ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಶಾಸಕ ಎಸ್.ಎ ರಾಮದಾಸ್ ಅವರು ಬಂಡಾಯದ ಬಾವುಟ ಹಾರಿಸುತ್ತಾರಾ? ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ? ಇದು ಸಂಜೆ ಐದು ಗಂಟೆಗೆ ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗಲಿದೆ.
ಆರು ಬಾರಿ ಕಣಕ್ಕಿಳಿದು ನಾಲ್ಕು ಬಾರಿ ಗೆದ್ದು ಶಾಸಕರಾದ ರಾಮದಾಸ್ ಅವರದು ಬಿಜೆಪಿಯಲ್ಲಿ ದೊಡ್ಡ ಹೆಸರು. ಆದರೆ, ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಿ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಅವರಿಗೆ ಅವಕಾಶ ನೀಡಲಾಗಿದೆ. ಇದು ರಾಮದಾಸ್ ಅವರನ್ನು ತೀವ್ರವಾಗಿ ಕೆರಳಿಸಿದೆ. ಅವರೀಗ ಪಕ್ಷದಲ್ಲಿ ಇರಬೇಕೇ, ಬೇಡವೇ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಪಕ್ಷೇತರವಾಗಿ ಸ್ಪರ್ಧೆ ಮಾಡಲು ರಾಮದಾಸ್ ಗೆ ಕಾರ್ಯಕರ್ತರ ಒತ್ತಾಯವಿದೆ. ಇದರ ಸಂಬಂಧ ಚರ್ಚೆ ನಡೆಸಲು ರಾಮದಾಸ್ ಅವರು ಸಂಜೆ ಐದು ಗಂಟೆಗೆ ಸಭೆಯನ್ನು ಕರೆದಿದ್ದಾರೆ. ಅಲ್ಲಿ ಮುಂದೇನು ಎಂಬ ಬಗ್ಗೆ ತೀರ್ಮಾನ ನಡೆಯಲಿದೆ. ಅದರ ನಡುವೆ ರಾಮದಾಸ್ ಅವರನ್ನು ಸಮಾಧಾನ ಮಾಡುವ ಪ್ರಯತ್ನಗಳು ಕೂಡಾ ನಡೆಯುವ ಸಾಧ್ಯತೆಗಳಿವೆ.
ರಾಮದಾಸ್ ಅವರಿಗೆ ಪಕ್ಷ ಮೋಸ ಮಾಡಿದೆ ಎಂಬ ಸಿಟ್ಟು ಎಷ್ಟರ ಮಟ್ಟಿಗೆ ಇದೆಯೆಂದರೆ ಸೋಮವಾರ ಸಂಜೆ ಟಿಕೆಟ್ ಘೋಷಣೆಯಾದ ಬಳಿಕ ಸಂಸದ ಪ್ರತಾಪ್ ಸಿಂಹ, ಅಭ್ಯರ್ಥಿ ಟಿ.ಎಸ್.ಶ್ರೀವತ್ಸ , ಕ್ಷೇತ್ರ ಉಸ್ತುವಾರಿ ರಾಜೀವ್ ಬಬ್ಬರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಅವರು ತಮ್ಮ ಮನೆಗೇ ಬಂದರೂ ಅವರನ್ನು ಭೇಟಿಯಾಗದೆ, ಮನೆಯ ಒಳಗೂ ಕರೆಯದೆ ಹಿಂದಕ್ಕೆ ಕಳುಹಿಸಿದ್ದಾರೆ. ಬಳಿಕ ದೂರವಾಣಿ ಕರೆ ಮಾಡಿದಾಗ ನಾಳೆ ಸಮಯ ನಿಗದಿ ಮಾಡಿ ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಮನೆಯಿಂದ ಹೊರ ಹಾಕಿದ್ದಾರೆ ಎಂದ ರಾಮದಾಸ್
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ರಾಮದಾಸ್ ಅವರು, 30 ವರ್ಷಗಳಿಂದ ತಾಯಿ ಮನೆಯಲ್ಲಿದ್ದೆ. ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ತಾಯಿ ಮನೆಯಲ್ಲಿ ಇರಬೇಕಾ ಬೇಡ್ವಾ ಅಂತ ನಾಳೆ ಸಂಜೆ ತಿಳಿಸುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. ಯಾರ ಜತೆಯೂ ಮಾತುಕತೆ ನಡೆಸಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇತ್ತ ಬಿಜೆಪಿಯಲ್ಲಿ ಎದ್ದಿರುವ ಈ ನೋವಿನ ಕ್ಷಣಗಳನ್ನು ಶಮನಗೊಳಿಸಲು ಹೆಣಗಾಡುತ್ತಿರುವ ಸಂಸದ ಪ್ರತಾಪ್ ಸಿಂಹ, ʻʻರಾಮದಾಸ್ ನಮ್ಮಣ್ಣ. ಶ್ರೀವತ್ಸ ಅವರ ಸಹೋದರ. ಅವರೇ ಮುಂದೆ ನಿಂತು ಶ್ರೀವತ್ಸ ಅವರನ್ನು ಗೆಲ್ಲಿಸುತ್ತಾರೆ.
ಈಗ ಕಾರ್ಯಕರ್ತರ ಜತೆ ಮಾತನಾಡುತ್ತಿದ್ದಾರೆ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಸಮಾಧಾನ ಮಾಡುತ್ತಿದ್ದಾರೆ. ರಾಮದಾಸ್ ಪಕ್ಷವನ್ನೇ ತಾಯಿ ಅಂದುಕೊಂಡಿದ್ದಾರೆ. ಎಂದಿಗೂ ತಾಯಿಯನ್ನು ತೊರೆಯುವುದಿಲ್ಲ ಎಂದೆಲ್ಲ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಕೂಡಾ ರಾಮದಾಸ್ ನನ್ನನ್ನು ವಿರೋಧ ಮಾಡುವುದಿಲ್ಲ. ರಾಮದಾಸ್ ಅವರೇ ಎರಡನೇ ಹೆಸರಾಗಿ ನನ್ನನ್ನು ಶಿಫಾರಸು ಮಾಡಿದ್ದಾರೆ. ನನ್ನ ಹೆಸರು ಶಿಫಾರಸು ಮಾಡಿರುವುದು ನನಗೆ ಗೊತ್ತಾಗಿದೆ.
ಯಾವುದೇ ಕಾರಣಕ್ಕೂ ನನ್ನ ವಿರುದ್ಧ ರಾಮದಾಸ್ ನಿಲ್ಲುವುದಿಲ್ಲ ಎನ್ನುತ್ತಿದ್ದಾರೆ.
ಅದರೆ, ರಾಮದಾಸ್ ಅವರ ತಲೆಯೊಳಗೆ ಏನಿದೆ ಎನ್ನುವುದು ಇನ್ನೂ ಸ್ಪಷ್ಟವಿಲ್ಲ.
ಈ ನಡುವೆ ಬಿಜೆಪಿ ರಾಮದಾಸ್ ಅವರಿಗೆ ಟಿಕೆಟ್ ನೀಡದಿರಲು ಏನು ಕಾರಣ ಎನ್ನುವ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಕೆಳಗಿನ ಅಂಶಗಳು ಟಿಕೆಟ್ ಸಿಗದಿರಲು ಕಾರಣ ಎನ್ನಲಾಗುತ್ತಿದೆ.
ಹಾಗಿದ್ದರೆ ರಾಮದಾಸ್ ಟಿಕೆಟ್ ಮಿಸ್ ಆಗಲು, ಶ್ರೀವತ್ಸಗೆ ಟಿಕೆಟ್ ಸಿಗಲು ಕಾರಣಗಳೇನು?
ರಾಮದಾಸ್‌ಗೆ ಟಿಕೆಟ್ ಮಿಸ್ ಆಗಲು ಕಾರಣ
-ಬರೋಬ್ಬರಿ ಆರು ಚುನಾವಣೆಯಲ್ಲಿ ಅವಕಾಶ ನೀಡಿರುವುದು.
-ಹಳೇ ಮೈಸೂರು ಭಾಗದ ಹಿರಿಯ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವರಾದರೂ ಕೆ.ಆರ್.ಕ್ಷೇತ್ರ ಬಿಟ್ಟು ಜಿಲ್ಲೆ, ಪ್ರಾದೇಶಿಕ ನಾಯಕತ್ವ ವಹಿಸಿಕೊಳ್ಳದೇ ಇರುವುದು.
-ವೈಯುಕ್ತಿಕ ಕಾರಣಕ್ಕಾಗಿ ಕಾರ್ಯಕರ್ತರೊಂದಿಗೆ ನಿಷ್ಠುರ ಕಟ್ಟಿಕೊಂಡಿರುವುದು.
– ಖಾಸಗಿ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೈಕಮಾಂಡ್ ಹಂತಕ್ಕೆ ಯಶಸ್ವಿಯಾಗಿ ತಲುಪಿಸಿದ ವಿರೋಧಿ ಪಡೆ.
-ಪ್ರಧಾನಿ ನರೇಂದ್ರ ಮೋದಿ ಕುಟುಂಬದ ಆತ್ಮೀಯತೆ ಕಾರಣಕ್ಕೆ ಇತರೆ ರಾಜ್ಯ, ರಾಷ್ಟ್ರದ ಹೈಕಮಾಂಡ್ ನಾಯಕರ ಕಡೆಗಣನೆ
ಟಿ.ಎಸ್.ಶ್ರೀವತ್ಸಗೆ ಟಿಕೆಟ್ ಸಿಗಲು ಕಾರಣ
-1988ರಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ
-ಇದುವರೆಗೂ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದಾರೆ, ಚುನಾವಣೆ ಎದುರಿಸಿಲ್ಲ.
-ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಪ್ತತೆ.
-ಕೃಷ್ಣರಾಜ ಕ್ಷೇತ್ರದಲ್ಲಿ ಇರೋದು ಪಕ್ಷದ ವೋಟು, ವ್ಯಕ್ತಿ ಗೌಣ ಎನ್ನುವ ಟ್ರೆಂಡ್
ಇದನ್ನೂ ಓದಿ : Karnataka Election: ಮನೆಗೆ ಬಂದ ಪ್ರತಾಪ್ ಸಿಂಹ, ಅಭ್ಯರ್ಥಿ ಶ್ರೀವತ್ಸ ಭೇಟಿಗೆ ಶಾಸಕ ರಾಮದಾಸ್ ನಕಾರ