ಬಾಗಲಕೋಟೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬಾದಾಮಿ ಜನರ ಮನಸು ಹೇಗಿದೆ ಎಂದು ಅರಿಯಲು ಹೊರಟಿದ್ದಾರೆ. ಕೋಲಾರದ ಸ್ಪರ್ಧೆಗೆ ಆತಂಕ ಎದುರಾಗಿದೆ, ವರುಣ ಕ್ಷೇತ್ರವನ್ನು ಬಿಟ್ಟುಕೊಡಲು ಮಗ ಯತೀಂದ್ರ ಅವರು ಒಪ್ಪಿದರೂ ಪತ್ನಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಹೀಗಾಗಿ ಬಾದಾಮಿ ಕಡೆಗೆ ಸಿದ್ದರಾಮಯ್ಯ ಚಿತ್ತ ಹರಿದಿದೆ ಎನ್ನಲಾಗಿದೆ. ಅವರು ಮಾರ್ಚ್ 24ರಂದು ಬಾದಾಮಿ ಟೂರ್ ಮಾಡಲಿದ್ದಾರೆ.
ಕೋಲಾರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಕೊಟ್ಟ ವರದಿ ಆತಂಕ ಮೂಡಿಸಿದೆ. ಕೋಲಾರ ಕಾಂಗ್ರೆಸ್‌ನೊಳಗಿನ ಆಂತರಿಕ ಭಿನ್ನಮತದಿಂದ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಬಹುದು, ಹೀಗಾಗಿ ಸುರಕ್ಷಿತ ಕ್ಷೇತ್ರ ನೋಡಿಕೊಳ್ಳುವುದು ಒಳ್ಳೆಯದು ಎಂದು ರಾಹುಲ್ ಗಾಂಧಿ ಅವರೇ ಸೂಚಿಸಿದ ಬಳಿಕ ಸಿದ್ದರಾಮಯ್ಯ ಮುಂದೇನು ಎಂದು ಯೋಚಿಸುತ್ತಿದ್ದಾರೆ. ಇತ್ತ ಕೋಲಾರದ ಅಭಿಮಾನಿಗಳು ಯಾವ ಕಾರಣಕ್ಕೂ ಬಿಟ್ಟುಹೋಗಬಾರದು ಎಂದು ಒತ್ತಡ ಹಾಕುತ್ತಿದ್ದಾರೆ.
ರಾಹುಲ್ ಗಾಂಧಿ ಅವರು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ವರುಣದಿಂದ ಸ್ಪರ್ಧಿಸಿದರೆ ಮಗ ಯತೀಂದ್ರ ಅವರ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬುದು ಸಿದ್ದರಾಮಯ್ಯ ಅವರ ಆತಂಕ. ಹೀಗಾಗಿ ಅವರು ಬಾದಾಮಿ ಬಗ್ಗೆ ಮರುಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕ್ಷೇತ್ರ ಬಿಟ್ಟುಕೊಡಲು ಯತೀಂದ್ರ ರೆಡಿ, ಆದರೆ, ಪತ್ನಿ ಆಕ್ಷೇಪ?
ಕೋಲಾರದಲ್ಲಿ ಗೆಲುವಿಗಾಗಿ ಕಷ್ಟಪಡಬೇಕಾದೀತು ಎಂಬ ವರದಿಯ ಹಿನ್ನೆಲೆಯಲ್ಲಿ ವರುಣ ಕ್ಷೇತ್ರವನ್ನು ಬಿಟ್ಟುಕೊಡಲು ಮಗ ಯತೀಂದ್ರ ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಹಾಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಮಗನ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬ ಆತಂಕವನ್ನು ಪತ್ನಿ ಪಾರ್ವತಿ ಅವರು ವ್ಯಕ್ತಪಡಿಸಿದ್ದಾರೆ ಎಂಬ ಮಾತಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ಹೆಂಡತಿ ಮತ್ತು ಮಗನ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮೊದಲೇ ಹೇಳಿದ್ದರು. ಹೀಗಾಗಿ ಕೋಲಾರ, ವರುಣ ಎರಡನ್ನೂ ಬಿಟ್ಟು ಬಾಗಲಕೋಟೆ ಪರಿಸ್ಥಿತಿ ಅವಲೋಕನಕ್ಕೆ ಹೊರಟಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್ 24ಕ್ಕೆ ಸಿದ್ದರಾಮಯ್ಯ ಬಾದಾಮಿ ಟೂರ್ ಫಿಕ್ಸ್
2018ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಯಾಸದ ಗೆಲುವು ಪಡೆದಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನೇ ಕಂಡಿದ್ದರು. ಬಾದಾಮಿ ದೂರ ಎಂಬ ಕಾರಣಕ್ಕೆ ಈ ಬಾರಿ ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರವನ್ನು ಆಯ್ಕೆ ಮಾಡುತ್ತೇನೆ ಎಂದು ಹಿಂದಿನಿಂದಲೂ ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ, ಬಾಗಲಕೋಟೆಯಲ್ಲಿ ಸೋಲುವ ಭೀತಿಯಿಂದ ಸಿದ್ದರಾಮಯ್ಯ ಓಡಿಹೋಗುತ್ತಿದ್ದಾರೆ ಎಂದು ಬಿಜೆಪಿ ಹೇಳಿತ್ತು.
ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ ಅಲ್ಲಿಂದ ಪದೇಪದೆ ಒತ್ತಡ ಬರುತ್ತಲೆ ಇತ್ತು. ಅಲ್ಲಿಂದ ಹಲವಾರು ನಾಯಕರು ಬಂದು ಮಾತುಕತೆ ನಡೆಸಿದ್ದರು. ಕೆಲವರು ಸಿದ್ದರಾಮಯ್ಯ ಬಂದು ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದಿದ್ದರು. ಈ ಎಲ್ಲ ಹೇಳಿಕೆಗಳ ನಿಜಾಂಶ ಏನು? ನಿಜಕ್ಕೂ ಬಾದಾಮಿಯಲ್ಲಿ ಗೆಲ್ಲುವ ಪರಿಸ್ಥಿತಿ ಇದೆಯಾ ಎನ್ನುವುದನ್ನು ಅಧ್ಯಯನ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ.
ಮಾ. 26ರಂದು ಫಿಕ್ಸ್ ಆಗಿದ್ದ ಟೂರ್ ಮರುನಿಗದಿ
ಸಿದ್ದರಾಮಯ್ಯ ಅವರು ನಾನಾ ಕಾಮಗಾರಿಗಳ ಉದ್ಘಾಟನೆಗಾಗಿ ಮಾರ್ಚ್ 26ಕ್ಕೆ ಟೂರ್ ಪ್ಲ್ಯಾನ್ ಹಾಕಿದ್ದರು. ಆದರೆ ಅದನ್ನೀಗ ಮಾ. 24ಕ್ಕೆ ಮರುನಿಗದಿ ಮಾಡಲಾಗಿದೆ. ಕಾಮಗಾರಿ ಉದ್ಘಾಟನೆಯೇ ನೆಪವಾಗಿ ಜನರ ನಾಡಿಮಿಡಿತ ಅರಿಯಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ.
ಅತ್ತ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಡವೂ ಹೆಚ್ಚಿದೆ. ʻʻಸಿದ್ದರಾಮಯ್ಯ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರು ಮರೆತಿಲ್ಲ. ಅವರು ಬಾದಾಮಿಯಿಂದ ಸ್ಪರ್ಧೆ ಮಾಡಿದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂಬ ಅಭಿಪ್ರಾಯವಿದೆ. ಯಾವುದೇ ಕಾರಣಕ್ಕೂ ಅದನ್ನ ಕಡೆಗಣಿಸಬಾರದುʼʼ ಎಂದು ಸಿದ್ದು ಆಪ್ತ ಹೊಳಬಸು ಶೆಟ್ಟರ ಜನರ ಪರವಾಗಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಇದೀಗ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರು ಎಲ್ಲವನ್ನೂ ಬಿಟ್ಟು ಬಾದಾಮಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೋ, ಎರಡನೇ ಕ್ಷೇತ್ರವಾಗಿ ಬಾದಾಮಿಯನ್ನು ನೋಡುತ್ತಾರೋ ಕಾದು ನೋಡಬೇಕು. ಒಂದೊಮ್ಮೆ ಬಾದಾಮಿಯೊಂದನ್ನೇ ಆಯ್ಕೆ ಮಾಡಿದರೆ ಅವರು ಕ್ಷೇತ್ರ ಬಿಟ್ಟು ಓಡಿಹೋದರು ಎಂಬ ಆಪಾದನೆಯೂ ತಪ್ಪುತ್ತದೆ.
ಇದನ್ನೂ ಓದಿ : HD Kumaraswamy: ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್‌ನಲ್ಲಿ ಟೀಂ ರೆಡಿ ಇದೆ: ಎಚ್.ಡಿ. ಕುಮಾರಸ್ವಾಮಿ