Site icon Vistara News

Hindu Temples: ದೇವಸ್ಥಾನ ಸಮಿತಿಗೆ ಅನ್ಯಧರ್ಮೀಯರ ನೇಮಕ; ಧಾರ್ಮಿಕ ದತ್ತಿ ಇಲಾಖೆ ಸ್ಪಷ್ಟನೆ

Karnataka Government clarified about Non Hindus in Hindu Temples Management

ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು (Hindu Temples) ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ (Karnataka Hindu religious and Charitable Endoment act 2024)ದಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ (Temple Management Committee) ಅನ್ಯ ಸಮುದಾಯದವರನ್ನು (Members from other community) ನೇಮಕ ಮಾಡಲು ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಧಾರ್ಮಿಕ ದತ್ತಿ ಇಲಾಖೆಯು(Hindu Religious Charitable Endowments Department), ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಸಂಯೋಜಿತ ಸಂಸ್ಥೆಗಳಲ್ಲಿ ಮಾತ್ರ ಅನ್ಯಧರ್ಮೀಯ ಜನರನ್ನು ವ್ಯವಸ್ಥಾಪಕ ಸಮಿತಿಗೆ ನೇಮಕ ಮಾಡಲು ಅವಕಾಶವಿರುತ್ತದೆ. 2001ರ ಕಾಯ್ದೆಯಂತೆಯೇ ಈ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಸಂಯೋಜಿತ ಸಂಸ್ಥೆಗಳು ಎರಡು ಇದ್ದು, ಇಲ್ಲಿ ಮಾತ್ರ ಇತರೆ ಧರ್ಮದವರ ನೇಮಕಕ್ಕೆ ಅವಾಶವಿದೆ. ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಬಾಬ ಬುಡನ್ ಸ್ವಾಮಿ ದರ್ಗಾ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭೂತಾರಾಯ ಚೌಡೇಶ್ವರಿ ಮತ್ತು ಸಾದತ್ ಅಲಿ ದರ್ಗಾಗಳು ಮಾತ್ರವೇ ಸಂಯೋಜಿತ ಸಂಸ್ಥೆಗಳಾಗಿವೆ. ಈ ಎರಡು ಸಂಸ್ಥೆಗಳಲ್ಲಿ ಮಾತ್ರ ಧಾರ್ಮಿಕ ದತ್ತಿ ವಿದೇಯಕ 2001 ರಲ್ಲಿ ಹಿಂದೂ ಮತ್ತು ಇತರೆ ಧರ್ಮದಿಂದಲೂ ವ್ಯವಸ್ಥಾಪಕ ಸಮಿತಿಗೆ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗ ತಂದಿರುವ ವಿಧೇಯಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆ ಸ್ಪಷ್ಟಣೆ ನೀಡಿದೆ.

ಸಂಯೋಜಿತ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಗಳಲ್ಲಿ ಮಾತ್ರ ಅನ್ಯಧರ್ಮಿಯರಿಗೆ ಅವಕಾಶ ನೀಡಲಾಗಿದೆ. ಇದರ ಬಗ್ಗೆ ಗೊಂದಲ ಮಾಡಿಕೊಳ್ಳುವುದಾಗಲಿ ಅಥವಾ ಅನ್ಯ ಅರ್ಥ ಕಲ್ಪಿಸುವುದು ಬೇಡ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರೋಪ ಏನು?

ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಸಮುದಾಯದವರನ್ನು ನೇಮಕ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಹೀಗಾಗಿ ವಿಧೇಯಕವನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆಗ್ರಹಿಸಿದೆ.

ಈ ಬಗ್ಗೆ ಮಹಾಸಂಘದ ರಾಜ್ಯ ಸಂಯೋಜಕರಾಗಿರುವ ಮೋಹನ ಗೌಡ (Mohan Gowda) ಅವರು ಹೇಳಿಕೆಯನ್ನು ನೀಡಿದ್ದಾರೆ. ಕರ್ನಾಟಕ ಸರಕಾರವು 16ನೇ ವಿಧಾನಸಭೆಯ 3ನೇ‌ ಅಧಿವೇಶನದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2024 ಕರ್ನಾಟಕ ರಾಜ್ಯ ಪತ್ರಿಕೆಯನ್ನು ಹೊರಡಿಸಿದ್ದು, ಇದರ 25ನೇ ಕಲಂನಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಸಮುದಾಯದವರನ್ನು ನೇಮಕ ಮಾಡುವ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ಹಿಂದಿನ ತಿದ್ದುಪಡಿಯಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಮುದಾಯದವರು ಇರುವಂತಿಲ್ಲ ಎಂಬ ನಿರ್ಣಯವಿತ್ತು, ಇದೀಗ ರಾಜ್ಯ ಸರಕಾರ ಇದನ್ನು ಬದಲಾವಣೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಮೋಹನ ಗೌಡ ಹೇಳಿದ್ದಾರೆ.

ಇದು ದೇವಸ್ಥಾನಗಳಲ್ಲಿ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಸೇರಿಸಿ ದೇವಸ್ಥಾನಗಳ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರವಾಗಿದೆ. ಹಿಂದೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅನ್ಯ ಸಮುದಾಯದವರನ್ನು ನೇಮಕ ಮಾಡುವ ರಾಜ್ಯ ಸರಕಾರವು ಹಿಂದೂಗಳನ್ನು ವಕ್ಫ್ ಬೋರ್ಡಗೆ ನೇಮಕ ಮಾಡುತ್ತದೆಯೇ ಎಂದು ಮೋಹನ ಗೌಡ ಅವರು ಪ್ರಶ್ನೆ ಮಾಡಿದ್ದಾರೆ.

ಸರಕಾರದ ಈ ನಡೆಯು ಹಿಂದೂ ವಿರೋಧಿ ಧೋರಣೆಯನ್ನು ಬಿಂಬಿಸುತ್ತದೆ. ಆದ್ದರಿಂದ ಕೂಡಲೇ ರಾಜ್ಯ ಸರಕಾರವು ಈ ತಿದ್ದುಪಡಿಯನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕರಾದ ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಹಿಂದೂ ದೇಗುಲಗಳ ಮೇಲೆ ದಾಳಿ: ಆಸ್ಟ್ರೇಲಿಯಾ ಪಿಎಂ ಭದ್ರತೆಯ ಭರವಸೆ ನೀಡಿದ್ದಾರೆ ಅಂದ್ರು ಪ್ರಧಾನಿ ಮೋದಿ

Exit mobile version