Site icon Vistara News

Karnataka Elections 2023 : ಇದು ಕೊನೆಯ ಚುನಾವಣೆ; ಮಗ ಯತೀಂದ್ರ, ಮೊಮ್ಮಗ ಧವನ್‌ ಉತ್ತರಾಧಿಕಾರಿಗಳು ಎಂದ ಸಿದ್ದರಾಮಯ್ಯ

siddaramaiah

#image_title

ಮೈಸೂರು: ʻʻಮೈಸೂರು: ಇದು ನನ್ನ ಕೊನೆಯ ಚುನಾವಣೆ. ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಮುಂದೆ ಮಗ ಡಾ. ಯತೀಂದ್ರ ಇದ್ದಾನೆ, ಮೊಮ್ಮಗ ಧವನ್ ಇದ್ದಾನೆʼʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ವರುಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ಅವರು ಅದಕ್ಕಿಂತ ಮೊದಲು ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು.

ನಂಜನಗೂಡಿನಲ್ಲಿ ನಡೆದ ಸಮಾವೇಶದ ವೇದಿಕೆಗೆ ಬಂದ ಸಿದ್ದರಾಮಯ್ಯ ಅವರು ಮೊಮ್ಮಗ ಧವನ್ ರಾಕೇಶ್ ಜತೆ ಜನರತ್ತ ಕೈಬೀಸಿದರು. ಮೊಮ್ಮಗನ ಹೆಗಲ ಮೇಲೆ ಕೈ ಹಾಕಿ ಪೋಸ್ ನೀಡಿದರು. ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನ್ನ ಕೊನೆಯ ಚುನಾವಣೆ, ಮುಂದೆ ಡಾ. ಯತೀಂದ್ರ, ಮೊಮ್ಮಗ ಧವನ್‌ ಅವರು ಇರುತ್ತಾರೆ ಎಂದು ತಮ್ಮ ಉತ್ತರಾಧಿಕಾರಿಗಳನ್ನು ಹೆಸರಿಸಿದರು. ಧವನ್‌ ಅವರು ರಾಕೇಶ್‌ ಸಿದ್ದರಾಮಯ್ಯ ಅವರ ಮಗನಾಗಿದ್ದು, ಮಂಗಳವಾರ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರ ಜತೆಗೆ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ನಿಮ್ಮ ಉತ್ಸವಕ್ಕೆ ಮೂಕನಾಗಿದ್ದೇನೆ

ʻʻನಿಮ್ಮ ಉತ್ಸವ ನೋಡಿದರೆ ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ. ಇದು ನನ್ನ ಕೊನೆಯ ಚುನಾವಣೆ. ನಿಮ್ಮೆಲ್ಲರ ಆಶೀರ್ವಾದ ಬಯಸಿ ಸ್ಪರ್ಧೆ ಮಾಡುತ್ತಿದ್ದೇನೆʼʼ ಎಂದರು. ಈ ಬಾರಿ ಒಂದು ಲಕ್ಷ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ʻʻಬಿಜೆಪಿಯವರು ವರುಣ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರಿಗೆ ಅವಕಾಶ ನೀಡಿಲ್ಲ. ಬೆಂಗಳೂರಿನಿಂದ ಸೋಮಣ್ಣ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ- ಜೆಡಿಎಸ್‌ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಜೆಡಿಎಸ್‌ನವರು ಡಾ.ಭಾರತಿ ಶಂಕರ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಸೋಲಿಸಿ ದೊಡ್ಡ ಅಂತರದಲ್ಲಿ ನೀವು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ಇದೆʼʼ ಎಂದರು.

ನಾಮಪತ್ರ ಸಲ್ಲಿಕೆ ಮುನ್ನ ಸಿದ್ದರಾಮಯ್ಯ ಚಾಮುಂಡೇಶ್ವರಿ ದರ್ಶನ ಮಾಡಿದರು.

ಯಾವ ಕುತಂತ್ರಕ್ಕೂ ವರುಣದ ಜನ ಸೊಪ್ಪು ಹಾಕಲ್ಲ

ʻʻಬಿಜೆಪಿಯವರು ಕುತಂತ್ರ ಮಾಡುವುದರಲ್ಲಿ ನಿಸ್ಸೀಮರು. ಬಿಜೆಪಿ, ಜೆಡಿಎಸ್‌ನವರು ನನ್ನನ್ನು ಸೋಲಿಸಲೇಬೇಕು ಅಂತ ಹಣ ಹೊಳೆ ಹರಿಸಬಹುದು. ಎಷ್ಟೇ ಕೋಟಿ ಖರ್ಚು ಮಾಡಲಿ, ಎಷ್ಟೇ ಕುತಂತ್ರ, ಹುನ್ನಾರ ಮಾಡಲಿ. ವರುಣ ಕ್ಷೇತ್ರದ ಜನ ಇದ್ಯಾವುದಕ್ಕೂ ಸೊಪ್ಪು ಹಾಕಲ್ಲ. ನನಗೆ ಆಶೀರ್ವಾದ ಮಾಡೇ ಮಾಡುತ್ತಾರೆʼʼ ಎಂದು ಭರವಸೆ ವ್ಯಕ್ತಪಡಿಸಿದರು.

ʻʻಇಡೀ ರಾಜ್ಯದ ಜನ ಸಿದ್ದರಾಮಯ್ಯ ಅವರಿಗೆ ಪ್ರೀತಿ ತೋರಿಸುತ್ತಿದ್ದಾರೆ ಅಂತ ಬಿಜೆಪಿಯವರಿಗೆ ಭಯ ಕಾಡಿದೆ. ಆದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಬೇಕು ಅಂತ ತೀರ್ಮಾನಿಸಿದ್ದಾರೆ. ವರುಣ ನಾನು ಹುಟ್ಟಿದ ಹೋಬಳಿ. ನಮ್ಮೂರು ಸಿದ್ದರಾಮನಹುಂಡಿ ಇಲ್ಲೇ ಇದೆʼʼ ಎಂದು ಪ್ರಾದೇಶಿಕ ಸಂಗತಿಗಳನ್ನು ವಿವರಿಸಿದರು.

ʻʻರಾಜ್ಯದಲ್ಲಿ ಶೇ.40ರಷ್ಟು ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಬಿಜೆಪಿಯನ್ನು ಸೋಲಿಸಲೇಬೇಕು. ಜೆಡಿಎಸ್‌ನವರಿಗೆ ಅತಂತ್ರ ಸರ್ಕಾರ ಬರಬೇಕು ಎಂದಿದೆ. ಆದರೆ ಅದು ನಡೆಯೋದಿಲ್ಲ. ನನಗೆ ಸ್ಪಷ್ಟ ಮಾಹಿತಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸೂರ್ಯೋದಯದಷ್ಟೇ ಸತ್ಯʼʼ ಎಂದು ಹೇಳಿದರು.

ಸಿದ್ದರಾಮಯ್ಯಗೆ ಕೆ.ಎಚ್‌ ಮುನಿಯಪ್ಪ ಕೂಡಾ ಸಾಥ್‌

ನಾಮಪತ್ರ ಸಲ್ಲಿಸುವ ವೇಳೆ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಸಾಥ್ ನೀಡಿದರು. ನಂಜನಗೂಡು ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಸೀತಾರಾಂ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ನಂಜನಗೂಡು ಅಭ್ಯರ್ಥಿ ದರ್ಶನ್ ಧ್ರುವನಾರಾಯಣ, ತಿ.ನರಸೀಪುರ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ, ಚಾಮುಂಡೇಶ್ವರಿ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಗುಂಡ್ಲುಪೇಟೆ ಅಭ್ಯರ್ಥಿ ಗಣೇಶ್ ಮಹದೇವ ಪ್ರಸಾದ್ ಇದ್ದರು.

ಇದನ್ನೂ ಓದಿ : Karnataka Election 2023: ನಾನು, ಡಿಕೆಶಿ ಸಿಎಂ ಆಕಾಂಕ್ಷಿಗಳು; ಪೈಪೋಟಿಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

Exit mobile version