Site icon Vistara News

GPF Cap: ಸರ್ಕಾರಿ ನೌಕರರಿಗೆ ಬ್ಯಾಡ್‌ ನ್ಯೂಸ್;‌ ಜಿಪಿಎಫ್‌ಗೆ 5 ಲಕ್ಷ ರೂ. ಮಿತಿ ಹೇರಿದ ಕರ್ನಾಟಕ ಸರ್ಕಾರ!

GPF Cap

ಬೆಂಗಳೂರು: ಏಳನೇ ವೇತನ ಆಯೋಗದ (7th Pay Commission) ಜಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು (Karnataka Government) ತೀರ್ಮಾನ ಮಾಡಿದ ಬಳಿಕ ಶೇ.27.5ರಷ್ಟು ಸಂಬಳ ಹೆಚ್ಚಳದ ಸಂಭ್ರಮದಲ್ಲಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಕಹಿ ಸುದ್ದಿ ನೀಡಿದೆ. ಸರ್ಕಾರಿ ನೌಕರರು (Government Employees) ವಾರ್ಷಿಕವಾಗಿ ಸಾಮಾನ್ಯ ಭವಿಷ್ಯ ನಿಧಿಗೆ (GPF) ಜಮೆ ಮಾಡುವ ಮೊತ್ತವನ್ನು 5 ಲಕ್ಷ ರೂಪಾಯಿಗೆ ಮಿತಿಗೊಳಿಸಿ (GPF Cap) ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಜಿಪಿಎಫ್‌ ಮೊತ್ತದ ಮಿತಿ ನಿಗದಿಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. “ಉಲ್ಲೇಖ(1)ರ ಕೇಂದ್ರ ಸರ್ಕಾರದ ಅಧಿಸೂಚನೆ ಮತ್ತು ಅಧಿಕೃತ ಜ್ಞಾಪನಗಳಲ್ಲಿ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಮತ್ತು ಉಲ್ಲೇಖ(2)ರ ರಾಜ್ಯ ಸರ್ಕಾರದ ಆದೇಶದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರು ಒಂದು ವರ್ಷಕ್ಕೆ ಪಾವತಿಸಬಹುದಾದ ವಂತಿಗೆಯನ್ನು 5 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಈ ಅಂಶವನ್ನು ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಖಿಲ ಭಾರತ ಸೇವಾ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಈ ಮೂಲಕ ಸೂಚಿಸಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೌಕರರಿಗೆ ಹೇಗೆ ಅನನುಕೂಲ?

ರಾಜ್ಯ ಸರ್ಕಾರದ ನಿರ್ಧಾರದಿಂದ ಸರ್ಕಾರಿ ನೌಕರರು ತೆರಿಗೆ ಉಳಿಸಲು ಕಷ್ಟವಾಗುತ್ತದೆ. ಹೆಚ್ಚು ಸಂಬಳ ಪಡೆಯುವ ನೌಕರರು ಜಿಪಿಎಫ್‌ಗೆ ವಾರ್ಷಿಕವಾಗಿ ಅತಿ ಹೆಚ್ಚಿನ ಹಣವನ್ನು ಜಮೆ ಮಾಡುವ ಮೂಲಕ ತೆರಿಗೆ ಉಳಿಸುತ್ತಿದ್ದರು. ಉಳಿತಾಯದ ದೃಷ್ಟಿಯಿಂದಲೂ ನೌಕರರಿಗೆ ಅನುಕೂಲವಾಗುತ್ತಿತ್ತು. ಆದರೆ, ಈಗ ವಾರ್ಷಿಕ ಮಿತಿಯನ್ನು 5 ಲಕ್ಷ ರೂ.ಗೆ ನಿಗದಿಪಡಿಸಿದ ಕಾರಣ ಲಕ್ಷಾಂತರ ನೌಕರರು ತೆರಿಗೆ ಉಳಿಸಲು, ಹೆಚ್ಚಿನ ಹಣವನ್ನು ಉಳಿತಾಯ ಮಾಡಲು ಕಷ್ಟವಾಗುತ್ತದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ನಿರ್ಧಾರದಿಂದ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲ, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳಿಗೂ ಹೊಸ ನಿಯಮವು ಅನ್ವಯಿಸಲಿದೆ. ಕೆಲ ತಿಂಗಳ ಹಿಂದೆ ಪಂಜಾಬ್‌ನಲ್ಲೂ ಅಲ್ಲಿನ ರಾಜ್ಯ ಸರ್ಕಾರವು ನೌಕರರ ಜಿಪಿಎಫ್‌ ವಾರ್ಷಿಕ ಮಿತಿಯನ್ನು 5 ಲಕ್ಷ ರೂ.ಗೆ ನಿಗದಿಪಡಿಸಿತ್ತು. ಆದಾಗ್ಯೂ, ಕರ್ನಾಟಕ ಸರ್ಕಾರದ ಆದೇಶದ ಕುರಿತು ಇದುವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

Exit mobile version