ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆಯೇರಿಕೆಯ ಬರೆಯನ್ನು ಕರ್ನಾಟಕ ಸರ್ಕಾರ ಎಳೆದಿದೆ. ಹೌದು, ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ (Petrol Diesel Price) ಮಾಡಿ ರಾಜ್ಯ ಸರ್ಕಾರ ಆದೇಶ (Karnataka Government) ಹೊರಡಿಸಿದೆ. ಒಂದು ಲೀಟರ್ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 250 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ತಿಳಿದುಬಂದಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯಿಂದ ರಾಜ್ಯ ಸರ್ಕಾರಕ್ಕೆ ವ್ಯಾಟ್ ರೂಪದಲ್ಲಿ ವರ್ಷಕ್ಕೆ 250 ಕೋಟಿ ರೂ. ಹೆಚ್ಚುವರಿ ಆದಾಯ ಸಿಗಲಿದೆ. ರಾಜ್ಯ ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವ್ಯಾಟ್ ರೂಪದಲ್ಲಿ ವರ್ಷಕ್ಕೆ ರೂ. 9,500 ಕೋಟಿ ಆದಾಯವನ್ನು ಗಳಿಸುತ್ತದೆ. ಇದು ತಿಂಗಳಿಗೆ 800 ಕೋಟಿ ರೂ. ಆಗುತ್ತದೆ. ಇನ್ನು ಈಗ ಬೆಲೆಯೇರಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 9,750 ಕೋಟಿ ರೂ. ಸಿಗಲಿದೆ ಎಂದು ತಿಳಿದುಬಂದಿದೆ.
ಪ್ರಲ್ಹಾದ್ ಜೋಶಿ ಆಕ್ರೋಶ
ಅಭಿವೃದ್ಧಿ ಕೇಳ್ಬೇಡಿ ….
— Pralhad Joshi (@JoshiPralhad) June 15, 2024
ತೊಗೊಳ್ರಪ್ಪ ಕೊಟ್ರು ಚೊಂಬು…..
ಬೆಲೆ ಏರಿಕೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸಿ ಜನರ ದಿಕ್ಕು ತಪ್ಪಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರ ಇಂಧನದ ಬೆಲೆ ಕಡಿಮೆ ಮಾಡಿದ್ದರೂ, ರಾಜ್ಯದಲ್ಲಿ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಸಿ ಜನರಿಗೆ ಹೊರೆಮಾಡಿದೆ.… pic.twitter.com/GPTV56FZlC
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಒಂದು ಲೀಟರ್ ಡೀಸೆಲ್‌ಗೆ ರಾಜ್ಯದ ಜನ 89.20 ರೂ. ನೀಡಬೇಕಾದರೆ, ಲೀಟರ್ ಪೆಟ್ರೋಲ್‌ಗೆ 103 ಆಗಲಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಇದುವರೆಗೆ ಶೇ.25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಈಗ ಶೇ.3.9ರಷ್ಟು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಒಟ್ಟು ಶೇ.29.84ರಷ್ಟು ತೆರಿಗೆ ವಸೂಲಿ ಮಾಡಲಿದೆ. ಇನ್ನು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ.18.44ರಷ್ಟು ತೆರಿಗೆ ವಸೂಲಿ ಮಾಡಲಿದೆ.
ಸೋಮವಾರದಿಂದ ಪ್ರತಿಭಟನೆ ಎಂದ ಬಿಜೆಪಿ
ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. “ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಹಾಗಾಗಿ, ಬೆಲೆಯೇರಿಕೆ ಮೂಲಕ ಜನರ ಮೇಲೆ ಸಿಟ್ಟು ತೀರಿಸಿಕೊಳ್ಳಲಾಗುತ್ತಿದೆ. ಮೊದಲು ವಿದ್ಯುತ್ ಬೆಲೆ ಏರಿಕೆ ಮಾಡಿತು. ಆಮೇಲೆ ಸ್ಟ್ಯಾಂಪ್ ಡ್ಯೂಟಿ ಏರಿಸಲಾಯಿತು. ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗೆ ಬರೆ ಹಾಕುತ್ತಿದ್ದಾರೆ. ಬೆಲೆ ಏರಿಕೆ ಖಂಡಿಸಿ ಸೋಮವಾರ ಪ್ರತಿಭಟನೆ ಮಾಡುತ್ತೇವೆ” ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: Petrol Diesel Price: ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ 3 ರೂ. ಏರಿಕೆ