ಧಾರವಾಡ: ಪಂಚಮಸಾಲಿ ಸಮುದಾಯದ ಪ್ರಮುಖ ಮುಖಂಡರಾದ ಮಾಜಿ ಶಾಸಕ ವಿನಯ ಕುಲಕರ್ಣಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Elections 2023) ಅವರ ವಿರುದ್ಧ ಕಣಕ್ಕಿಳಿಸಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿರುವ ಕಾಂಗ್ರೆಸ್‌ಗೆ ಅವರ ಪತ್ನಿ ತಿರುಗೇಟು ನೀಡಿದ್ದಾರೆ.
ಯಾವ ಕಾರಣಕ್ಕೂ ವಿನಯ ಕುಲಕರ್ಣಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಅವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ ಎಂದು ಪತ್ನಿ ಶಿವಲೀಲಾ ಕುಲಕರ್ಣಿ ಸ್ಪಷ್ಟಪಡಿಸಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆಯ ವದಂತಿಗಳ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟೀಕರಣ ನೀಡಿದ ಶಿವಲೀಲಾ ಕುಲಕರ್ಣಿ ಅವರು, ʻʻಹೈಮಾಂಡ್ ಹೇಳಿಲ್ಲ. ವಿನಯ ಕುಲಕರ್ಣಿ ಅವರು ಹೇಳಿಲ್ಲ. ಎಲ್ಲವನ್ನೂ ಮಾಧ್ಯಮಗಳೇ ಸೃಷ್ಟಿ ಮಾಡುತ್ತಿವೆ. ನಮ್ಮ ಸಾಹೇಬರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಬರ್ತಾರೆ. ಅವರಿಗೆ ಟಿಕೆಟ್ ಆಗುತ್ತದೆ. ಅವರೇ ಧಾರವಾಡ ಗ್ರಾಮೀಣ ಅಭ್ಯರ್ಥಿ ಆಗುತ್ತಾರೆʼʼ ಎಂದು ಸ್ಪಷ್ಟಪಡಿಸಿದರು.
ʻʻಇನ್ನೂ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಿಲ್ಲ. ಪಟ್ಟಿ ಬಿಡುಗಡೆಗೂ ಮೊದಲೇ ಇಂತಹ ಊಹಾಪೋಹ ಇರುವಂತಹುದೇʼʼ ಎಂದ ಅವರು, ಗೊಂದಲವನ್ನು ಮಾಧ್ಯಮಗಳೇ ಸೃಷ್ಟಿ ಮಾಡುತ್ತಿವೆ ಎಂದೂ ದೂರಿದರು.
ಹೆಸರು ಕೇಳಿಬರುತ್ತಿರುವುದು ಸುಳ್ಳಲ್ಲ
ಶಿವಲೀಲಾ ಕುಲಕರ್ಣಿಯವರು ಹೇಳಿದರೂ ಶಿಗ್ಗಾಂವಿ ಕ್ಷೇತ್ರಕ್ಕೆ ವಿನಯ ಕುಲಕರ್ಣಿ ಹೆಸರು ಇನ್ನೂ ಕೇಳಿಬರುತ್ತಿರುವುದು ಸುಳ್ಳಲ್ಲ. ಆರಂಭಿಕ ಹಂತದಲ್ಲಿ ಇದುವರೆಗೆ ನಿರಂತರವಾಗಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದ ಅಜ್ಜಂ ಪೀರ್ ಖಾದ್ರಿ ಅವರ ಬದಲಿಗೆ ಪ್ರಬಲ ಪಂಚಮಸಾಲಿ ಲಿಂಗಾಯತ ಮುಖಂಡನನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು. ಒಂದು ಹಂತದಲ್ಲಿ ಈ ವಾದವನ್ನು ಒಪ್ಪದ ಖಾದ್ರಿ ಅವರು ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಹಠ ಹಿಡಿದಿದ್ದರು. ಅದರೆ, ಯಾವಾಗ ಧಾರವಾಡದ ಮಾಜಿ ಶಾಸಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿಯಿಂದ ಕಣಕ್ಕಿಳಿಸಲು ನಿರ್ಧರಿಸಿದಾಗ ಖಾದ್ರಿ ಅವರು ಬೆಂಬಲ ಘೋಷಿಸಿದರು.
ಈ ನಡುವೆ, ವಿನಯ ಕುಲಕರ್ಣಿ ಅವರು ತಾನು ಧಾರವಾಡದ ಟಿಕೆಟ್ ಆಕಾಂಕ್ಷಿಯಾಗಿದ್ದು, ಶಿಗ್ಗಾಂವಿ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ ಎಂದು ಹೇಳಿದ್ದರು. ಆಗ ಖಾದ್ರಿ ಅವರು ವಿನಯ ಕುಲಕರ್ಣಿ ಹೊರತುಪಡಿಸಿ ಬೇರೆ ಯಾರೇ ಬಂದರೂ ತಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದರು.
ಇದೆಲ್ಲದರ ಮಧ್ಯೆಯೇ ಮೂರು ಬಾರಿ ಶಾಸಕರಾಗಿದ್ದ, ಒಮ್ಮೆ ಧಾರವಾಡ ಕ್ಷೇತ್ರದ ಸಂಸದರೂ ಆಗಿದ್ದ, ಸಿಎಂ ಬೊಮ್ಮಾಯಿ ಅವರ ಬಲಗೈ ಬಂಟ ಎಂದೇ ಹೇಳಲಾಗುತ್ತಿದ್ದ, ಮಂಜುನಾಥ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು ಅವರು ಕಾಂಗ್ರೆಸ್ ಪಾಳಯ ಸೇರಿದ್ದಾರೆ. ಒಂದು ಹಂತದಲ್ಲಿ ಮಂಜುನಾಥ ಕುನ್ನೂರು ಅಥವಾ ಪುತ್ರನಿಗೆ ಶಿಗ್ಗಾಂವಿ ಟಿಕೆಟ್ ಸಿಗಬಹುದು ಎಂಬ ಚರ್ಚೆ ಇತ್ತು.
ಆದರೆ, ಈ ಹಂತದಲ್ಲಿ ವಿನಯ ಕುಲಕರ್ಣಿ ಮತ್ತು ಫುಲ್ ಆಕ್ಟಿವ್ ಆಗಿದ್ದಾರೆ. ಅವರು ಸೋಮವಾರ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದು, ಮಠಕ್ಕೆ ಭೇಟಿ, ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿದ್ದರು. ಕ್ಷೇತ್ರದಲ್ಲಿ ಒಂದೇ ದಿನ ನಾಲ್ಕು ಮದುವೆಗಳಲ್ಲಿ ಭಾಗವಹಿಸಿದ್ದ ಕುಲಕರ್ಣಿ ಅವರು, ಸಂಜೆ ವೇಳೆ ಮಾಜಿ ಶಾಸಕ ಅಜ್ಜಂ ಪೀರ ಖಾದ್ರಿ ಜೊತೆ ಎರಡು ಗಂಟೆಗಳ ಕಾಲ ಗೌಪ್ಯ ಸಭೆ ಮಾಡಿದ್ದರು ಎಂದು ಹೇಳಲಾಗಿದೆ.
ಈಗ ವಿನಯ ಕುಲಕರ್ಣಿ ಪತ್ನಿ ಯಾವ ಕಾರಣಕ್ಕೂ ಧಾರವಾಡ ಬಿಟ್ಟು ಹೋಗುವುದಿಲ್ಲ ಎನ್ನುತ್ತಿದ್ದಾರೆ. ಎಲ್ಲವೂ ಕಾಂಗ್ರೆಸ್ ಟಿಕೆಟ್ ಪಟ್ಟಿ ಬಿಡುಗಡೆಯ ದಿನ ಸ್ಪಷ್ಟವಾಗಲಿದೆ.