Site icon Vistara News

Karnataka Elections 2023 : ಧಾರವಾಡ ದಕ್ಷಿಣದಲ್ಲಿ ವಿನಯ ಕುಲಕರ್ಣಿ ಪರ ಪತ್ನಿ ನಾಮಪತ್ರ, ನಾನೇ ಮತ ಕೇಳ್ತೇನೆ ಎಂದ ಶಿವಲೀಲಾ

Vinaya Kulakarni Nomination

#image_title

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ (Karnataka Elections 2023) ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ವಿನಯ‌ ಕುಲಕರ್ಣಿ ಪರವಾಗಿ ಅವರ ಪತ್ನಿ ಶಿವಲೀಲಾ ನಾಮಪತ್ರ ಸಲ್ಲಿಸಿದ್ದಾರೆ. ಒಂದೊಮ್ಮೆ ವಿನಯ ಕುಲಕರ್ಣಿ ಅವರು ಬಾರದೆ ಇದ್ದರೂ ತಾನೇ ಮುಂದೆ ನಿಂತು ಜನರ ಮತ ಕೇಳುವುದಾಗಿ ಅವರು ಹೇಳಿದ್ದಾರೆ.

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿ ಅವರು ಧಾರವಾಡ ಜಿಲ್ಲೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ವಜಾಗೊಳಿಸಿದೆ. ಇದೀಗ ವಿನಯ ಕುಲಕರ್ಣಿ ಪರ ವಕೀಲರು ಚುನಾವಣೆಗಾಗಿ 30 ದಿನಗಳ ಮಟ್ಟಿಗಾದರೂ ಕ್ಷೇತ್ರಕ್ಕೆ ಹೋಗಲು ಅವಕಾಶ ಕೋರಿ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಶುಕ್ರವಾರ ನಡೆಯಲಿದೆ.

ಧಾರವಾಡದಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶಿವಲೀಲಾ ಅವರು, ವಿನಯ ಕುಲಕರ್ಣಿ ಅನುಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಜನರ ಬೆಂಬಲ ದೊಡ್ಡದಿದೆ ಅವರು ಗೆಲ್ಲುವುದು ಖಚಿತ ಎಂದರು.

ʻʻವಿನಯ ಕುಲಕರ್ಣಿ ಜಿಲ್ಲೆಗೆ ಬರ್ತಾರೆ ಎಂದು ಬಹಳ‌ ವಿಶ್ವಾಸ ಇತ್ತು. ಕಾನೂನು ಮೇಲೆ ಕೂಡಾ ಬಹಳ‌ ವಿಶ್ವಾಸ ಇತ್ತು, ಆದರೆ ಆರಂಭಿಕ ಹಿನ್ನಡೆಯಾಗಿದೆ. ನಾವು ಈಗಲೂ ಕಾನೂನು ಮೇಲೆ ಭರವಸೆ ಇಟ್ಟಿದ್ದೇವೆ. ಮತ್ತೆ ಮನವಿ ಮಾಡಿದ್ದೇನೆ. ಒಳ್ಳೆಯ ಫಲಿತಾಂಶ ಬರಬಹುದುʼʼ ಎಂದು ಶಿವಲೀಲಾ ಹೇಳಿದರು.

ʻʻಒಂದೊಮ್ಮೆ ವಿನಯ ಕುಲಕರ್ಣಿ ಅವರು ಜಿಲ್ಲೆಗೆ ಬರದೇ ಇದ್ದರೂ ಜನರು ನಮ್ಮ ಬೆಂಬಲಕ್ಕೆ ಇದ್ದಾರೆ. ನಮ್ಮ ಕ್ಷೇತ್ರದ ಜನರನ್ನ ಕರೆದುಕೊಂಡು ನಾನೇ ಮತಯಾಚನೆ ಮಾಡ್ತೇನೆ. ಪ್ರತಿ ಮನೆ ಮನೆಗೆ ಹೋಗಿ ಮತ‌‌ ಕೇಳುತ್ತೇನೆʼʼ ಎಂದರು.

ʻʻನಮ್ಮ‌ ಮನೆಯವರನ್ನು ಹತ್ತಿಕ್ಕಲು ಪ್ರಯತ್ನ ನಡೆದಿದೆ, 10 ವರ್ಷಗಳಿಂದ ಈ ಕೆಲಸ ನಡೆದಿದೆ. ಕ್ಷೇತ್ರದಲ್ಲಿ ಯಾವುದೇ ಸಣ್ಣ ಘಟನೆ ನಡೆದರೂ ಅದನ್ನು ವಿನಯ ಕುಲಕರ್ಣಿ ಹಣೆ ಪಟ್ಟಿಗೆ ಹಚ್ಚುವ‌ ಕೆಲಸ ನಡೆದಿದೆ. ಇದಕ್ಕೆಲ್ಲ ಉತ್ತರ ಮುಂದಿನ ದಿನಗಳಲ್ಲಿ ಜನ ಕೊಡ್ತಾರೆʼʼ ಎಂದರು ಶಿವಲೀಲಾ.

ʻʻನಾನು ಕಳೆದ 25 ವರ್ಷಗಳಿಂದ ರಾಜಕೀಯದಲ್ಲಿ ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದೇನೆ. ಇವತ್ತು ಅವರ ಜಾಗದಲ್ಲಿ ‌ನಿಂತು ಕೆಲಸ ಮಾಡುತ್ತಿದ್ದೇನೆ. ಜನರು ನನಗೆ ಧೈರ್ಯ ತುಂಬಿದ್ದಾರೆʼʼ ಎಂದು ಶಿವಲೀಲಾ ಹೇಳಿದರು.

ವಿನಯ ಕುಲಕರ್ಣಿ ಅವರು ಜಿಲ್ಲೆಯೊಳಗೆ ಪ್ರವೇಶ ಮಾಡದೆ ಇದ್ದರೂ ಅವರು ಧಾರವಾಡ ಗಡಿಯಲ್ಲಿ ಇದ್ದು ಜನರ ಜೊತೆ ಭೇಟಿ ಮಾಡುತ್ತಾರೆ. ನಾವು ಈ ಬಾರಿ 50 ಸಾವಿರ ಮತದಿಂದ ಗೆಲ್ತೇವೆ , ಒಂದೇ ಮತದಿಂದ ಗೆದ್ದರೂ ಗೆಲುವೇ ಎಂದು ಶಿವಲೀಲಾ ನುಡಿದರು.

ವಿನಯ್ ಕುಲಕರ್ಣಿ ಪರ ರ‍್ಯಾಲಿಯಲ್ಲಿ ಶೆಟ್ಟರ್ ಭಾಗಿ

ವಿನಯ್ ಕುಲಕರ್ಣಿ ಪರವಾಗಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್‌ ರ‍್ಯಾಲಿಯಲ್ಲಿ ಇತ್ತೀಚೆಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಭಾಗವಹಿಸಿದ್ದರು. ವಿನಯ ಕುಲಕರ್ಣಿ ಮತ್ತು ಧಾರವಾಡ ಪಶ್ಚಿಮದ ಕಾಂಗ್ರೆಸ್‌ ಅಭ್ಯರ್ಥಿ ದೀಪಕ್‌ ಚಿಂಚೋರೆ ಅವರ ಪರ ರ‍್ಯಾಲಿಯಲ್ಲೂ ಭಾಗವಹಿಸಿದ್ದರು.

ಇದನ್ನೂ ಓದಿ : Vinaya Kulkarni : 30 ದಿನ ಧಾರವಾಡದಲ್ಲಿರಲು ಬಿಡಿ, ಕೋರ್ಟ್‌ಗೆ ವಿನಯ ಕುಲಕರ್ಣಿ ಮನವಿ, ನಾಳೆ ತೀರ್ಮಾನ ಸಾಧ್ಯತೆ

Exit mobile version