ಬೆಂಗಳೂರು: ವಿಧಾನ ಮಂಡಲದ ಮಳೆಗಾಲದ ಅಧಿವೇಶನದ ಮೊದಲ ದಿನ ನಮ್ಮನ್ನು ಅಗಲಿದ ಮಾಜಿ ಸಚಿವರಾದ ಉಮೇಶ್ ಕತ್ತಿ, ಪ್ರಭಾಕರ ರಾಣೆ ಸೇರಿದಂತೆ ಹಲವು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಉಮೇಶ್ ಕತ್ತಿ ನನಗೂ ಬಹಳ ಆತ್ಮೀಯ. ಲೋಕೋಪಯೋಗಿ ಸಚಿವನಾಗಿದ್ದಾಗ ನನ್ನ ಬಳಿ ಯಾವಾಗಲೂ ಬರುತ್ತಿದ್ದರು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬೆಳಗಾವಿಗೆ ಹೋಗಿದ್ದಾಗ ಊಟಕ್ಕೆ ಕರೆದಿದ್ದರು. ತುಂಬ ಹೊತ್ತು ರಾಜಕೀಯವಾಗಿ ಚರ್ಚೆ ಮಾಡಿದೆವುʼʼ ಎಂದು ನೆನಪಿಸಿಕೊಂಡರು.
ʻʻಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ಉಮೇಶ್ ಕತ್ತಿ ವರ್ಣರಂಜಿತ ರಾಜಕಾರಣಿ. ಆಡಳಿತ ಮತ್ತು ವಿಪಕ್ಷ ಶಾಸಕರ ಜತೆ ಸ್ನೇಹ ಜೀವಿಯಾಗಿ ಇದ್ದ ಅವರು ಅಜಾತಶತ್ರುʼʼ ಎಂದರು ಸಿದ್ದರಾಮಯ್ಯ. ಅವರು ಕಾಲಿಟ್ಟ ಎಲ್ಲ ರಂಗಗಳಲ್ಲೂ ಯಶಸ್ವಿ ಆಗಿದ್ದರು ಎಂದು ನೆನಪು ಮಾಡಿಕೊಂಡರು.
ʻʻಕತ್ತಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡ ಅಂತ ವೈಯಕ್ತಿಕ ಸಲಹೆ ಕೊಟ್ಟಿದ್ದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೇಡಿಕೆ ಇಡು, ಅಭಿವೃದ್ಧಿ ಬಗ್ಗೆ ಮಾತಾಡು, ಪ್ರತ್ಯೇಕತೆ ಮಾತು ಬೇಡ ಅಂದಿದ್ದೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ಸಲೀಂ ಅಹ್ಮದ್ ಸಂತಾಪ
ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವ ಎಂಎಲ್‌ಸಿ ಸಲೀಂ ಅಹಮದ್ ಅವರು ವಿಧಾನಪರಿಷತ್‌ನಲ್ಲಿ ಮಾತನಾಡಿದರು. ʻʻಉಮೇಶ್ ಕತ್ತಿ ಅವರು ಅಪರೂಪದ ರಾಜಕಾರಣಿ, ಮೊನ್ನೆ ಸೆಪ್ಟೆಂಬರ್ ೧ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಿಗೆ ಸಿಕ್ಕರು. ಎರಡು ಗಂಟೆಯಲ್ಲಿ ಅನೇಕ ವಿಚಾರಗಳು ಚರ್ಚೆ ಮಾಡಿದೆವು. ಅವರು ತುಂಬಾ ಜನರಿಗೆ ಉದ್ಯೋಗ ಕೊಟ್ಟರು. ಅವರ ನಿಧನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲʼʼ ಎಂದರು.