Site icon Vistara News

ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್‌ ನ್ಯಾಯಮೂರ್ತಿ ಹೇಳಿಕೆ ವೈರಲ್‌

justice sandesh karnataka high court

ಬೆಂಗಳೂರು: ʼʼಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ. ಇದಕ್ಕೆ ನಾನು ಸಿದ್ಧನಿದ್ದೇನೆ. ನನಗೆ ಯಾರ ಹೆದರಿಕೆಯೂ ಇಲ್ಲ. ಜಡ್ಜ್‌ ಆದ್ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆಯಿಲ್ಲ. ನಾನು ರೈತನ ಮಗ, ಉಳುಮೆ ಮಾಡಿ ಜೀವನ ಸಾಗಿಸಲು ಸಿದ್ಧನಾಗಿದ್ದೇನೆʼʼ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಸೋಮವಾರ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬೆಂಗಳೂರು ನಗರ ಡಿಸಿ ಕಚೇರಿಯ ಉಪತಹಸೀಲ್ದಾರ್‌ ಪಿ ಎಸ್‌ ಮಹೇಶ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಟ್ಟಿಗೆದ್ದಿದ್ದ ನ್ಯಾಯಮೂರ್ತಿ ಸಂದೇಶ್‌, ʼʼಅಕ್ರಮ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳಿ ನನಗೆ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಎಲ್ಲರಿಗಿಂತಲೂ ಪವರ್‌ಫುಲ್‌ ಅಂತೆʼʼ ಎಂದು ಅವರು ಹೇಳಿದ್ದಾರೆ.

ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್‌ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ಈ ವಿಷಯ ತಿಳಿಸಿದ್ದಾರೆ. ಇದನ್ನು ಆದೇಶದಲ್ಲಿ ಬರೆಸುತ್ತೇನೆ. ಜನರಿಗಾಗಿ ವರ್ಗಾವಣೆ ಬೆದರಿಕೆ ಎದುರಿಸಲೂ ನಾನು ಸಿದ್ಧನಿದ್ದೇನೆ. ನಮ್ಮಲ್ಲಿ ಭ್ರಷ್ಟಾಚಾರದವೆಂಬ ಕ್ಯಾನ್ಸರ್‌ ೩ ಮತ್ತು ೪ನೇ ಹಂತ ತಲುಪುವ ಮುನ್ನವೇ ಗುಣಪಡಿಸಬೇಕಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

೫೦೦ ರೂ.ಗಳಲ್ಲಿ ಜೀವನ ನಡೆಸುವುದು ಗೊತ್ತು!
ನನಗೆ ೫೦೦ ರೂಪಾಯಿಗಳಲ್ಲಿ ಜೀವನ ನಡೆಸುವುದೂ ಗೊತ್ತಿದೆ, ೫೦ ಸಾವಿರ ಹಣದಲ್ಲಿಯೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ನಾನು ಸಂವಿಧಾನಕ್ಕೆ ಮಾತ್ರ ಬದ್ಧನೇ ಹೊರತು, ಯಾವುದೇ ಪಕ್ಷದ ಸಿದ್ಧಾಂತಕ್ಕೆ ಬದ್ಧನಲ್ಲ ಎಂದಿದ್ದರು.

ಕರಿಕೋಟು ಇರುವುದು ಅಪರಾಧಿಗಳನ್ನು ರಕ್ಷಿಸುವುದಕ್ಕಲ್ಲ!
ಕರಿಕೋಟು ಇರುವುದು ಆರೋಪಿಗಳನ್ನು ರಕ್ಷಿಸುವುದಕ್ಕಲ್ಲ ಎಂದು ಎಸಿಬಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೇಳಿರುವ ನ್ಯಾ. ಎಚ್‌.ಪಿ ಸಂದೇಶ್‌, ೨ನೇ ಆರೋಪಿಯನ್ನು ಕಲೆಕ್ಷನ್‌ಗೋಸ್ಕರವೇ ನೇಮಿಸಲಾಗಿದೆ. ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನಾ ಎಂದು ಎಸಿಬಿ ಪರ ವಕೀಲರನ್ನು ಪ್ರಶ್ನಿಸಿದ್ದರು. ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು? ರಾಜ್ಯಕ್ಕೆ ಅವಮಾನವಾಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸುತ್ತಿದ್ದೀರಿ. ಸರ್ಕಾರ ಕೂಡ ಅಪರಾಧದ ಭಾಗವಾಗಿರುವಂತಿದೆʼʼ ಎಂದಿದ್ದರು.

ಇದನ್ನೂ ಓದಿ | ಭ್ರಷ್ಟಾಚಾರ ಪ್ರಕರಣದ ಆರೋಪಿಗಳಾದ ಐಪಿಎಸ್‌ ಅಮೃತ್‌ ಪಾಲ್‌ – ಐಎಎಸ್‌ ಜೆ. ಮಂಜುನಾಥ್‌ ಸಸ್ಪೆಂಡ್‌

Exit mobile version