ಬಾದಾಮಿ, ಕರ್ನಾಟಕ: ನಾವು ರಾಜಕಾರಣಿಗಳ ಭ್ರಮೆಯಲ್ಲಿರುತ್ತೇವೆ. ನಮ್ಮಿಂದಲೇ ಚುನಾವಣೆ ಎಂದು ಭಾವಿಸುತ್ತೇವೆ. ಆದರೆ, ಕರ್ನಾಟಕದ ಪರಿಸ್ಥಿತಿ ಬೇರೆಯಾಗಿದೆ. ಇಲ್ಲಿ ಸಿಗುತ್ತಿರುವ ಅಭೂತಪೂರ್ವ ಬೆಂಬಲವು ನನ್ನನ್ನು ಮೂಕವಿಸ್ಮತವಾಗುತ್ತಿದೆ. ಈ ಚುನಾವಣೆಯನ್ನು ಮೋದಿಯಾಗಲೀ, ಬಿಜೆಪಿಯಾಗಲಿ ಅಥವಾ ಅಭ್ಯರ್ಥಿಗಳಾಗಿ ನಡೆಸುತ್ತಿಲ್ಲ. ಬದಲಾಗಿ ಕರ್ನಾಟಕದ ಜನರು ಬಿಜೆಪಿಗಾಗಿ ಚುನಾವಣೆ ಮಾಡುತ್ತಿದ್ದಾರೆ. ಈ ಚುನಾವಣಾ ಸಂಪೂರ್ಣವಾಗಿ ಜನರ ನಿಯಂತ್ರಣದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka Election 2023).
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಶೇ.85ರಷ್ಟು ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರವೇ ಹೆಚ್ಚಿತ್ತು, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ದಿಯಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಾದಾಮಿಯಲ್ಲಿ ಮತಯಾಚನೆ ಮಾಡಿದರು
ಕಳೆದ 3.5 ವರ್ಷದಲ್ಲಿ ತಾವು ಈ ಕ್ಷೇತ್ರದಲ್ಲಿ(ಬಾದಾಮಿ) ಅಭಿವೃದ್ಧಿ ಮಾಡಿರುವುದಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ಮಾತಿನಿಂದಲೇ ಗೊತ್ತಾಗುತ್ತದೆ. ಡಬಲ್ ಎಂಜಿನ್ ಸರ್ಕಾರವು ಕೆಲಸ ಮಾಡಿದೆ ಎಂಬುದು ಅರಿವಾಗುತ್ತದೆ. ಅದು ಯಾವುದೇ ಭೇದ ಭಾವ ಇಲ್ಲದೇ ಡಬಲ್ ಎಂಜಿನ್ ಸರ್ಕಾರವು ಕೆಲಸ ಮಾಡಿದೆ. ಇಷ್ಟಾಗಿಯೂ ಅವರು ಈ ಕ್ಷೇತ್ರವನ್ನು ಬಿಟ್ಟು ಹೋಗಿದ್ದಾರೆ. ಅಲ್ಲಿ ಇಲ್ಲಿ ತಿರುಗಾಡಿ ಬಾದಾಮಿ ಬಂದಾಗ ನೀವು ಅವರಿಗೆ ಕೇಳಿ, ಈ ಕ್ಷೇತ್ರವು ಹಿಂದುಳಿಯಲು ಏನು ಕಾರಣ ಎಂದು. ಅದಕ್ಕೆ ಅವರು ಇಷ್ಟು ವರ್ಷ ಆಡಳಿತ ಮಾಡಿದ್ದೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಬಾಗಲಕೋಟೆ ಜಿಲ್ಲೆಗೆ ಎಷ್ಟೆಲ್ಲ ಲಾಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂಕಿ-ಸಂಖ್ಯೆಗಳೊಂದಿಗೆ ವಿವರಿಸಿದರು. ಡಬಲ್ ಎಂಜಿನ್ ಸರ್ಕಾರದಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಲಾಭವಾಗುವುದು ಮಾತ್ರವಲ್ಲದೇ ಅವರಿಗೆ ಉಳಿತಾಯ ಕೂಡ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಎಲ್ಇಡಿ ಬಲ್ಬ್ ವಿತರಣೆಯಿಂದಾಗಿ ಪ್ರತಿ ವರ್ಷ 20 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಆಯುಷ್ಮಾನ್ ಯೋಜನೆಯ ಜಾರಿಯಾಗಿದ್ದು ವರ್ಷಕ್ಕೆ 85 ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ. ಜನೌಷಧಿಯಿಂದ 20 ಸಾವಿರ ಕೋಟಿ ರೂ. ಉಳಿಯುತ್ತಿದೆ. ಈ ಎಲ್ಲ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಮೊಬೈಲ್ ಬಳಕೆಯಿಂದ 5 ಸಾವಿರ ರೂ.ವರೆಗೆ ಉಳಿತಾಯ!
2014ರ ಮೊದಲ ಭಾರತವು ವಿದೇಶದಲ್ಲಿ ನಿರ್ಮಾಣವಾಗುವ ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಭಾರತವು, ಮೊಬೈಲ್ ನಿರ್ಮಾಣ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಭಾರತದಲ್ಲಿ ಎರಡನೇ ಮೊಬೈಲ್ ತಯಾರಿಕಾ ಕಂಪನಿಗಳಿದ್ದವು. ಈಗ 200 ಫ್ಯಾಕ್ಟರಿಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ, ಮೊಬೈಲ್ ಬಳಕೆಯಿಂದ ಹೇಗೆ ಹಣ ಉಳಿತಾಯವಾಗುತ್ತಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 1 ಜಿಬಿ ಡೇಟಾ ಬಳಿಕೆಗೆ ಕನಿಷ್ಠ 300 ರೂ. ಆಗುತ್ತಿತ್ತು. ಬಿಜೆಪಿ ಆಡಳಿತದಲ್ಲಿ ಅದು ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಈಗ ಏನಾದರೂ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ನೀವು ತಿಂಗಳಿಗೆ 4 ರಿಂದ 5 ಸಾವಿರ ರೂ. ಶುಲ್ಕವನ್ನು ನೀಡ ಬೇಕಾಗುತ್ತಿತ್ತು. ಅಂದರೆ, ಅಷ್ಟು ಹಣವನ್ನು ನೀವು ಉಳಿತಾಯ ಮಾಡುತ್ತಿದ್ದೀರಿ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.