ಬೆಂಗಳೂರು: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ನಂತರ ದೇಶಾದ್ಯಂತ ಪ್ರತಿಭಟನೆ ಗಲಭೆ, ಹತ್ಯೆಗಳು ನಡೆಯುತ್ತಿವೆ. ಕರ್ನಾಟಕದಲ್ಲೂ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಆದರೆ ಗಲಭೆಗಳು, ಹತ್ಯೆಗಳು ಸಂಭವಿಸಬಾರದು ಎಂದು ರಾಜ್ಯ ಪೊಲೀಸರು ಕ್ರಮ ವಹಿಸಿದ್ದಾರೆ.
ರೌಡಿಗಳನ್ನು ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಗಲಭೆ ಸೃಷ್ಟಿಸುವ ಅಪಾಯವಿದೆ. ವಿಶೇಷವಾಗಿ ಜುಲೈ 10ರಂದು ಬಕ್ರೀದ್ ಹಬ್ಬದ ಸಮಯ, ನಂತರದಲ್ಲಿ ಸಾಲುಸಾಲು ಹಿಂದು ಹಬ್ಬಗಳ ಸಮಯದಲ್ಲಿ ಕೋಮುಗಲಭೆಗಳು ಸೃಷ್ಟಿಯಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸ್ಪೆಷಲ್ ಡ್ರೈವ್
ಬೆಂಗಳೂರಿನಲ್ಲಿ ರೌಡಿಗಳು ಕ್ರಿಯಾಶೀಲವಾಗಿರುವುದರ ಜತೆಗೆ ರಾಜಕಾರಣಿಗಳಂತೆ ಪೋಸ್ ನೀಡುತ್ತಿದ್ದಾರೆ. ರೌಡಿಗಳನ್ನು ಬಳಸಿಕೊಂಡು ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ರೌಡಿಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ರೌಡಿಗಳ ಮನೆ, ಅಡ್ಡೆಗಳ ಮೇಲೆ ಕಳೆದ ಮೂರ್ನಾಲ್ಕು ದಿನದಿಂದ ದಾಳಿ ನಡೆಸಲಾಗುತ್ತಿದೆ. ರೌಡಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಹೇಳಿದ್ದಾರೆ.
ಇದನ್ನೂ ಓದಿ | ಜೀವ ಬೆದರಿಕೆ ಇರುವ ಹಿಂದೂಪರ ಹೋರಾಟಗಾರರ ಮಾಹಿತಿ ಕೇಳಿದ ಕೇಂದ್ರ ಗುಪ್ತಚರ ಇಲಾಖೆ
ಹೊಸಪೇಟೆಯಲ್ಲಿ ರೌಡಿ ಪರೇಡ್
ಹೊಸಪೇಟೆ ತಾಲೂಕಿನ ರೌಡಿ ಶೀಟರ್‌ಗಳ ಪರೇಡ್ ಅನ್ನು ಶುಕ್ರವಾರ (ಜುಲೈ 1) ವಿಜಯನಗರ ಎಸ್‌ಪಿ ಡಾ. ಕೆ. ಅರುಣ್ ನಡೆಸಿದರು. ಹೊಸಪೇಟೆ ತಾಲೂಕಿನ ಒಟ್ಟು 206 ರೌಡಿಶೀಟರ್‌ಗಳ ಪೈಕಿ 106 ಜನ ಪರೇಡ್‌ಗೆ ಹಾಜರಾಗಿದ್ದರು. ಯಾವುದೇ ಕಾರಣಕ್ಕೆ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಿದ ಅರುಣ್, ಸನ್ನಡತೆ ತೋರುವವರನ್ನು ರೌಡಿಪಟ್ಟಿಯಿಂದ ತೆಗೆಯುವುದಾಗಿ ಭರವಸೆ ನೀಡಿದರು.
ರೌಡಿ ಶೀಟರ್ ಮತ್ತು ಹೊಸಪೇಟೆ ನಗರಸಭೆ ಮಾಜಿ ಉಪಾಧ್ಯಕ್ಷ ಗುಜರಿ ಅಸ್ಲಾಂ ಈ ವೇಳೆ ಮೊಬೈಲ್‌ನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಇದನ್ನು ಗಮನಿಸಿದ ಎಸ್‌ಪಿ, ಮೊಬೈಲ್ ಕಿತ್ತುಕೊಂಡರು. ʻತಲೆ ಇದೆನಾ ನಿನಗೆ? ಇಲ್ಲೇನೂ ಮಜಾ ಮಾಡೋಕೆ ಬಂದಿದಿಯಾ? ಇವನ್ನ ಒಳಗೆ ಕೂಡಿಸಿʼ ಎಂದು ಸೂಚನೆ ನೀಡಿದರು. ಸಾಮಾನ್ಯ ರೌಡಿಗಳ ಪರೇಡ್ ಅಲ್ಲದೆ, ಕೋಮು ಹಿಂಸಾಚಾರದಲ್ಲಿ ರೌಡಿ ಚಟುವಟಿಕೆ ನಡೆಸಿರುವವರನ್ನು ಪ್ರತ್ಯೇಕ ಪರೇಡ್ ಮಾಡಲಾಯಿತು. ಹಾಜರಾಗದೇ ಇರುವ ರೌಡಿಗಳನ್ನು ಮತ್ತೊಮ್ಮೆ ಪರೇಡ್‌ಗೆ ಕರೆಯಲಾಗುತ್ತದೆ. ಆಗಲೂ ಬರದಿದ್ದರೆ ಎಳೆದುಕೊಂಡು ಬರುತ್ತೇವೆ ಎಂದು ಎಸ್‌ಪಿ ಅರುಣ್ ಎಚ್ಚರಿಕೆ ನೀಡಿದರು.
ಕೊಪ್ಪಳದಲ್ಲಿ ವಾರ್ನಿಂಗ್
ಕೊಪ್ಪಳದಲ್ಲಿ ಭಾನುವಾರ ಎಸ್‌ಪಿ ಅರುಣಾಂಗ್ಷು ಗಿರಿ ನೇತೃತ್ವದಲ್ಲಿ ರೌಡಿ ಪರೇಡ್ ನಡೆಯಿತು. ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ನಡೆದ ರೌಡಿಶೀಟರ್ ಪರೇಡ್‌ನಲ್ಲಿ ಪ್ರತಿಯೊಬ್ಬನನ್ನೂ ವಯಕ್ತಿಕವಾಗಿ ವಿಚಾರಣೆ ನಡೆಸಿ, ಅವರ ಮೇಲಿನ ಪ್ರಕರಣ ಆಧರಿಸಿ ಪ್ರಸ್ತುತ ಅವರ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು. ಪ್ರತಿಯೊಬ್ಬರ ಮೊಬೈಲ್ ತಾಪಸಣೆ ಮಾಡಿದರು. ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಒಟ್ಟು 951 ಜನ ರೌಡಿಶೀಟರ್‌ಗಳಿದ್ದಾರೆ. ಈ ಪೈಕಿ 378 ಜನರನ್ನು ಕರೆಸಿ ಪರೇಡ್ ನಡೆಸಲಾಗಿದೆ. ಅನೇಕರು ಗೈರು ಹಾಜರಾಗಿದ್ದಾರೆ. ಅವರನ್ನು ಮತ್ತೆ ಕರೆಸಲಾಗುವುದು. ಪರೇಡ್‌ಗೆ ಬಾರದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣಾಂಗ್ಷು ಗಿರಿ ತಿಳಿಸಿದರು. ಮಟ್ಕಾ, ವೇಶ್ಯಾವಾಟಿಕೆ, ದೊಂಬಿ, ಗಲಭೆ, ಪ್ರಚೋದನಕಾರಿಯಾಗಿ ಪೋಸ್ಟ್ ಹಾಕುವರ ಮೇಲೆ ರೌಡಿ ಶೀಟರ್ ಓಪನ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೌಡಿ ಶೀಟರ್ ಒಬ್ಬನ ಮೊಬೈಲನ್ನು ಎಸ್‌ಪಿ ಪರಿಶೀಲಿಸಿದರು. ಅದರ ವಾಟ್ಸ್ಆಪ್‌ನಲ್ಲಿ ʻಬರಗೆಟ್ಟವರ ಸಂಘʼ ಎಂಬ ಹೆಸರಿನ ಗ್ರೂಪ್ ನೋಡಿದರು. ಇದೇನಿದು ಬರಗೆಟ್ಟವರ ಸಂಘ? ಏನು ನಿನ್ನ ವಾಟ್ಸ್‌ಆಪ್‌ನಲ್ಲಿ ಬರಿ ಹುಡುಗಿಯರೊಂದಿಗೆ ಚಾಟ್ ಮಾಡಿದ್ದೇ ಇದೆ?. ಏನು ನಿನ್ನ ಕಥೆ ಎಂದು ಪ್ರಶ್ನಿಸಿದರು. ಈ ವ್ಯಕ್ತಿಯ ಬಗ್ಗೆ ನಿಗಾವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಎಸ್‌ಪಿ ಅರುಣಾಂಗ್ಷು ಗಿರಿ, ದೇಶದ ವಿವಿಧೆಡೆ ಕೋಮುಗಲಭೆ, ಪ್ರಚೋದನಕಾರಿ ಹೇಳಿಕೆ, ಗಲಭೆಗಳು ನಡೆಯುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಇದು ನಡೆಯದಂತೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಖತಃ ಇವರನ್ನು ಕರೆಸಿದ್ದು, ಸುಮಾರು ಒಂದು ಸಾವಿರ ಜನರಿಗೆ ದೂರವಾಣಿ ಮೂಲಕವೂ ಎಚ್ಚರಿಕೆ ನೀಡುತ್ತಿದ್ದೇವೆ. ಒಂದು ವಾರ ಈ ಕಾರ್ಯ ನಡೆಯುತ್ತದೆ ಎಂದು ಹೇಳಿದರು.
ಹಾವೇರಿಯಲ್ಲಿ 70 ರೌಡಿಗಳ ಪರೇಡ್
ಹಾವೇರಿಯಲ್ಲಿ ಎಸ್.ಪಿ. ಹನುಮಂತರಾಯ ನೇತೃತ್ವದಲ್ಲಿ ರೌಡಿಗಳಿಗೆ ಪರೇಡ್ ನಡೆಸಿ ವಾರ್ನಿಂಗ್ ನೀಡಲಾಯಿತು. ಹಾವೇರಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಾವೇರಿ ಉಪ ವಿಭಾಗದ 70 ರೌಡಿಗಳ ಪರೇಡ್ ನಡೆಸಿದ್ದು, ಜಿಲ್ಲೆಯ ರೌಡಿಗಳ ಚಟುವಟಿಕೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಕಾನೂನು ಕೈಗೆತ್ತಿಕೊಳ್ಳದಂತೆ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆ ಹಾಳುಗೆಡವದಂತೆ ಎಚ್ಚರಿಕೆ ನೀಡಲಾಗಿದೆ. ರೌಡಿಗಳ ವರ್ತನೆಯಲ್ಲಿ ಸುಧಾರಣೆ ಕಂಡು ಬಂದಲ್ಲಿ ಅಂಥವರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕೆಲವು ಕಡೆಗಳಲ್ಲಿ ರೌಡಿಗಳ ಮನೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸವಣೂರಿನಲ್ಲಿ ಮನೆ ಪರಿಶೀಲನೆ ವೇಳೆ ಗಾಂಜಾ ಹಾಗೂ ಆಯುಧಗಳು ಪತ್ತೆಯಾಗಿತ್ತು ಎಂದು ಎಸ್‌ಪಿ ಹನುಮಂತರಾಯ ಹೇಳಿದರು.
ಶಿವಮೊಗ್ಗದಲ್ಲಿ ವಾರ್ನಿಂಗ್
ಶಿವಮೊಗ್ಗ ನಗರದ ಡಿಎಆರ್ ಮೈದಾನದಲ್ಲಿ ಭಾನುವಾರ ರೌಡಿ ಪರೇಡ್ ನಡೆಯಿತು. ಪ್ರತಿಯೊಬ್ಬ ರೌಡಿಗಳ ಮಾಹಿತಿ ಪಡೆದ ಎಸ್‌ಪಿ ಬಿ.ಎಂ. ಲಕ್ಷ್ಮಿ ಪ್ರಸಾದ, ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. ಶಿವಮೊಗ್ಗ ಉಪ ವಿಭಾಗದ ಆರು ಪೊಲೀಸ್ ಠಾಣೆ ವ್ಯಾಪ್ತಿಯ 175 ರೌಡಿಗಳು ಪರೇಡ್‌ನಲ್ಲಿ ಪಾಲ್ಗೊಂಡಿದ್ದರು. ದೊಡ್ಡಪೇಟೆ, ಕೋಟೆ, ವಿನೋಬನಗರ, ಜಯನಗರ, ತುಂಗಾ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳಿದ್ದರು. ಆಯಾ ಠಾಣೆಗಳ ವ್ಯಾಪ್ತಿಯ ರೌಡಿಗಳನ್ನು ಪ್ರತ್ಯೇಕವಾಗಿ ನಿಲ್ಲಿಸಿ ವಿಚಾರಣೆ ನಡೆಸಲಾಯಿತು.
ಇನ್ನು ಮುಂದೆ ಸಾಲು ಸಾಲು ಹಬ್ಬಗಳು ಬರಲಿವೆ. ಈ ಹಿನ್ನೆಲೆಯಲ್ಲಿ ರೌಡಿಗಳ ಮೇಲೆ ಹೆಚ್ಚು ನಿಗಾ ವಹಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಬಕ್ರೀದ್, ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬಗಳಿವೆ. ಕೋಮು ಸೂಕ್ಷ್ಮ ವಾತಾವರಣ ಇರುವುದರಿಂದ ರೌಡಿಗಳ ಮೇಲೆ ಹೆಚ್ಚು ಗಮನ ವಹಿಸಲಾಗುತ್ತಿದೆ. ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳ ಸಾಗಣೆ ಮಾಡುವ ಸಾದ್ಯತೆ ಇದೆ. ಅಂತಹವರಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಿದೆ. ಈಗಾಗಲೇ ಚೋರ್ ಸಲೀಂ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗಿದೆ. ಕಡೇಕಲ್ ಹಬೀಬ್ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಹಾಕಲು ಶಿಫಾರಸು ಮಾಡಲಾಗಿದೆ ಲಕ್ಷ್ಮಿ ಪ್ರಸಾದ ತಿಳಿಸಿದರು.
ಬಕ್ರೀದ್ ಹಿನ್ನೆಲೆ ಸಭೆ
ಬಕ್ರೀದ್ ಹಬ್ಬದ ವೇಳೆ ಅನಧಿಕೃತವಾಗಿ ಪ್ರಾಣಿಗಳ ವಧೆ ಹಾಗೂ ಪ್ರಾಣಿ ಸಾಗಾಣಿಕೆ ಮಾಡುವುದನ್ನು ತಡೆಯುವ ಕುರಿತು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು. ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮ ಒಂಟೆ, ಗೋವು ಹತ್ಯೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಕ್ರೀದ್ ವೇಳೆ ಕಾನೂನುಬಾಹಿರ ಜಾನುವಾರುಗಳ ವಧೆ ಮತ್ತು ಸಾಗಾಣಿಕೆ ಕಂಡು ಬಂದಲ್ಲಿ ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಚಿಸಲಾಗಿರುವ ತಂಡ ಸೂಕ್ತ ವಹಿಸಬೇಕು ಎಂದರು.
ಗಲಭೆ, ದೊಂಬಿಗಳು ಉಂಟಾದಲ್ಲಿ ತಕ್ಷಣ ಪೊಲೀಸ್ ಇಲಾಖೆಯ ತಂಡಕ್ಕೆ ತಿಳಿಸಬೇಕು. ವಿಶೇಷ ತಂಡವು ಹಬ್ಬದ ಸಮಯದಲ್ಲಿ ನಿಗದಿಪಡಿಸಲಾದ ಸಮಯದವರೆಗೆ ಕರ್ತವ್ಯನಿರತರಾಗಿದ್ದು, ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಆಗದಂತೆ ನಿಗಾ ವಹಿಸಬೇಕು ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಾದ್ಯಂತ ಜುಲೈ 10 ರಂದು ಶಾಂತಿಯುತ ಬಕ್ರೀದ್ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಬಕ್ರೀದ್ ಹಬ್ಬ ದಿನದಂದು ಯಾವುದೇ ಮೆರವಣಿಗೆ ನಡೆಸುವಂತಿಲ್ಲ. ಕಾನೂನು ಸುವ್ಯವಸ್ಥೆ ಮತ್ತು ಶಾಂತಿಗೆ ಧಕ್ಕೆ ತರುವಂತ ಯಾವುದೇ ಚಟುವಟಿಕೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಇದನ್ನೂ ಓದಿ | ನೂಪುರ್ ಶರ್ಮಾಗೆ ಸುಪ್ರೀಂ ತಪರಾಕಿ: ನಾಲಿಗೆ ಹರಿಬಿಡುವವರಿಗೆ ಕಪಾಳಮೋಕ್ಷ