Site icon Vistara News

Karnataka Politics : ಕೆಲವೇ ದಿನದಲ್ಲಿ 30-40 ಶಾಸಕರು ಕಾಂಗ್ರೆಸ್‌ನಿಂದ ಔಟ್‌ ಎಂದ ಕಟೀಲ್‌

Nalin Kumar Kateel Congress

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮತ್ತಿತರ ಕಾಂಗ್ರೆಸ್‌ ನಾಯಕರು ಆಪರೇಷನ್‌ ಹಸ್ತ (Operation Hasta) ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ. ಅದರ ನಡುವೆಯೇ ಹಸ್ತದೊಳಗೇ ಆಪರೇಷನ್‌ ನಡೆಯುತ್ತಿರುವುದು ಅವರಿಗೆ ಗೊತ್ತಾಗುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ 30-40 ಶಾಸಕರು ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಹೇಳಿದ್ದಾರೆ.

ಅವರು ಮಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸ್‌ನ ಒಳಗೆ ಆಂತರಿಕ ಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ಟೀಮ್‌ ಡಿವೈಡ್‌ ಆಗಿದೆ. ಅದರ ಮಧ್ಯೆ ಮರಿ ಖರ್ಗೆ (ಪ್ರಿಯಾಂಕ್‌ ಖರ್ಗೆ) ಮುಖ್ಯಮಂತ್ರಿ ಪಟ್ಟಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಾಂಗ್ರೆಸ್ ಡಿವೈಡ್ ಆಗ್ತಿದೆ, ಹಸ್ತದ ಒಳಗೆ ಹಸ್ತದ ಆಪರೇಷನ್ ಆಗುತ್ತಿದೆ. ಕೆಲವೇ ದಿನಗಳಲ್ಲಿ 30-40 ಶಾಸಕರು ಹೊರಗೆ ಬರ್ತಾರೆ ಎಂದು ಅವರು ಹೇಳಿದರು.

ಬೆಳಗಾವಿ ಅಧಿವೇಶನ ಮುಗಿದ ಕೂಡಲೇ ಕಾಂಗ್ರೆಸ್ ನಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ. ಈ ಭಯದಿಂದ ಕಾಂಗ್ರೆಸ್ ನವರು ಬಿಜೆಪಿಯಿಂದ‌ ಹಲವಾರು ಮಂದಿ ಬರ್ತಾರೆ ಎಂದು ದಾರಿ ತಪ್ಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಯಾರೂ ಹೋಗ್ತಾ ಇಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ʻʻಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹತ್ತಾರು ಟವೆಲ್‌ಗಳು ಬಿದ್ದಿವೆ. ಸತೀಶ್‌ ಜಾರಕಿಹೊಳಿ, ಜಿ. ಪರಮೇಶ್ವರ್ ಜೊತೆಗೆ ದಲಿತ ಸಿಎಂ ಕಾರ್ಡ್ ಹೊರಟಿದೆ. ಪ್ರಿಯಾಂಕ್ ಖರ್ಗೆ, ಡಿಕೆಶಿ ಎಲ್ಲರೂ ಸಿಎಂ ಹುದ್ದೆಗಾಗಿ ಹೋರಾಟ ಮಾಡುವ ಕಾರಣ ಸರ್ಕಾರ ಬೀಳಬಹುದು ಎಂದು ನಳಿನ್‌ ಕುಮಾರ್‌ ಕಟೀಲ್‌ ಆಶಾವಾದ ವ್ಯಕ್ತಪಡಿಸಿದರು.

ʻʻಆರು ತಿಂಗಳಾದರೂ ಸರ್ಕಾರ ಇನ್ನೂ ಟೇಕಾಫ್ ಆಗ್ತಾ ಇಲ್ಲ. ಅಭಿವೃದ್ಧಿ ಕಾರ್ಯ ಆಗ್ತಾ ಇಲ್ಲ. ಬರ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಉಡುಪಿಯಲ್ಲಿ ಹಾಡಹಗಲೇ ನಾಲ್ವರ ಹತ್ಯೆ ಆಗಿದೆ. ಶಾಂತಿ ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆʼʼ ಎಂದು ನಳಿನ್‌ ಕುಮಾರ್‌ ಆಪಾದಿಸಿದರು.

ʻʻರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿ ತಲವಾರು ತೋರಿಸಿದವರನ್ನೂ ಬಂಧಿಸಲಾಗುತ್ತಿಲ್ಲ. ರಾಷ್ಟ್ರ ವಿರೋಧಿ ಶಕ್ತಿಗಳು ರಾಜ್ಯದಲ್ಲಿ ಎದ್ದು ನಿಂತಿವೆʼʼ ಎಂದು ಹೇಳಿದ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸಗಳು ನಡೆಯುತ್ತಿವೆ. ರಾಜ್ಯ ಸರ್ಕಾರದಿಂದ ಒಂದು ರೂ. ಬಿಡಿಗಾಸು ಕೂಡಾ ಬಿಡುಗಡೆಯಾಗಿಲ್ಲ. ಅಧಿಕಾರಿಗಳ ಸಂಬಳ ಕೊಡಲು ಕೂಡಾ ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರ್ನಾಲ್ಕು ತಿಂಗಳು‌ ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆʼʼ ಎಂದು ನಳಿನ್‌ ಕುಮಾರ್‌ ಕಟೀಲ್‌ ನುಡಿದರು. ರಾಜ್ಯ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ನಳಿನ್‌ ಆಪಾದಿಸಿದರು.

ಇದನ್ನೂ ಓದಿ : Next CM: ಮತ್ತೆ ಕೇಳಿಬಂದ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಕೂಗು; ಕಾಂಗ್ರೆಸ್‌ನಲ್ಲಿ ತಲ್ಲಣ

ನಾಳೆ ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆ

ನವೆಂಬರ್‌ 22ರಂದು ಮಂಗಳೂರಿಗೆ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಆಗಮಿಸಲಿದ್ದಾರೆ. ಅವರನ್ನು ಮಂಗಳೂರು ಏರ್ಪೋರ್ಟ್‌ಗೆ ಹೋಗಿ ಸ್ವಾಗತ ಮಾಡುತ್ತೇವೆ. ಅಲ್ಲಿಂದ ಮೆರವಣಿಗೆ ಮೂಲಕ ಮಂಗಳೂರಿನ ಸಿ.ವಿ.ನಾಯಕ್ ಹಾಲ್‌ಗೆ ಕರೆ ತರುತ್ತೇವೆ. ಅಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ಇದಾದ ಬಳಿಕ ಅವರು ಕೆಲವು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version