ಬೆಂಗಳೂರು: ಅನ್ನಭಾಗ್ಯ (Congress Guarantee) ಯೋಜನೆಯಲ್ಲಿ ಈಗಾಗಲೆ ನೀಡುತ್ತಿರುವ ಐದು ಕೆ.ಜಿ. ಅಕ್ಕಿಯ ಜತೆಗೆ ಮತ್ತೆ ಐದು ಕೆ.ಜಿ. ಅಕ್ಕಿಗೆ ತಲಾ 34 ರೂ.ನಂತೆ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಂತರ ಮಾತನಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ನಾವು ಅಕ್ಕಿಯನ್ನು ಕೊಡಲು ಪ್ರಯತ್ನ ಮಾಡಿದೆವು. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎನ್ನುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ 31 ರೂ. ಪ್ರತಿ ಕೆ.ಜಿ.ಗೆ ಮಾರಾಟ ಮಾಡುತ್ತಿದೆ. ಆದರೆ ನಾವು 34 ರೂ. ಕೊಡುತ್ತೇವೆ ಎಂದು ಆಗುವುದಿಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡುತ್ತಿದೆ.
ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಮಾಸಿಕ ಅಂದಾಜು 800 ಕೋಟಿ ರೂ. ವೆಚ್ಚವಾಗುತ್ತದೆ. ಕಾರ್ಡ್‌ದಾರರ ಖಾತೆಗೆ ಈ ಹಣವನ್ನು ಹಾಕುತ್ತೇವೆ. ಅಕ್ಕಿಯನ್ನು ಪಡೆಯಲು ಪ್ರಯತ್ನ ಮಾಡುತ್ತೇವೆ. ಅಕ್ಕಿ ಸಿಗುವವರೆಗೂ ಹಣ ಹಾಕುವುದನ್ನು ಮುಂದುವರಿಸುತ್ತೇವೆ ಎಂದರು.
ಇದನ್ನೂ ಓದಿ: 5 ಕೆ.ಜಿ ಅಕ್ಕಿ ಕೊಡ್ತಿರೋದು ಇವರೇ ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ; ಕೈ ನಾಯಕರಿಗೆ ಮುನಿರತ್ನ ಸವಾಲ್
ಮೊದಲಿಗೆ ಕೇಂದ್ರ ಸರ್ಕಾರದ ವ್ಯಾಪ್ತಿಯ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿತ್ತು. ರಾಜ್ಯಕ್ಕೆ ಅವಶ್ಯಕ ಅಕ್ಕಿಯನ್ನು ನೀಡುವುದಾಗಿ ಎಫ್‌ಸಿಐ ಲಿಖಿತವಾಗಿ ಒಪ್ಪಿಕೊಂಡಿತ್ತು. ಆದರೆ ಮಾರನೆಯ ದಿನವೇ ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡದಂತೆ ನಿರ್ಬಂಧ ವಿಧಿಸಿತ್ತು, ಹೆಚ್ಚುತ್ತಿರುವ ಅಕ್ಕಿ ದರವನ್ನು ನಿಯಂತ್ರಿಸಲು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಮಾಡುವಂತೆ ಹೇಳಿತ್ತು.
ಅಂದಿನಿಂದ ರಾಜ್ಯದಲ್ಲಿ ಅಕ್ಕಿ ಕುರಿತು ರಾಜಕೀಯ ಆರಂಭವಾಗಿದೆ. ಕೇಂದ್ರ ಆಹಾರ ಸಚಿವ ಪೀಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದರೂ ಅವರು ಭರವಸೆ ನೀಡಿಲ್ಲ ಎಂದು ಮುನಿಯಪ್ಪ ಹೇಳಿದ್ದರು. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಜತೆಗಿನ ಸಭೆಯಲ್ಲೂ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರವು ಅಕ್ಕಿ ಕೊಡಲಾಗದೆ ನಾಟಕ ಆಡುತ್ತಿದೆ ಎಂದಿದ್ದ ರಾಜ್ಯ ಬಿಜೆಪಿ ನಾಯಕರು, ಅಕ್ಕಿ ಕೊಡಲು ಆಗದಿದ್ದರೆ ಅಷ್ಟು ಹಣವನ್ನು ಖಾತೆಗೆ ಹಾಕಿಬಿಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇದೀಗ ಸರ್ಕಾರವು, ಅಕ್ಕಿ ಸಿಗುವವರೆಗೆ ಹಣವನ್ನೇ ನೀಡಲು ನಿರ್ಧಾರ ಕೈಗೊಂಡಿದೆ.