ನವದೆಹಲಿ: ಕೃಷ್ಣಾ ನ್ಯಾಯಾಧಿಕರಣ ಐತೀರ್ಪಿನ (Krishna Water Dispute) ಅಧಿಸೂಚನೆ ಪ್ರಕಟಿಸುವ ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದುವರಿಸಿತು. ಈ ವೇಳೆ, ಕರ್ನಾಟಕದ ಪರವಾಗಿ ವಕೀಲ ಶ್ಯಾಮ್ ದಿವಾನ್ ಅವರು ವಾದ ಮಂಡಿಸಿದರು.
ಸುಪ್ರೀಂ ಕೋರ್ಟ್‌ನ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ರಾಮಸುಬ್ರಹ್ಮಣ್ಯಂ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಕಾವೇರಿ ಜಲವಿವಾದದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡುವ ಮುನ್ನವೇ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಅದೇ ಮಾದರಿಯಲ್ಲಿ ಕೃಷ್ಣಾ ಐತೀರ್ಪಿನ ಅಧಿಸೂಚನೆಯನ್ನು ಪ್ರಕಟಿಸಬೇಕು ಎಂದ ಕರ್ನಾಟಕ ವಾದ ಮಂಡಿಸಿತು.
ಮಂಗಳವಾರದ ವಿಚಾರಣೆಯ ವೇಳೆಯೂ ಕರ್ನಾಟಕದ ಪರ ವಕೀಲರ ತಂಡವು ಸುದೀರ್ಘವಾಗಿ, 1.10 ಗಂಟೆಗಳ ಕಾಲ ವಾದ ಮಂಡಿಸಿತ್ತು. ಹಂಚಿಕೆಯಾದ ನೀರಿನ ಸದ್ಭಳಕೆ ಮಾಡಲು ಕರ್ನಾಟಕವು ಈಗಾಗಲೇ 14,955 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲವೆ ಜಾಗ ನಿರ್ಮಾಣ ಮಾಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ 130 ಟಿಎಂಸಿ ನೀರಿನ ಬಳಕೆಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಲಾಗಿದೆ. ಈ ಸೌಕರ್ಯವು ವ್ಯರ್ಥವಾಗಬಾರದು ಎಂದು ಕೋರ್ಟ್‌ಗೆ ವಕೀಲ ಶ್ಯಾಮ್ ದಿವಾನ್ ಅವರು ಮನವಿ ಮಾಡಿದರು.
ಕಾವೇರಿ ಜಲವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳು ಇದ್ದಾಗ್ಯೂ, ನ್ಯಾಯಾಲಯವೇ ಅಂತಾರಾಜ್ಯ ಜಲ ಹಂಚಿಕೆ ಕಾಯ್ದೆಯ ಅನ್ವಯ ಗೆಜೆಟ್ ಪ್ರಕಟಣೆಗೆ ಅವಕಾಶ ನೀಡಿತ್ತು. ಅದೇ ಪರಿಸ್ಥಿತಿಯು ಈಗ ಕೃಷ್ಣಾ ಜಲ ವಿವಾದದಲ್ಲಿ ಇದೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ | CM Bommai | ಕೇಂದ್ರ ಜಲಶಕ್ತಿ ಸಚಿವರ ಜತೆ ಸಿಎಂ ಬೊಮ್ಮಾಯಿ ಚರ್ಚೆ: ರಾಜ್ಯದ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿಕೆ