Site icon Vistara News

ಅಧಿವೇಶನ | ಎಲ್ಲ ಪಕ್ಷಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಅಂತಿದ್ದರು ಕತ್ತಿ, ನೆನಪು ಮಾಡಿಕೊಂಡ ಬೊಮ್ಮಾಯಿ

Umesh katti bommai

ಬೆಂಗಳೂರು: ಉಮೇಶ್‌ ಕತ್ತಿ ಅವರು ತುಂಬಾ ಆತ್ಮೀಯ ನಡವಳಿಕೆಯ ವ್ಯಕ್ತಿ. ಕ್ಷೇತ್ರದ ಜನರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರಲ್ಲದೆ, ಎಲ್ಲ ರಾಜಕೀಯ ನಾಯಕರ ಜತೆಗೂ ತುಂಬ ಒಳ್ಳೆಯ ಸಂಬಂಧ ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದ ಆರಂಭದ ದಿನ ಉಮೇಶ್‌ ಕತ್ತಿ ಸೇರಿದಂತೆ ಹಲವು ನಾಯಕರು, ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿ ಅವರು ಮಾತನಾಡಿದರು.

ʻʻಎಲ್ಲವೂ ಸರಿ ಇದ್ದಿದ್ದರೆ ಇಂದು ಉಮೇಶ್ ಕತ್ತಿ ನಮ್ಮ ಜತೆ ಇರಬೇಕಿತ್ತು. ಮೊದಲ ಸಾಲಿನಲ್ಲಿ ಅವರು ಕೂರಬೇಕಿತ್ತುʼʼ ಎಂದು ಹೇಳಿದ ಬೊಮ್ಮಾಯಿ ಅವರು, ಉಮೇಶ್‌ ಕತ್ತಿ ಅವರು ಎಲ್ಲ ಪಾರ್ಟಿಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಎಂದು ಹೇಳ್ತಿದ್ದರುʼʼ ಎಂದರು. ೧೯೮೫ರಲ್ಲಿ ಮೊದಲ ಬಾರಿ ಶಾಸಕರಾದ ಕತ್ತಿ ಅವರು ಬಳಿಕ ಆರು ಪಕ್ಷಗಳಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಎಂಟು ಬಾರಿ ಗೆದ್ದು ಶಾಸಕರಾಗಿದ್ದಾರೆ. ೧೯೮೫ರಲ್ಲಿ ಜನತಾ ಪಕ್ಷದಿಂದ, ೧೯೮೯, ೧೯೯೪ರಲ್ಲಿ ಜನತಾ ದಳದಿಂದ, ೧೯೯೯ರಲ್ಲಿ ಸಂಯುಕ್ತ ಜನತಾದಳದಿಂದ, ೨೦೦೪ರಲ್ಲಿ ಕಾಂಗ್ರೆಸ್‌ನಿಂದ (ಆಗ ಸೋತಿದ್ದರು) ಸ್ಪರ್ಧಿಸಿದ್ದರು. ೨೦೦೪ರಲ್ಲಿ ಮತ್ತೆ ಜೆಡಿಎಸ್‌ಗೆ ಬಂದರಾದರೂ ಗೆದ್ದ ಬಳಿಕ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಅಲ್ಲಿಂದ ಬಳಿಕ ಅವರು ಬಿಜೆಪಿಯಲ್ಲೇ ಇದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆ ಜನಕ
ʻʻಬೆಳಗಾವಿ ಜಿಲ್ಲೆಯಲ್ಲಿ ಇಷ್ಟೊಂದು ಸಕ್ಕರೆ ಕಾರ್ಖಾನೆಗಳು ಬೆಳೆಯಲು, ಈ ಮಟ್ಟಕ್ಕೆ ಅಭಿವೃದ್ಧಿ ಕಾಣಲು ಉಮೇಶ್‌ ಕತ್ತಿ ಅವರೇ ಕಾರಣ. ಅದರಲ್ಲೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಇವರೇ ಮೂಲ ಪುರುಷರುʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.

ಕತ್ತಿ ಅವರು ಜನರ ಜತೆ ಸೇರಿ ಬೆಳೆದ ರಾಜಕಾರಣಿ ಎಂದು ಹೇಳಿದ ಬೊಮ್ಮಾಯಿ ಅವರು ಹುಕ್ಕೇರಿ ಕ್ಷೇತ್ರವನ್ನು ದಾಟಿ ಹೋಗುವಾಗ ಬೆಲ್ಲದ ಚಹ ಕುಡಿದು ಸ್ನೇಹಯುತವಾಗಿ ಮಾತನಾಡಿಸಿಕೊಂಡೇ ಹೋಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.

ʻʻದೇವೇಗೌಡರು ಮೊದಲ ಬಾರಿ ಸಂಪುಟ ರಚನೆ ಮಾಡಿದಾಗ ಅವಕಾಶ ಕೊಡಲಿಲ್ಲ ಸಹಜವಾಗಿ ಬೇಸರ ವ್ಯಕ್ತಪಡಿಸಿದರು. ನಂತರ ನಡೆದ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ತಮ್ಮ ಟೀಮನ್ನು ಪ್ರತ್ಯೇಕವಾಗಿ ಗೆಲ್ಲಿಸಿಕೊಂಡುಬಂದರು. ಜೈಲು ಖಾತೆ ಕೊಟ್ಟಾಗ ಕಾಯಂ ಆಗಿ ನನ್ನನ್ನು ಜೈಲಿಗೆ ಹಾಕುವ ಯೋಚನೆ ಮಾಡಿದ್ದೀರಾ ಎಂದು ಹಾಸ್ಯ ಮಾಡಿದರು. ಖಾತೆಯನ್ನು ಚೆನ್ನಾಗಿ ನಿಭಾಯಿಸಿದರುʼʼ ಎಂದರು ಬೊಮ್ಮಾಯಿ.

ರಾಗಿ, ಜೋಳ, ಸಿರಿಧಾನ್ಯದ ಮೂಲಕ ಪಡಿತರ ಕ್ರಾಂತಿ
ʻʻಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದ ಬಳಿಕ ಪಡಿತರಕ್ಕೆ ರಾಗಿ ಮತ್ತು ಜೋಳ ಸೇರಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಇವತ್ತು ರಾಜ್ಯದ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ಇದ್ದರೆ, ಸಿರಿಧಾನ್ಯ ಇದ್ದರೆ ಅದಕ್ಕೆ ಕಾರಣ ಉಮೇಶ್‌ ಕತ್ತಿʼʼ ಎಂದು ಶ್ಲಾಘಿಸಿದರು ಬೊಮ್ಮಾಯಿ.

ರಾಜ್ಯ ವಿಭಾಗ ಆಗಬೇಕು ಅನ್ನೋ ನಿಲುವಲ್ಲ ಅವರದು
ಕತ್ತಿ ಅಂದ ಕೂಡಲೇ ಪ್ರತ್ಯೇಕ ರಾಜ್ಯ ಕೇಳುವವರು ಎಂಬ ಪ್ರತೀತಿ ಇದೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದಕ್ಕೆ ಬೇರೆ ಆಯಾಮ ನೀಡಿದರು.
ʻʻಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಬೇಕು ಅನ್ನೋ ಆಸೆ ಅವರಿಗೆ ಇತ್ತು. ಹೀಗಾಗಿಯೇ ಅವರು ಕೆಲವು ಸಲ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದರು. ಆದರೆ, ಮೂಲತಃ ಅವರಿಗೆ ರಾಜ್ಯ ಎರಡಾಗಬೇಕು ಎನ್ನುವ ಯಾವುದೇ ಅಭಿಪ್ರಾಯ ಇರಲಿಲ್ಲ. ಅಭಿವೃದ್ಧಿಯ ಸಲುವಾಗಿ ನಿರಂತರ ಒತ್ತಡ ಇರಬೇಕು ಎಂದು ಭಾವಿಸಿದ್ದರುʼʼ ಎಂದು ಹೇಳಿದರು.

ʻʻಆನೆಗಳು ಊರಿನ ಒಳಗೆ ಬರುತ್ತಿವೆ ಏನು ಮಾಡಬೇಕುʼʼ ಎಂದು ಕೇಳಿದಾಗ ʻʻಜನ ಅರಣ್ಯಕ್ಕೆ ಹೋಗವುದನ್ನು ಬಿಡಲಿ. ಆನೆ ನಾಡಿಗೆ ಬರಲ್ಲʼʼ ಎಂದು ನೇರವಾಗಿ ಹೇಳುವಷ್ಟು ಖಡಕ್‌ತನ ಅವರಲ್ಲಿತ್ತು ಎಂದರು ಬೊಮ್ಮಾಯಿ.

Exit mobile version