ಬೆಂಗಳೂರು: ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ, ಯುವಜನತೆಗೆ ಉಗ್ರ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಆರೋಪದೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ (PFI Banned) ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.
ಕೇಂದ್ರ ಸರಕಾರದ ಆದೇಶವನ್ನು ಪ್ರಶ್ನಿಸಿ ಪಿಎಫ್‌ಐ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಅರ್ಜಿದಾರರ ವಾದವೇನಾಗಿತ್ತು?
ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967ರ ಸೆಕ್ಷನ್ 3, ಉಪ ನಿಯಮ 3ರ ಅಡಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವುದು ಕಾನೂನು ಬಾಹಿರ. ಪಿಎಫ್‌ಐ ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮ. ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವುದಕ್ಕೆ ಮತ್ತು ಆ ನಿಷೇಧ ತಕ್ಷಣದಿಂದಲೇ ಅನ್ವಯಿಸಿರುವುದಕ್ಕೆ ಪ್ರತ್ಯೇಕ ಕಾರಣ ಆದೇಶದಲ್ಲಿ ತಿಳಿಸಿಲ್ಲ ಎಂದು ಅರ್ಜಿದಾರರ ಪರ ವಕೀಲ ಜಯಕುಮಾರ್ ಪಾಟೀಲ್ ವಾದಿಸಿದ್ದರು.
ಪಿಎಫ್‌ಐಗೆ ತನ್ನ ಅಭಿಪ್ರಾಯವನ್ನು ಹೇಳಲು ಅವಕಾಶ ನೀಡದೆ ಏಕಾಏಕಿ ನಿಷೇಧ ಆದೇಶ ಮಾಡಲಾಗಿದೆ. ಹೀಗೆ ಯುಎಪಿಎ ಕಾಯಿದೆಗೆ ವಿರುದ್ಧವಾಗಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ವಕೀಲರು ಕೋರಿದ್ದರು.
ಕೇಂದ್ರ ಸರಕಾರದ ಸಮರ್ಥನೆ ಏನಿತ್ತು?
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಪಿಎಫ್‌ಐ ಸಂಘಟನೆ ದೇಶ ವಿರೋಧಿ ಕೃತ್ಯಗಳನ್ನು ನಡೆಸುತ್ತಿತ್ತು. ಅದು ಭಯೋತ್ಪಾದಕ ಸಂಘಟನೆಗಳ ಕೈ ಜೋಡಿಸಿ ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿತ್ತು. ಜೊತೆಗೆ ಸಂಘಟನೆಯ ಸದಸ್ಯರು ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ” ಎಂದು ಹೇಳುವ ಮೂಲಕ ಕೇಂದ್ರ ಸರಕಾರ ನಿಷೇಧ ಮಾಡಿದ್ದು ಸರಿಯೇ ಇದೆ ಎಂದು ಹೇಳಿದ್ದರು.
ಇದನ್ನೂ ಓದಿ ವಿಸ್ತಾರ Explainer : ಏನಿದು ಪಿಎಫ್‌ಐ? ಕೇಂದ್ರ ಸರ್ಕಾರ 5 ವರ್ಷಗಳ ಅವಧಿಗೆ ನಿಷೇಧಿಸಿದ್ದೇಕೆ?