ಬೆಂಗಳೂರು: ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಶೇ.10-30ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಸಿದರೆ, ಆಸ್ತಿ ಮಾರಾಟ ಮಾಡುವವರಿಗೆ ಅನುಕೂಲವಾದರೆ, ಖರೀದಿದಾರರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಅದರಲ್ಲೂ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಖರೀದಿದಾರರ ಜೇಬಿಗೆ ಬಿಸಿ ತಾಗಲಿದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ಮೌಲ್ಯವು ಕಡಿಮೆ ಇದೆ. ಅದರಲ್ಲೂ ಕಳೆದ ಬಾರಿ 2018-19ರಲ್ಲಿ ಆಸ್ತಿ ಮೌರ್ಗಸೂಚಿ ಮೌಲ್ಯವನ್ನು ಶೇ.25ರಷ್ಟು ಏರಿಕೆ ಮಾಡಲಾಗಿತ್ತು. ಇದಾದ ನಂತರ ಏರಿಸಿರಲಿಲ್ಲ. ಇನ್ನು ಕೊರೊನಾ ಬಿಕ್ಕಟ್ಟಿನ ಕಾರಣದಿಂದಾಗಿ 2022ರಲ್ಲಿ ಮಾರ್ಗಸೂಚಿ ಮೌಲ್ಯವನ್ನು ಶೇ.1೦ರಷ್ಟು ಕಡಿಮೆ ಮಾಡಲಾಗಿತ್ತೇ ಹೊರತು ಏರಿಕೆ ಮಾಡಿರಲಿಲ್ಲ.
ಈಗ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಶೇ.10ರಿಂದ ಶೇ.30ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಿದೆ. ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ರಚನೆಯಾಗುತ್ತಲೇ ಆಸ್ತಿ ಮಾರ್ಗಸೂಚಿ ಮೌಲ್ಯ ಹೆಚ್ಚಿಸುವ ಪ್ರಸ್ತಾಪ ಇರಿಸಲು ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಜನರಿಗೆ ಹೇಗೆ ಭಾರವಾಗಲಿದೆ?
ಉದಾಹರಣೆಗೆ ಯಾವುದೇ ಒಂದು ಆಸ್ತಿಯ ಮೌಲ್ಯ ಒಂದು ಕೋಟಿ ರೂಪಾಯಿ ಇಟ್ಟುಕೊಳ್ಳೋಣ. ಒಂದು ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದರೆ ಶೇ.10ರಷ್ಟು ಮಾರ್ಗಸೂಚಿ ದರ ಹೆಚ್ಚಳವಾಯಿತು ಎಂದರೆ ಖರೀದಿದಾರರು ಮುದ್ರಾಂಕ ಹಾಗೂ ನೋಂದಣಿ ಶುಲ್ಕವಾಗಿ 75 ಸಾವಿರ ರೂ.ನಿಂದ 1 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇನ್ನು ಇದೇ ಒಂದು ಕೋಟಿ ರೂ.ಗೆ ಶೇ.30ರಷ್ಟು ಮಾರ್ಗಸೂಚಿ ಮೌಲ್ಯ ಹೆಚ್ಚಾದರೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕವು 2.5 ಲಕ್ಷ ರೂ. ಆಗಲಿದೆ.
ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಕಳೆದ ಹಣಕಾಸು ವರ್ಷದಲ್ಲಿ 17,874 ಕೋಟಿ ರೂಪಾಯಿ ಆದಾಯವು ಮುದ್ರಾಂಕ ಹಾಗೂ ನೋಂದಣಿ ಶುಲ್ಕವಾಗಿ ಲಭಿಸಿದೆ ಎಂದು ಇಲಾಖೆಯೇ ಮಾಹಿತಿ ನೀಡಿದೆ. 2023ರ ಏಪ್ರಿಲ್‌ನಲ್ಲಿ ಇಲಾಖೆಯು ಒಂದು ಸಾವಿರ ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ: UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್‌ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?