ಸಮುದಾಯ ಸಂಘಗಳ ಯುವ ಪಡೆಯನ್ನು ಭೇಟಿಯಾಗಿ ;ಇದು ನನ್ನ ತಂದೆಯ ಕೊನೆಯ ಚುನಾವಣೆ; ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಭಾವನಾತ್ಮಕ ನಂಟು
ವರುಣ ವಿಧಾನಸಭಾ ಕಾಂಗ್ರೆಸ್ ಭದ್ರಕೋಟೆ. 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ರಚನೆಯಾದ ಹೊಸ ಕ್ಷೇತ್ರ. ಚಾಮುಂಡೇಶ್ವರಿ, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಗ್ರಾಮಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಇದುವರೆಗೂ ಮೂರು ಚುನಾವಣೆ ನಡೆದಿದ್ದು, ಎರಡು ಬಾರಿ ಸಿದ್ದರಾಮಯ್ಯ ಹಾಗೂ ಒಮ್ಮೆ ಡಾ.ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ಕ್ಷೇತ್ರದ ಮತದಾರರು ಸಿದ್ದರಾಮಯ್ಯ ಹಾಗೂ ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹೀಗಾಗಿ ಇದು ನನ್ನ ಕೊನೆ ಚುನಾವಣೆ ಎಂಬ ಮಾತು ಸಹಜವಾಗಿಯೇ ಕಾಂಗ್ರೆಸ್ ಪಾಲಿಗೆ ವರದಾನ ಆಗಬಹುದು ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.
ಆದ್ದರಿಂದಲೇ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕ್ಷೇತ್ರದ ಬಿಳುಗಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ನಾನು ಹುಟ್ಟಿದ್ದು ಸಿದ್ದರಾಮಯ್ಯನಹುಂಡಿಯಲ್ಲಿ. ನಮ್ಮೂರು ವರುಣ ಹೋಬಳಿಯಲ್ಲಿದೆ. ಈ ಕ್ಷೇತ್ರದಿಂದಲೇ ಗೆದ್ದು ಮುಖ್ಯಮಂತ್ರಿ ಆಗಿದ್ದೆ. ಇದು ನನ್ನ ಕಡೆಯ ಚುನಾವಣೆ. ಹೀಗಾಗಿ ಎಲ್ಲ ಕ್ಷೇತ್ರ ಸುತ್ತಾಡಿ ಪುನಃ ನಮ್ಮೂರಿಗೆ ಬಂದಿದ್ದೇನೆ. ಕೊನೆ ಚುನಾವಣೆಯನ್ನು ನಮ್ಮೂರಲ್ಲೇ ಗೆದ್ದು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಭಾಷಣ ಮಾಡಿದ್ದರು.
ಇದೇ ಮಾತನ್ನು ಮಾಧ್ಯಮಗಳ ಮುಂದೆಯೂ ಹಲವು ಬಾರಿ ಪ್ರಸ್ತಾಪ ಮಾಡಿದ್ದರು. ಇದೀಗ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಊರೂರು ಸುತ್ತಾಡಿ ತಂದೆಯವರನ್ನು ಕೊನೆ ಚುನಾವಣೆಯಲ್ಲಿ ಗೆಲ್ಲಿಸಿ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಲು ಅವಕಾಶ ಕೊಡಿ ಎಂದು ಮನವಿ ಮಾಡುತ್ತಿರುವುದು ಕ್ಷೇತ್ರ ಸಂಚಾರದ ವೇಳೆ ಕಂಡುಬಂತು.
ಕಳೆದ ಬಾರಿಯೂ ಹೇಳಿದ್ದರು!
ವಿಶೇಷ ಅಂದರೆ, ಸಿದ್ದರಾಮಯ್ಯ ಕೊನೆ ಚುನಾವಣೆ ವಿಚಾರ ಪ್ರಸ್ತಾಪ ಮಾಡುತ್ತಿರುವುದು ಇದೇ ಮೊದಲಲ್ಲ. 2018ರ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇದೇ ಅಸ್ತ್ರ ಪ್ರಯೋಗಿಸಿದ್ದರು. ನನಗೆ ರಾಜಕೀಯವಾಗಿ ಜನ್ಮ ಮತ್ತು ಪುನರ್ ಜನ್ಮ ಎರಡನ್ನೂ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಇದು ನನ್ನ ಕೊನೆಯ ಚುನಾವಣೆ. ಗೆದ್ದು ನಿವೃತ್ತಿ ಆಗುತ್ತೇನೆ ಎಂದು ಭಾಷಣ ಮಾಡಿದ್ದರು. ಈ ಮಾತಿಗೆ ಚಾಮುಂಡೇಶ್ವರಿ ಕ್ಷೇತ್ರದ ಮನ್ನಣೆ ಕೊಟ್ಟರೂ ರಾಜಕೀಯ ವಿದ್ಯಮಾನಗಳು 36 ಸಾವಿರ ಮತಗಳ ಅಂತರದಿಂದ ಸೋಲುವಂತೆ ಮಾಡಿದವು. ಆದರೆ ಈ ಬಾರಿ ವರುಣ ಕ್ಷೇತ್ರದಲ್ಲಿ ಕಾಣದ ಕೈಗಳು ಕೆಲಸ ಮಾಡುವ ಸಾಧ್ಯತೆಗಳು ಕ್ಷೀಣ.
ಬಿಜೆಪಿ, ಜೆಡಿಎಸ್ ನಿರುತ್ಸಾಹ
ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ರಣೋತ್ಸಾಹದಲ್ಲಿದೆ. ಸಿದ್ದರಾಮಯ್ಯ ಅವರ ಹೆಸರು ಘೋಷಣೆಯಾದ ಬಳಿಕವಂತೂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಚುನಾವಣೆಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ. ಸೋಮವಾರ ಕಾರ್ಯಕರ್ತರೊಂದಿಗೆ ಉತ್ತನಹಳ್ಳಿ, ಗುಡುಮಾದನಹಳ್ಳಿ, ಮರಸೆ, ಮಾಕನಹುಂಡಿ, ಕೂಡನಹಳ್ಳಿ, ಕೋಚನಹಳ್ಳಿ, ಬಸಳ್ಳಿಹುಂಡಿ, ಸೋಮೇಶ್ವರಪುರ, ಕುಂಬರಹಳ್ಳಿ, ರಾಯನಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆ ಮತಯಾಚನೆ ಮಾಡಿದರು.
ಆದರೆ, ಪ್ರತಿಸ್ಪರ್ಧಿಯಾದ ಬಿಜೆಪಿಯಲ್ಲಿ ಅಷ್ಟೇನೂ ಉತ್ಸಾಹ ಕಾಣುತ್ತಿಲ್ಲ. ಇದಕ್ಕೆ ಅಭ್ಯರ್ಥಿ ಯಾರೆಂಬುದು ಗೊತ್ತಾಗದೇ ಇರುವುದು ಕಾರಣ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನಿರೀಕ್ಷೆಯಲ್ಲಿದ್ದರು. ಆದರೆ ಖುದ್ದು ಯಡಿಯೂರಪ್ಪ ಅವರೇ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯವಾಗಿ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಪ್ರಬಲ ಆಕಾಂಕ್ಷಿ. ಅವರೊಂದಿಗೆ ಪರಾಜಿತ ಅಭ್ಯರ್ಥಿ ಕಾ.ಪು.ಸಿದ್ದಲಿಂಗಸ್ವಾಮಿ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಶರತ್ ಪುಟ್ಟಬುದ್ದಿ, ಪ್ರತಾಪ್ ದೇವನೂರು ಸೇರಿದಂತೆ ಹಲವರು ಟಿಕೆಟ್ ಕೇಳುತ್ತಿದ್ದಾರೆ.
ಜೆಡಿಎಸ್ ಈಗಾಗಲೇ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಅಭಿಷೇಕ್ ಅವರಿಗೆ ಟಿಕೆಟ್ ಘೋಷಿಸಿದೆ. ನೆಲೆ ಇಲ್ಲದ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ ಎಂಬುದು ಅಭ್ಯರ್ಥಿಗೂ ಗೊತ್ತಿದೆ, ಕಾರ್ಯಕರ್ತರಿಗೂ ಗೊತ್ತಿದೆ.
ನಾವು ಭಾವನಾತ್ಮಕ ವಿಚಾರಗಳ ಮೇಲೆ ಮತ ಕೇಳುತ್ತಿಲ್ಲ. ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ ಎಂಬುದು ವಾಸ್ತವ. ಅದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ ಅಷ್ಟೆ ಎನ್ನುವುದು ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮಾತು.
ಇದನ್ನೂ ಓದಿ : Karnataka Elections : ವರುಣಕ್ಕೆ ಹೋಗಬೇಕಿದ್ದ ವಿಜಯೇಂದ್ರನನ್ನು ಇಲ್ಲಿಗೆ ಕರೆತಂದೆ; ಶಿಕಾರಿಪುರದಲ್ಲಿ ಬಿಎಸ್‌ವೈ