Site icon Vistara News

Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!

siddaramaiah

#image_title

ಬೆಂಗಳೂರು: ʻʻಕೋಲಾರ ಸುರಕ್ಷಿತ ಅಲ್ಲ ಎಂಬ ವರದಿಗಳಿವೆ. ಹೀಗಾಗಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿʼʼ ಎಂಬ ಹೈಕಮಾಂಡ್‌ ಸಂದೇಶದ ಬಳಿಕ ಅಡಕತ್ತರಿಯಲ್ಲಿ ಸಿಲುಕಿರುವ ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಅಭಿಮಾನಿಗಳನ್ನು ಸಮಾಧಾನ ಮಾಡಲು ʻಫ್ಯಾಮಿಲಿ ಅಸ್ತ್ರʼ ಪ್ರಯೋಗ ಮಾಡಿದ್ದಾರೆ. ನಾನು ಹೆಂಡತಿ ಮತ್ತು ಮಗನ ಜತೆ ಚರ್ಚೆ ಮಾಡಿ ಗುರುವಾರ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ (Karnataka Elections) ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ತಿಂಗಳ ಹಿಂದೆಯೇ ಕೋಲಾರದಿಂದ ಸ್ಪರ್ಧಿಸುವ ತೀರ್ಮಾನವನ್ನು ಪ್ರಕಟಿಸಿದ್ದರು. ಸಾಕಷ್ಟು ಓಡಾಟವನ್ನು ನಡೆಸಿದ್ದರು. ಆದರೆ, ಕೋಲಾರದ ಕೆ.ಎಚ್‌. ಮುನಿಯಪ್ಪ ಮತ್ತು ರಮೇಶ್‌ ಕುಮಾರ್‌ ಬಣಗಳ ನಡುವೆ ಕೂಡಿಬರುವ ಸಾಧ್ಯತೆಗಳಿಲ್ಲ. ಇದು ಸಿದ್ದರಾಮಯ್ಯ ಅವರ ಸೋಲಿಗೂ ಕಾರಣವಾಗಬಹುದು ಎಂಬ ಆತಂಕವನ್ನು ಹೈಕಮಾಂಡ್‌ ವ್ಯಕ್ತಪಡಿಸಿತ್ತು. ಹೀಗಾಗಿ ಬೇರೆ ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ಸೂಚಿಸಿತ್ತು.

ಇದಾದ ಬಳಿಕ ಸಿದ್ದರಾಮಯ್ಯ ಅವರು ಗೊಂದಲಕ್ಕೆ ಬಿದ್ದಿದ್ದರು. ಇದರ ನಡುವೆ ಕೋಲಾರದ ನಾಯಕರು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂದು ಹಠ ಹಿಡಿದಿದ್ದರು. ಮಾತ್ರವಲ್ಲ, ಸಾವಿರಾರು ಸಂಖ್ಯೆಯಲ್ಲಿ ಕೋಲಾರದ ಕಾಂಗ್ರೆಸ್‌ ಮುಖಂಡರು ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದರು.

ಮಂಗಳವಾರ ಭಾರಿ ಸಂಖ್ಯೆಯಲ್ಲಿ ಬಂದು ಮುತ್ತಿಗೆ ಹಾಕಿದ ಕೋಲಾರದ ಅಭಿಮಾನಿಗಳು ʻಬರಲೇಬೇಕು ಬರಲೇಬೇಕುʼʼ ಎಂದು ಘೋಷಣೆ ಕೂಗಿದರು. ʻಕೊಟ್ಟ ಮಾತು ತಪ್ಪಬೇಡಿ ಸಿದ್ದರಾಮಯ್ಯ. ಕೋಲಾರದಿಂದ ಸ್ಪರ್ಧೆ ಮಾಡಿ ಚಿನ್ನದ ನಾಡು ಉಳಿಸಿʼ ಎಂಬ ಪ್ಲೇ ಕಾರ್ಡ್ ಪ್ರದರ್ಶನ ಮಾಡಿದರು.

ಇದಕ್ಕಿಂತ ಮೊದಲು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸೋಮವಾರ ರಾತ್ರಿ ಸುಮಾರು ಎರಡು ಗಂಟೆ ಕಾಲ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಜತೆಗೆ ವಿ.ಆರ್‌. ಸುದರ್ಶನ್‌ ಕೂಡಾ ಮಾತುಕತೆ ನಡೆಸಿದ್ದರು.

ಕಾರ್ಯಕರ್ತರ ಮುಂದೆ ಸಿದ್ದರಾಮಯ್ಯ ಸಮಾಧಾನದ ಮಾತು

ತಮ್ಮ ಮನೆಗೆ ಮುತ್ತಿಗೆ ಹಾಕಿದ ಕೋಲಾರದ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಸಮಾಧಾನ ಮಾಡಲು ಸಿದ್ದರಾಮಯ್ಯ ಹರಸಾಹಸ ಮಾಡಬೇಕಾಯಿತು. ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಅಂತಿಮ ತೀರ್ಮಾನ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಹೈಕಮಾಂಡ್‌ ತನಗೆ ಹೇಳಿದ ಮಾತು, ತನಗಿರುವ ಗೊಂದಲ, ಅದನ್ನು ಪರಿಹರಿಸಬಹುದಾದ ಸಾಧ್ಯತೆಗಳ ಬಗ್ಗೆ ಅವರು ವಿವರಣೆ ನೀಡಿದರು.

ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ

ʻʻಹೈಕಮಾಂಡ್ ನವರು 1% ರಷ್ಟು ಕೂಡಾ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ. ಕೋಲಾರದಲ್ಲಿ ನಿಂತುಕೊಳ್ಳಿ ಅಥಾವ ನಿಲ್ಲಬಾರದು ಎಂದು ಹೈಕಮಾಂಡ್ ಹೇಳಿಲ್ಲ. ಸುಮ್ಮನೆ ಅಪಪ್ರಚಾರ ಆಗುತ್ತಿದೆ. ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ನಿಮ್ಮ ತೀರ್ಮಾನಕ್ಕೇ ಬಿಡುತ್ತೇವೆ. ಆದರೆ ನೀವು 1% ರಷ್ಟು ಕೂಡಾ ರಿಸ್ಕ್ ತೆಗೆದುಕೊಳ್ಬೇಡಿ ಎಂದು ಹೈಕಮಾಂಡ್ ಹೇಳಿದೆʼʼ ಎಂದು ಸಿದ್ದರಾಮಯ್ಯ ವಿವರಿಸಿದರು.

ʻʻನಿಮ್ಮನ್ನು ಒಂದೇ ಕ್ಷೇತ್ರದಲ್ಲಿ ಕಟ್ಟಿಹಾಕುವ ಪ್ರಯತ್ನ ಮಾಡ್ತಾ ಇದ್ದಾರೆ. ಆದರೆ, ನೀವು ಚುನಾವಣಾ ಪ್ರವಾಸಕ್ಕೆ ರಾಜ್ಯಾದ್ಯಂತ ಓಡಾಡಬೇಕು ಎಂದು ಹೈಕಮಾಂಡ್‌ ಹೇಳಿದೆ. ಈ ವಿಚಾರವನ್ನು ನಾನು ಪರಿಗಣಿಸಬೇಕಾಗಿದೆʼʼ ಎಂದರು ಸಿದ್ದರಾಮಯ್ಯ.

ʻʻಸ್ನೇಹಿತರು ಹೇಳಿದ ಮೇಲೆ ನಾನು ಕೋಲಾರದಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆ‌. ಕೋಲಾರಕ್ಕೂ ಬಂದೆ. ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿದ್ದೆ. ನಾನು ಮೆಂಟಲಿ ರೆಡಿಯಾಗಿದ್ದೆ, ಆದರೆ, ಈಗ ಈ ರೀತಿಯ ಬೆಳವಣಿಗೆ ಆಗಿದೆʼʼ ಎಂದರು.

ಹೆಂಡತಿ, ಮಗನ ಜತೆ ಚರ್ಚಿಸಿ ಹೇಳುತ್ತೇನೆ

ʻʻನಾನು ಸೋಲುತ್ತೇನೆ ಎಂಬ ಭಯ ನನಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇರುತ್ತದೆ. ಅದಕ್ಕೆ ನಾನು ಭಯಪಟ್ಟವನೂ ಅಲ್ಲ. ಜನ ಆಶೀರ್ವಾದ ಮಾಡಿದರೆ ಯಾವನಿಗೂ ಸೋಲಿಸಲು ಆಗುವುದಿಲ್ಲ. ಮತಗಳೇನೂ ಅವರ ಜೇಬಿನಲ್ಲಿ ಇರುವುದಿಲ್ಲ. ಹೀಗಾಗಿ ವಿಪಕ್ಷಗಳ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಅಷ್ಟಕ್ಕೂ ನಾನೂ ಅನೇಕ ಚುನಾವಣೆಗಳಲ್ಲಿ ಸೋಲು ಕಂಡಿದ್ದೇನೆ, ಗೆಲುವೂ ಕಂಡಿದ್ದೇನೆʼʼ ಎಂದು ಹೇಳಿದ ಸಿದ್ದರಾಮಯ್ಯ, ಇದೆಲ್ಲದರ ಜತೆಗೆ ನಾನು ಕುಟುಂಬದವರ ಜೊತೆಗೂ ಮಾತಾಡಬೇಕಾಗುತ್ತದೆ ಎಂದರು.

ʻʻನಮ್ಮ ಹುಡುಗ ಇಲ್ಲಿ ಇಲ್ಲ. ನಾನೀಗ ಮೈಸೂರಿಗೆ ಹೋಗ್ತಾ ಇದೇನೆ. ರಾತ್ರಿ ನನ್ನ ಪತ್ನಿ ಹಾಗೂ ಪುತ್ರನ ಜೊತೆ ಚರ್ಚೆ ಮಾಡಿ, ಸೋಮವಾರ ತಿಳಿಸುತ್ತೇನೆ ಎಂದು ರಮೇಶ ಕುಮಾರ್‌ಗೆ ಹೇಳಿದ್ದೇನೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ Karnataka Election: ಸಿದ್ದರಾಮಯ್ಯ ಸ್ಪರ್ಧೆ ಗೊಂದಲ; ಶ್ರೀನಿವಾಸಗೌಡ ಬೇಸರ, ವರ್ತೂರು ಪಂಥಾಹ್ವಾನ; ಡೋಂಟ್‌ಕೇರ್‌ ಅಂದ್ರು ಶ್ರೀನಾಥ್

Exit mobile version